ವಿಜಯಪುರ: ‘ಹಿಂದುಳಿದ ವರ್ಗಗಳ, ಶೋಷಿತರ ಅಭಿವೃದ್ಧಿಗೆ ಶ್ರಮಿಸಿದ ಡಿ. ದೇವರಾಜ ಅರಸು ಅವರು ಉಳುವವನೇ ಭೂ ಒಡೆಯ ಎನ್ನುವ ಭೂ ಸುಧಾರಣಾ ಕಾಯಿದೆ ಜಾರಿಗೆ ತರುವ ಮೂಲಕ ಸಾಮಾಜಿಕ ಪರಿವರ್ತನೆ ಹಾಗೂ ಸಾಮಾಜಿಕ ಏಳಿಗೆಗೆ ಶ್ರಮಿಸಿದ್ದಾರೆ’ ಎಂದು ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಬುಧವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಡಾ. ಆನಂದ ಕೆ. ಮಾತನಾಡಿ, ‘ಅರಸು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿ, ಅವರು ನಾಡು ನುಡಿಗಾಗಿ ಶ್ರಮಿಸಿದ್ದಾರೆ’ ಎಂದರು.
ಏಕ್ಸಲಂಟ್ ಕಾಲೇಜಿನ ಉಪ ಪ್ರಾಂಶುಪಾಲ ಮಂಜುನಾಥ ಜುನಗೊಂಡ ಮಾತನಾಡಿ, ‘ಹಿಂದುಳಿದ ವರ್ಗಗಳ ಆಶಾದೀಪ, ಆರ್ಥಿಕ, ಶೈಕ್ಷಣಿಕ ಸಮಗ್ರ ಚಿಂತನೆಗಳ ಕಾರ್ಯಕ್ರಮ ರೂಪಿಸಿ ಅನುಷ್ಠಾನಕ್ಕೆ ತಂದರು. ಈ ಮಹನೀಯರ ಚಿಂತನೆಗಳನ್ನು ಇಂದಿನ ಯುವಕರು ಅರಿತುಕೊಳ್ಳಬೇಕು’ ಎಂದು ಹೇಳಿದರು.
ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಭರತನಾಟ್ಯ ಕಲಾವಿದ ರಂಗನಾಥ ಬತಾಶೆ ಹಾಗೂ ತಂಡದಿಂದ ನೃತ್ಯಕಲಾ ಪ್ರದರ್ಶನ ಮಾಡಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ್, ಮೇಯರ್ ಎಂ.ಎಸ್.ಕರಡಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಇಲಿಯಾಸ್ ಬೋರಾಮಣಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಪಾಲಿಕೆ ಉಪ ಆಯುಕ್ತ ವೈ.ಎಚ್. ನಾರಾಯಣಕರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಪುಂಡಲೀಕ ಮಾನವರ, ಸೋಮನಾಥ ಕಳ್ಳಿಮನಿ, ಅಡಿವೆಪ್ಪ ಸಾಲಗಲ್, ಸಿದ್ದು ರಾಯಣ್ಣವರ ಇದ್ದರು.
ದೇವರಾಜ ಅರಸು ಅನೇಕ ಜನಪರವಾದ ಯೋಜನೆ ರೂಪಿಸಿ ಜಾರಿಗೆ ತಂದು ಬಡವರ ಅಶಕ್ತರ ಶೋಷಿತರ ಬಾಳಿಗೆ ಬೆಳಕನ್ನು ತಂದುಕೊಟ್ಟು ಅವರ ಬಾಳು ಬೆಳಗಿದ ಬಡವರ ಆಶಾಕಿರಣವಾಗಿದ್ದರುಸಂಗಮೇಶ ಬಬಲೇಶ್ವರ ಅಧ್ಯಕ್ಷ ಬಾಲ ವಿಕಾಸ ಅಕಾಡೆಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.