ADVERTISEMENT

ಪಶು ವೈದ್ಯಕೀಯ ಆಸ್ಪತ್ರೆ | ಕಳಪೆ ಕಾಮಗಾರಿ, ಅವ್ಯವಹಾರದ ಆರೋಪ

ಅಮರನಾಥ ಹಿರೇಮಠ
Published 4 ಜನವರಿ 2026, 3:47 IST
Last Updated 4 ಜನವರಿ 2026, 3:47 IST
ದೇವರಹಿಪ್ಪರಗಿ ಪಟ್ಟಣದ ಪಶು ಆಸ್ಪತ್ರೆಯ ಆವರಣದಲ್ಲಿ ವಿಳಂಬವಾಗಿ ಆರಂಭಗೊಂಡು ಆಮೆಗತಿ ವೇಗದಲ್ಲಿ ಸಾಗಿರುವ ನೂತನ ಪಶುವೈದ್ಯಕೀಯ ಆಸ್ಪತ್ರೆಯ ಕಟ್ಟಡ ಕಾರ್ಯ
ದೇವರಹಿಪ್ಪರಗಿ ಪಟ್ಟಣದ ಪಶು ಆಸ್ಪತ್ರೆಯ ಆವರಣದಲ್ಲಿ ವಿಳಂಬವಾಗಿ ಆರಂಭಗೊಂಡು ಆಮೆಗತಿ ವೇಗದಲ್ಲಿ ಸಾಗಿರುವ ನೂತನ ಪಶುವೈದ್ಯಕೀಯ ಆಸ್ಪತ್ರೆಯ ಕಟ್ಟಡ ಕಾರ್ಯ   

ದೇವರಹಿಪ್ಪರಗಿ: ಪಟ್ಟಣದ ನೂತನ ಪಶುವೈದ್ಯಕೀಯ ಆಸ್ಪತ್ರೆಯ ಕಟ್ಟಡ ನಿರ್ಮಾಣ ಹಂತದಲ್ಲಿಯೇ ಸಿಮೆಂಟ್ ಕೊರತೆ ಸಹಿತ ಕಳಪೆ ಕಾಮಗಾರಿಯಿಂದ ವಿಳಂಬವಾಗಿ ಸಾಗಿದ್ದು, ಸರ್ಕಾರಿ ಸ್ವಾಮ್ಯದ ನಿರ್ಮಾಣ ಸಂಸ್ಥೆಯಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಪಟ್ಟಣದ ಪಶು ಆಸ್ಪತ್ರೆಯ ಆವರಣದಲ್ಲಿ 2023ರ ನವೆಂಬರ್ ಒಂದರ ರಾಜ್ಯೋತ್ಸವ ದಿನದಂದು ಅಂದಾಜು ₹ 50.13 ಲಕ್ಷ ವೆಚ್ಚದಲ್ಲಿ ಶಾಸಕ ರಾಜುಗೌಡ ಪಾಟೀಲ (ಕುದರಿ ಸಾಲವಾಡಗಿ) ಭೂಮಿಪೂಜೆ ನೆರವೇರಿಸಿದ್ದ ಕಟ್ಟಡ ಸಿಮೆಂಟ್‌ ಕೊರತೆಯಿಂದ ಬಹುತೇಕ ತಿಂಗಳುಗಳಿಂದ ಸ್ಥಗಿತಗೊಂಡಿದೆ.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಅಜೀಜ್ ಯಲಗಾರ ಮಾತನಾಡಿ, 2022-23ನೇ ಸಾಲಿನ ಆರ್‌.ಡಿ.ಎಫ್ ಟ್ರ್ಯಾಂಚ್ ಅಡಿಯಲ್ಲಿ ಪಟ್ಟಣದ ಪಶುವೈದ್ಯಕೀಯ ಆಸ್ಪತ್ರೆ ಸೇರಿದಂತೆ ರಾಜ್ಯದ 57 ಪಶು ವೈದ್ಯ ಸಂಸ್ಥೆಗಳ ನೂತನ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿತು. ಈ ಕಾಮಗಾರಿಗಳನ್ನು ರಾಜ್ಯ ಸರ್ಕಾರಿ ಸ್ವಾಮ್ಯದ ನಿರ್ಮಾಣ ಸಂಸ್ಥೆಯಾದ ಕರ್ನಾಟಕ ಸ್ಟೇಟ್ ಹ್ಯಾಬಿಟೇಟ್ ಸೆಂಟರ್, ಬೆಂಗಳೂರು ಇವರಿಗೆ ವಹಿಸಲಾಯಿತು.

