ADVERTISEMENT

ದೇವರಹಿಪ್ಪರಗಿ: ಕಿರಿದಾದ ಹೆದ್ದಾರಿ; ಸಂಚಾರ ದಟ್ಟಣೆ

ಸಾರ್ವಜನಿಕರಿಗೆ ತಲೆ ನೋವಾದ ವಾಹನಗಳ ಭರಾಟೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:10 IST
Last Updated 29 ಜನವರಿ 2026, 6:10 IST
ದೇವರಹಿಪ್ಪರಗಿ ಪಟ್ಟಣದ ಮೊಹರೆ ಹಣಮಂತ್ರಾಯ ವೃತ್ತದಲ್ಲಿ ಕಂಡು ಬಂದ ಭಾರಿ ಗಾತ್ರದ ವಾಹನದಿಂದ ಇತರೆ ವಾಹನಗಳು ಸಾಲಾಗಿ ನಿಂತಿದ್ದವು
ದೇವರಹಿಪ್ಪರಗಿ ಪಟ್ಟಣದ ಮೊಹರೆ ಹಣಮಂತ್ರಾಯ ವೃತ್ತದಲ್ಲಿ ಕಂಡು ಬಂದ ಭಾರಿ ಗಾತ್ರದ ವಾಹನದಿಂದ ಇತರೆ ವಾಹನಗಳು ಸಾಲಾಗಿ ನಿಂತಿದ್ದವು   

ಅಮರನಾಥ ಹಿರೇಮಠ

ದೇವರಹಿಪ್ಪರಗಿ: ಭಾರಿ ವಾಹನಗಳ ಭರಾಟೆ, ಕಿರಿದಾದ ರಾಷ್ಟ್ರೀಯ ಹೆದ್ದಾರಿ, ಸಾರ್ವಜನಿಕರಿಗೆ ತಲೆನೋವಾದ ಸಂಚಾರ ವ್ಯವಸ್ಥೆ. ಇವು ದೇವರಹಿಪ್ಪರಗಿ ತಾಲ್ಲೂಕು ಕೇಂದ್ರ ಹಾಗೂ ಪಟ್ಟಣದ ಸಾರ್ವಜನಿಕರ ನಿತ್ಯ ಸಮಸ್ಯೆಗಳಾಗಿವೆ.

ಹೌದು! ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗಿ ಮಿತಿ ಮೀರುತ್ತಿದ್ದು, ಜೊತೆಗೆ ಎಲ್ಲೆಂದರಲ್ಲಿ ನಿಲ್ಲುವ ವಾಹನಗಳು ಸಂಚಾರ ವ್ಯವಸ್ಥೆ ಉಲ್ಬಣಗೊಳ್ಳಲು ಕಾರಣವಾಗಿದೆ.

ADVERTISEMENT

ವಿಜಯಪುರ ರಸ್ತೆಯಲ್ಲಿನ ಬಿಎಲ್‌ಡಿಇ ಸಂಸ್ಥೆಯ ಎ.ಬಿ. ಸಾಲಕ್ಕಿ ಕಾಲೇಜು ಹಾಗೂ ಮೊಹರೆ ಹಣಮಂತರಾಯ ವೃತ್ತದ ನಡುವಿನ ರಸ್ತೆ ಅತ್ಯಂತ ಜನಸಂದಣಿಯಿಂದ ಕೂಡಿದ ರಸ್ತೆಯಾಗಿದೆ. ಇದು ರಾಷ್ಟ್ರೀಯ ಹೆದ್ದಾರಿ-50 ಸಹ ಆಗಿದೆ. ಇದೇ ಹೆದ್ದಾರಿಯಲ್ಲಿ ಈಗ ಭಾರಿ ಗಾತ್ರದ ವಾಹನಗಳು ಹಾಗೂ ಕಬ್ಬಿನ ಲಾರಿ ಹಾಗೂ ಟ್ರ್ಯಾಕ್ಟರ್‌ಗಳ ಓಡಾಟ ಸಾಮಾನ್ಯವಾಗಿದೆ. ಅದರಲ್ಲೂ ಬಸ್ ನಿಲ್ದಾಣವು ಸಹ ಇದೇ ರಸ್ತೆಯಲ್ಲಿರುವ ಕಾರಣ ಪ್ರತಿ ನಿಮಿಷಕ್ಕೆ ಬಸ್‌ಗಳ ಓಡಾಟ ಸಾಮಾನ್ಯವಾಗಿದೆ.

