ADVERTISEMENT

ದೇವರಹಿಪ್ಪರಗಿ | ದೀಪಾವಳಿಗೆ ಲಕ್ಷ್ಮೀ ಪೂಜೆಯ ಮೆರುಗು

ಹೂ-ಹಾರ, ವಿದ್ಯುತ್ ದೀಪಗಳೊಂದಿಗೆ ಅಲಂಕಾರ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 7:48 IST
Last Updated 22 ಅಕ್ಟೋಬರ್ 2025, 7:48 IST
ದೇವರಹಿಪ್ಪರಗಿಯಲ್ಲಿ ದೀಪಾವಳಿ ಅಮವಾಸ್ಯೆಯ ಅಂಗವಾಗಿ ಹೂ, ಹಣ್ಣು, ಕುಂಬಳಕಾಯಿ ಮಾರಾಟ ಭರದಿಂದ ಜರುಗಿತು 
ದೇವರಹಿಪ್ಪರಗಿಯಲ್ಲಿ ದೀಪಾವಳಿ ಅಮವಾಸ್ಯೆಯ ಅಂಗವಾಗಿ ಹೂ, ಹಣ್ಣು, ಕುಂಬಳಕಾಯಿ ಮಾರಾಟ ಭರದಿಂದ ಜರುಗಿತು    

ದೇವರಹಿಪ್ಪರಗಿ: ಬೆಳಕಿನ ಹಬ್ಬ ದೀಪಾವಳಿಯ ಅಮಾವಾಸ್ಯೆ ಪೂಜೆಯ ಅಂಗವಾಗಿ ಹೂ, ಹಣ್ಣು, ಕುಂಬಳಕಾಯಿ ಸೇರಿದಂತೆ ಪಟಾಕಿ, ಅಲಂಕಾರಿಕ ವಸ್ತುಗಳ ಮಾರಾಟ ಭರದಿಂದ ಜರುಗಿತು.

ಪಟ್ಟಣದಲ್ಲಿ ದೀಪಾವಳಿ ಅಮಾವಾಸ್ಯೆಯನ್ನು ಸೋಮವಾರ ಸಾಯಂಕಾಲ ನಂತರ, ಹಾಗೂ ಮಂಗಳವಾರ ಎರಡು ದಿನ ಆಚರಿಸಲಾಯಿತು. ವ್ಯಾಪಾರಸ್ಥರು ತಮ್ಮ ಅಂಗಡಿ, ಮಾರಾಟ ಮಳಿಗೆಗೆಳ ಲಕ್ಷ್ಮೀ- ಕುಬೇರರ ಪೂಜೆಗಾಗಿ ಬಾಳೇಗಿಡ, ಕಬ್ಬು, ತೆಂಗಿನ ಪರಕೆ, ಶೃಂಗಾರ ವಸ್ತಗಳ ಸಹಿತ ಖಾತೆಪುಸ್ತಕ, ಹೂಹಣ್ಣುಗಳನ್ನು ಮಂಗಳವಾರ ಬೆಳಿಗ್ಗೆಯೇ ಖರೀದಿಸಿದರು.

ಪೂಜೆಗಾಗಿ ಸೋಮವಾರ ಹಾಗೂ ಮಂಗಳವಾರ ರಾತ್ರಿ ಅಂಗಡಿ ಮಳಿಗೆಗಳನ್ನು ಹೂ-ಹಾರ, ವಿದ್ಯುತ್ ದೀಪಗಳೊಂದಿಗೆ ಸಿಂಗರಿಸಿದರು. ಹೊಸ ಬಟ್ಟೆಗಳನ್ನು ಧರಿಸಿ ಮನೆ ಮಂದಿಯೆಲ್ಲಾ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಹಿಳೆಯರು ವಿಶೇಷವಾಗಿ ಮುತ್ತೈದೆಯರು ಪೂಜೆ ನೆರವೇರಿಸಿದರು. ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಂಜೆ ಆರಂಭಗೊಂಡ ಪೂಜಾ ವಿಧಿವಿಧಾನಗಳು ತಡ ಮಧ್ಯರಾತ್ರಿಯವರೆಗೆ ಜರುಗಿದವು.

ADVERTISEMENT

ಲಕ್ಷ್ಮಿ ಪೂಜೆಯ ಅಂಗವಾಗಿ ಹೂ-ಹಾರಗಳನ್ನು ಖರೀದಿಸಲು ಜನ ಬೆಳಿಗ್ಗೆಯೇ ಆಗಮಿಸಿದ್ದರು. ಇದರಿಂದ ಮಾರುಕಟ್ಟೆಯಲ್ಲಿ ಜಾತ್ರೆಯಂತೆ ಜನಸಂದಣಿ ಕಂಡು ಬಂತು. ಚೆಂಡು ಹೂವು, ಶಾವಂತಿಗೆ ಹೂಗಳ ಬೆಲೆ ಕಿಲೋ ಒಂದಕ್ಕೆ ₹100ರಿಂದ ₹200, ಬಾಳೆದಿಂಡು ಜೋಡಿ ಒಂದಕ್ಕೆ ₹40-₹100, ಐದು ತರದ ಹಣ್ಣುಗಳಿಗೆ ₹40-₹250, ಕುಂಬಳಕಾಯಿ ₹50- ₹100, ಹೂವಿನ ಹಾರ ₹40-₹100, ಗಳವರೆಗೆ ಮಾರಲ್ಪಟ್ಟವು.

ಅಮಾವಾಸ್ಯೆ ದಿನ ಮಹಿಳೆಯರು ಸೇರಿದಂತೆ ಮನೆಯವರೆಲ್ಲರೂ ಮನೆ, ಅಂಗಡಿ, ವಾಹನಗಳನ್ನು ಹೂವುಗಳಿಂದ ತಳಿರು ತೋರಣಗಳನ್ನು ಸಿದ್ಧಪಡಿಸಿ ಸಿಂಗರಿಸಿದರು. ನಂತರ ಶಾಸ್ತ್ರೋಕ್ತವಾಗಿ ಲಕ್ಷ್ಮೀ ಪೂಜೆ ಕೈಗೊಂಡು ನಂತರ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ನೆರವೇರಿಸಿದರು. ಚಿಕ್ಕ ಮಕ್ಕಳು ಹೊಸ ಬಟ್ಟೆಗಳೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ದೇವರಹಿಪ್ಪರಗಿಯಲ್ಲಿ ಮಂಗಳವಾರ ಅಮವಾಸ್ಯೆ ಅಂಗವಾಗಿ ಬೆಳಿಗ್ಗೆ ಲಕ್ಷ್ಮೀ ಪೂಜೆ ನೆರವೇರಿಸಿದ ಮಹಿಳೆಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.