ADVERTISEMENT

ನಂತರ ನೂತನ ಆಸ್ಪತ್ರೆಗಾಗಿ ಭೂಮಿಪೂಜೆ ನೆರವೇರಿಸಿದ ನಂತರ ಆರಂಭದ ಕಾಂಕ್ರೀಟ್ ಕಂಬಗಳಿಗಾಗಿ ಕಬ್ಬಿಣದ ಫಿಲ್ಲರ್‌ಗಳನ್ನು ಅಳವಡಿಸಿ ಆಮೇಲೆ ಯಾವುದೇ ಕಾರ್ಯ ಆರಂಭಗೊಳ್ಳದೇ ಕಾರ್ಯ ನಿಂತಿತು. ನಂತರ ಸಂಸ್ಥೆಯ ಯಾವ ಅಧಿಕಾರಿಗಳು ಭೇಟಿ ನೀಡದ ಹಿನ್ನೆಲೆಯಲ್ಲಿ ಇಡೀ ಪ್ರದೇಶ ಸಾರ್ವಜನಿಕ ಶೌಚಾಲಯವಾಗಿ ಬದಲಾಗಿ ಈಗ ಪುನಃ ಕಟ್ಟಡ ನಿರ್ಮಾಣ ಆರಂಭಿಸಲಾಗಿದೆ.

‌ಆದರೆ ಕಾಮಗಾರಿ ಗುಣಮಟ್ಟ ಮಾತ್ರ ಅತ್ಯಂತ ಕಳಪೆಯಾಗಿದ್ದು, ಸಿಮೆಂಟ್ ಕೊರತೆಯಿಂದ ಆಗಾಗ ನಿಲ್ಲುತ್ತಲೇ ಸಾಗಿದೆ. ಈ ಕುರಿತು ಕೇಳಬೇಕೆಂದರೆ ಕಟ್ಟಡ ಕಾರ್ಮಿಕರ ಹೊರತು ಯಾರು ಸಮೀಪ ಸುಳಿಯುತ್ತಿಲ್ಲ.

ತಾಲ್ಲೂಕು ಕೇಂದ್ರದಲ್ಲಿ ಇರುವ ಪಶು ಆಸ್ಪತ್ರೆಯ ಕಟ್ಟಡ ಚಿಕ್ಕದು ಹಾಗೂ ಹಳೆಯದಾದ ಕಾರಣ ನೂತನ ಕಟ್ಟಡ ಆರಂಭಗೊಂಡಿದೆ. ಆದರೆ ಈ ಕಟ್ಟಡದ ನಿರ್ಮಾಣ ನೋಡಿದರೆ ಇದು ₹ 50.13 ಲಕ್ಷ ವೆಚ್ಚದ ಕಟ್ಟಡವೇ ಎಂಬ ಅನುಮಾನ ಬರುವಂತಿದೆ. ಆದರೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು ಖುದ್ದಾಗಿಯೇ ಸ್ಥಳಕ್ಕೆ ಭೇಟಿ ನೀಡಿ ನಿರ್ಮಾಣ ಕಾರ್ಯ ಪರಿಶೀಲಿಸಬೇಕು ಎಂದು ಆಗ್ರಹಿಸುತ್ತಾರೆ.

ಸರ್ಕಾರಿ ಸ್ವಾಮ್ಯದ ಸಂಸ್ಥೆಯಿಂದ ಸಂಪೂರ್ಣ ನಿರ್ಲಕ್ಷ್ಯ ಕಳಪೆ ಕಾಮಗಾರಿ, ವಿಳಂಬ ಮಾಡಲಾಗಿದೆ. ಸ್ಥಳೀಯ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರ ಪತ್ರಕ್ಕೂ ನಿರ್ಮಾಣ ಸಂಸ್ಥೆ ಸ್ಪಂದಿಸದೇ ಇರುವುದು ದುರಂತ

ನೂತನ ಪಶುಆಸ್ಪತ್ರೆಯ ನಿರ್ಮಾಣ ಕಾರ್ಯ ಸಂಪೂರ್ಣ ನಿಂತು ಹೋಗಿತ್ತು. ಇದರ ಕುರಿತು ಇಲಾಖೆಯ ಉಪನಿರ್ದೇಶಕರಿಗೆ ಪತ್ರ ಬರೆದು ಕ್ರಮ ವಹಿಸಲಾಗಿದೆ.
ಡಾ.ರಾಮು ರಾಠೋಡ ಸಹಾಯಕ ನಿರ್ದೇಶಕ ಪಶು ಆಸ್ಪತ್ರೆ ದೇವರಹಿಪ್ಪರಗಿ
ಕಟ್ಟಡ ಸುಸಜ್ಜಿತ ಜನಪಯೋಗಕ್ಕೆ ದೊರೆಯುವಂತೆ ಮಾಡುವುದು ಅಗತ್ಯ. ಈ ಕುರಿತು ಶಾಸಕರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು
ಬಸವರಾಜ ತಾಳಿಕೋಟಿ ಜಯರಾಮ ನಾಡಗೌಡ ನಾಗಯ್ಯ ಪಂಚಾಳಮಠ ರೈತ ಮುಖಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.