‘ಬಸ್ ಸಹಿತ ಭಾರಿ ಗಾತ್ರದ ವಾಹನಗಳ ಓಡಾಟದ ಪರಿಣಾಮವಾಗಿ ಬೆಳಿಗ್ಗೆ ಹಾಗೂ ಸಂಜೆ ಸಂಚಾರ ದಟ್ಟಣೆ ಸಾಮಾನ್ಯವಾಗಿದ್ದು, ಸಂಜೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಸ್ತೆ ದಾಟಲು ಪರದಾಡುವಂತಾಗಿದೆ. ಆದ್ದರಿಂದ ಪಟ್ಟಣದ ಈ 3 ಕಿ.ಮೀ. ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸುವುದರ ಮೂಲಕ ಅಪಘಾತರಹಿತ ವಲಯವನ್ನಾಗಿ ಮಾಡುವುದು ಈಗ ಅಗತ್ಯವಾಗಿದೆ’ ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಸ್ತೆ ನಿಯಮಗಳನ್ನು ಪಾಲನೆ ಮಾಡದೇ ಇರುವುದು ಹಾಗೂ ಇಲಾಖೆಗಳು ಕೈಗೊಳ್ಳುವ ಕ್ರಮಗಳಿಗೆ ಸ್ಪಂದಿಸದೇ ಇರುವ ಸಾರ್ವಜನಿಕರ ನೀತಿಯ ಕುರಿತು ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತ ಬೇಸರಗೊಂಡಿದೆ. ಇದರಿಂದ ಅವರು ಸಹ ದಿಟ್ಟ ಕ್ರಮಕ್ಕೆ ಮುಂದಾಗುತ್ತಿಲ್ಲ’ ಎಂದು ಸ್ಥಳೀಯರಾದ ನಜೀರ್ ಕಲಕೇರಿ ಹೇಳಿದರು.

‘ಬಸ್ ನಿಲ್ದಾಣದ ಮುಂದೆ ಮುಖ್ಯರಸ್ತೆಯಲ್ಲಿ ಖಾಸಗಿಯವರು ವಾಹನ ನಿಲ್ಲಿಸಿ ಹಣ್ಣು, ನೀರು ಕೊಳ್ಳುವುದು, ಹೋಟೆಲ್‌ಗಳಲ್ಲಿ ಉಪಾಹಾರ ಸೇವಿಸುವುದು ಸಾಮಾನ್ಯವಾಗಿದೆ. ಇದರಿಂದ ವಾಹನಗಳು ಸಾಲಾಗಿ ನಿಂತ ಪ್ರಸಂಗಗಳನ್ನು ನಿತ್ಯ ಕಾಣುತ್ತೇವೆ. ಇಲ್ಲಿ ಪೊಲೀಸರು ನಿಲ್ಲದ ಕಾರಣ ಹೇಳುವವರು, ಕೇಳುವವರು ಇಲ್ಲದಂತಾಗಿದ್ದು, ಇದಕ್ಕೆ ದ್ವಿಪಥ ರಸ್ತೆಯ ನಿರ್ಮಾಣವೇ ಪರಿಹಾರ ಹಾಗೂ ಅನಿವಾರ್ಯ’ ಎಂದು ಒತ್ತಾಯಿಸಿದರು.

‘ಪಟ್ಟಣದ ಜನತೆಯ ಸುರಕ್ಷತಾ ದೃಷ್ಟಿಯಿಂದ ವಿಜಯಪುರ ರಸ್ತೆಯ ಬಸವೇಶ್ವರ ವೃತ್ತದಿಂದ ಸಿಂದಗಿ ರಸ್ತೆಯ ಮಲ್ಲಯ್ಯ ದೇವಸ್ಥಾನದ ವರೆಗಿನ 2 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನೇ ದ್ವಿಪಥ ರಸ್ತೆಯನ್ನಾಗಿ ಮಾರ್ಪಡಿಸಬೇಕಿದೆ’ ಎಂದು ನಮ್ಮೂರ ಧಾಮದ ರೂವಾರಿ ವಾಸುದೇವ ತೋಳಬಂದಿ, ರಮೇಶಬಾಬು ಮೆಟಗಾರ ಹಾಗೂ ರಾವುತ ಅಗಸರ ಮನವಿ ಮಾಡಿದ್ದಾರೆ.

ರಮೇಶ ಜಿಗಜಿಣಗಿ
ರಾಜುಗೌಡ ಪಾಟೀಲ 
ದೇವರಹಿಪ್ಪರಗಿ ಪಟ್ಟಣದ ಮುಖ್ಯರಸ್ತೆಯನ್ನು ದ್ವಿಪಥವಾಗಿ ಮಾರ್ಪಡಿಸುವ ಕುರಿತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜೊತೆ ಮಾತನಾಡುವೆ
ರಮೇಶ ಜಿಗಜಿಣಗಿ ಸಂಸದ ವಿಜಯಪುರ
ದೇವರಹಿಪ್ಪರಗಿ ಪಟ್ಟಣಕ್ಕೆ 2 ಕಿ.ಮೀ. ದ್ವಿಪಥ ರಸ್ತೆ ಅತ್ಯಂತ ಅಗತ್ಯವಾಗಿದೆ. ಇದರ ಕುರಿತು ಕ್ರಮ ವಹಿಸಲಾಗುವುದು
ರಾಜುಗೌಡ ಪಾಟೀಲ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.