ADVERTISEMENT

ವಿಜಯಪುರದಲ್ಲಿ ಅಭಿವೃದ್ಧಿ ಪರ್ವ: ಬಸನಗೌಡ ಪಾಟೀಲ ಯತ್ನಾಳ

₹ 454 ಕೋಟಿ ಮೊತ್ತದ ಕಾಮಗಾರಿಗಳಿಗೆ ಸಿ.ಎಂ ಶಂಕುಸ್ಥಾಪನೆ, ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 14:59 IST
Last Updated 6 ಸೆಪ್ಟೆಂಬರ್ 2022, 14:59 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಿಸಿ ರಸ್ತೆ, ವ್ಯವಸ್ಥಿತ ಒಳಚಂಡಿನಿರ್ಮಾಣ, ಕುಡಿಯುವನೀರು ಪೂರೈಕೆ, ವಸತಿ ರಹಿತರಿಗೆ ಮನೆಗಳ ನಿರ್ಮಾಣ, ಓಪನ್‌ ಜಿಮ್‌, ಕ್ರೀಡಾಂಗಣ ಹಾಗೂ ಉದ್ಯಾನಗಳ ಅಭಿವೃದ್ಧಿ ಪರ್ವ ನಡೆದಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ₹ 454.84 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೆಪ್ಟೆಂಬರ್‌ 9ರಂದು ಬೆಳಿಗ್ಗೆ 11.30ಕ್ಕೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಅವರೊಂದಿಗೆ ಸಚಿವರಾದ ಉಮೇಶ ಕತ್ತಿ, ಗೋವಿಂದ ಕಾರಜೋಳ, ವಿ.ಸೋಮಣ್ಣ, ಸಿ.ಸಿ.ಪಾಟೀಲ, ಆನಂದ ಸಿಂಗ್‌, ಮುನಿರತ್ನ ಹಾಗೂ ಜಿಲ್ಲೆಯ ಶಾಸಕರು, ಸಂಸದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ADVERTISEMENT

ಉದ್ಘಾಟನೆ:ಮಹಾನಗರ ಪಾಲಿಕೆ ನೂತಯನ ಕಟ್ಟಡ, ಗಾಂಧಿ ಭವನ ಹಾಗೂ ಅಕ್ಕಮಹಾದೇವಿ ಮಹಿಳಾ ವಿವಿ ಆವರಣದಲ್ಲಿ ನಿರ್ಮಾಣವಾಗಿರುವ ಅಂಬೇಡ್ಕರ್‌ ಸಮುದಾಯ ಭವನ, ಮಹಿಳಾ ವಸ್ತು ಸಂಗ್ರಹಾಲಯ, ಸೈನಿಕ ಶಾಲೆ ಆವರಣದಲ್ಲಿ ನಿರ್ಮಾಣವಾಗಿರುವ ಹಾಕಿ ಕೋರ್ಟ್‌, ತಾಲ್ಲೂಕು ಪಂಚಾಯ್ತಿಯ ವಾಣಿಜ್ಯ ಸಂಕೀರ್ಣ, ಸರ್ಕಾರಿ ವೀಕ್ಷಣಾಲಯದ ಹೊಸ ಕಚೇರಿ, ಡಾ.ಬಾಬು ಜನಜೀವನ್‌ರಾಂ ಭವನವನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ ಎಂದರು.

ತೊರವಿಯಲ್ಲಿ ₹ 35 ಕೋಟಿ ಮೊತ್ತದಲ್ಲಿ ಒಣದ್ರಾಕ್ಷಿ ಸಂಗ್ರಹಕ್ಕೆ ಶೀಥಲ ಗೃಹ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ಪಾಲಿಕೆಯ ವ್ಯಾಪ್ತಿಯಲ್ಲಿ ಹೆಸರಿಲ್ಲದ 32 ರಸ್ತೆಗಳಿಗೆ ನಾಮಕರಣ ಮಾಡಲಾಗುತ್ತಿದೆ. ಪ್ರಮುಖ ವೃತ್ತಗಳಲ್ಲಿ ರಾಷ್ಟ್ರನಾಯಕರು, ಸಾಧು, ಸಂತರು, ಕವಿಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎಂದರು.

ವಿಜಯಪುರ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿಯಾಗಿ ₹125 ಕೋಟಿ ಮಂಜೂರಾಗಿದೆ. ಇದರಿಂದ ನೈಟ್‌ ಲ್ಯಾಂಡಿಂಗ್‌ ಮತ್ತು ಸರಕು ಸಾಗಾಟಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.

ಕರ್ನಾಟಕ ಕೊಳೆಚೆ ನಿರ್ಮೂಲನ ಮಂಡಳಿಯಿಂದ ಈಗಾಗಲೇ 4050 ಮನೆಗಳನ್ನು ನಿರ್ಮಿಸಿಸಲಾಗಿದೆ. ಜೊತೆಗೆ 2 ಸಾವಿರ ಹೆಚ್ಚುವರಿ ಮನೆಗಳನ್ನು ನೀಡಲು ಸಚಿವರು ಒಪ್ಪಿಗೆ ನೀಡಿದ್ದಾರೆ ಎಂದರು.

ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ 1493 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಶೀಘ್ರದಲ್ಲೇ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು. ಹೆಚ್ಚುವರಿಯಾಗಿ 2250 ಮನೆಗಳನ್ನು ನೀಡಲು ಸಚಿವರು ಒಪ್ಪಿದ್ದು, ಭೂತನಾಳ ಕೆರೆ ಬಳಿ 30 ಎಕರೆ ಜಾಗದಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಸಿದ್ಧಸಿರಿ ಸೌಹಾರ್ದ ಸಹಕಾರಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣೀಗೇರಿ, ಪರಶುರಾಮ ರಜಪೂತ, ಲಕ್ಷ್ಮಣ ಜಾಧವ್‌, ಚಂದ್ರು ಚೌಧರಿ, ವಿಜಯಕುಮಾರ ಡೋಣಿ, ವೈದ್ಯರಾದ ಡಾ.ಶರಣ್‌, ಡಾ.ಉಮೇಶ ಕುಮಾರ್‌, ಡಾ.ಗೀತಾಂಜಲಿ ಪಾಟೀಲ, ಡಾ.ವಿಕಾಸ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಬೇಡಿಕೆ
ವಿಜಯಪುರ:
ನಗರಕ್ಕೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಮಂಜೂರು ಮಾಡುವಂತೆ ಹಾಗೂ ನಗರದ ಅಭಿವೃದ್ಧಿಗೆ ₹ 100 ಕೋಟಿ ಮಂಜೂರು ಮಾಡುವಂತೆ ಮುಖ್ಯಮಂತ್ರಿಗೆ ಬೇಡಿಕೆ ಇಡಲಾಗಿದೆ ಎಂದು ಶಾಸಕ ಯತ್ನಾಳ ಹೇಳಿದರು.

ವಿಜಯಪುರ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರ, ಕೇಂದ್ರ ಬಸ್‌ ನಿಲ್ದಾಣಕ್ಕೆ ರಾಣಿ ಚನ್ನಮ್ಮ, ಸೆಟಲೈಟ್‌ ಬಸ್‌ ನಿಲ್ದಾಣಕ್ಕೆ ಛತ್ರಪತಿ ಶಿವಾಜಿ ಹೆಸರನ್ನು ನಾಮಕರಣ ಮಾಡುವಂತೆ ಮನವಿ ಮಾಡಲಾಗಿದೆ ಎಂದರು.

ವಿಜಯಪುರ ನಗರಕ್ಕೆ ಹೊಸ ಕ್ರೀಡಾಂಗಣ, ಐಟಿ ಪಾರ್ಕ್‌, ₹ 10 ಕೋಟಿ ಮೊತ್ತದಲ್ಲಿ ಕಿತ್ತೂರು ರಾಣಿ ಚನ್ನಮ್ಮ ನಾಟ್ಯ ಮಂದಿರ, ನಗರದ ಸುತ್ತ ಮತ್ತೊಂದು ವರ್ತುಲ ರಸ್ತೆ(ರಿಂಗ್‌ ರೋಡ್‌) ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೇಳಿದರು.

ದ್ರಾಕ್ಷಾ ರಸ ಅಭಿವೃದ್ಧಿ ಮಂಡಳಿಗೆ ಹೆಚ್ಚುವರಿಯಾಗಿ ₹ 100 ಕೋಟಿ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

****

ಜೆಎಸ್‌ಎಸ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

ವಿಜಯಪುರ: ಶ್ರೀ ಸಿದ್ದೇಶ್ವರ ಲೋಕ ಕಲ್ಯಾಣ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ₹ 25 ಕೋಟಿ ಮೊತ್ತದಲ್ಲಿ ನಗರದಲ್ಲಿ ನಿರ್ಮಿಸಿರುವ ಜ್ಞಾನಯೋಗಿ ಶ್ರಿ ಸಿದ್ದೇಶ್ವರ ಸ್ವಾಮೀಜಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದರು.

ದೇಶದ ಮೆಟ್ರೋ ಪಾಲಿಟನ್‌ ಸಿಟಿಗಳಲ್ಲಿ ಲಭಿಸುವ ವೈದ್ಯಕೀಯ ಸೌಲಭ್ಯ ಇನ್ನು ಮುಂದೆ ವಿಜಯಪುರದಲ್ಲಿ ಲಭಿಸಲಿದೆ.108 ಬೆಡ್‌ಗಳ ಈ ಆಸ್ಪತ್ರೆಯಲ್ಲಿ 30 ಐಸಿಯು, 44 ಜನರಲ್‌, 12 ಕ್ಯಾಸುಲಿಟಿ, 14 ಮೆಟರ್ನಿಟಿ ಹಾಗೂ 8 ಡಿಲೆಕ್ಸ್‌ ಬೆಡ್‌ಗಳನ್ನು ಒಳಗೊಂಡಿದೆ ಎಂದು ಹೇಳಿದರು.

ನ್ಯೂರೊ ಸರ್ಜರಿ ಮಾಡಬಹುದಾದಂತ ಅಂತರರಾಷ್ಟ್ರೀಯ ಮಟ್ಟದ ಮಾಡ್ಯುಲರ್‌ ಆಪರೇಷನ್‌ ಥಿಯೇಟರ್‌ ಹೊಂದಿದೆ ಎಂದು ತಿಳಿಸಿದರು.

ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಎಮರ್ಜೆನ್ಸಿ ಅಂಡ್‌ ಟ್ರೋಮಾ ಕೇರ್‌, ಆಕ್ಸಿಜನ್‌ ಪ್ಲಾಂಟ್‌, ಹೈಟೆಕ್‌ ಅಂಬುಲೆನ್ಸ್‌ ವ್ಯವಸ್ಥೆ ಇದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.