ADVERTISEMENT

ಅಭಿವೃದ್ಧಿಗೆ ಮುನ್ನುಡಿಯೋ..? ಹಳೆ ಚಾಳಿಯೋ..?

ದೋಸ್ತಿ ಸಚಿವರ ಉಪಸ್ಥಿತಿ ? ಜಿಲ್ಲಾ ಪಂಚಾಯ್ತಿಯ ತ್ರೈಮಾಸಿಕ ಕೆಡಿಪಿ ಸಭೆ ಇಂದು

ಡಿ.ಬಿ, ನಾಗರಾಜ
Published 2 ಅಕ್ಟೋಬರ್ 2018, 20:00 IST
Last Updated 2 ಅಕ್ಟೋಬರ್ 2018, 20:00 IST

ವಿಜಯಪುರ:ಕಾಂಗ್ರೆಸ್‌–ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ತಿಂಗಳು ಗತಿಸಿದೆ. ನಾಲ್ಕನೇ ತಿಂಗಳಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಬುಧವಾರ (ಅ.3) ಈ ವರ್ಷದ ಮೊದಲ ಜಿಲ್ಲಾ ಪಂಚಾಯ್ತಿಯ ತ್ರೈಮಾಸಿಕ ಕೆಡಿಪಿ ಸಭೆ ನಡೆಸಲಿದ್ದಾರೆ.

‘ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಆಡಳಿತ ನಿಷ್ಕ್ರಿಯಗೊಂಡಿದೆ. ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಈ ಹಿಂದಿನ ಸಭೆಗಳಲ್ಲಿ ಸಚಿವರು ನೀಡಿದ ಸೂಚನೆಗಳು ಅನುಷ್ಠಾನಗೊಂಡಿಲ್ಲ’ ಎಂಬ ಅಪಸ್ವರಗಳ ನಡುವೆಯೇ ನಡೆಯಲಿರುವ ಸಭೆಯ ಬಗ್ಗೆ ಜಿಲ್ಲೆಯ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಸಚಿವರಾಗಿ ನೇಮಕಗೊಂಡ ಕೆಲ ದಿನಗಳ ಬಳಿಕ ಆರೋಗ್ಯ ಸಚಿವ ಶಿವಾನಂದ ಪಾಟೀಲ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸಚಿವ ಎಂ.ಸಿ.ಮನಗೂಳಿ ಜತೆ ಅಧಿಕಾರಿಗಳ ಸಭೆಯನ್ನು ನಡೆಸಿದ್ದರು. ಈ ಸಂದರ್ಭ ಆಡಳಿತಕ್ಕೆ ಚಾಟಿ ಬೀಸಿ, ಚುರುಕು ನೀಡುವ ಯತ್ನ ನಡೆಸಿದ್ದರು. ಸಭೆಯಲ್ಲೇ ಅಧಿಕಾರಿಗಳಿಗೆ ಹೊಸ ಸಲಹೆ ನೀಡಿದ್ದರು.

ADVERTISEMENT

ಉಸ್ತುವಾರಿ ಸಚಿವರು ನೇಮಕಗೊಂಡ ಬಳಿಕ ಎಲ್ಲಾ ಶಾಸಕರನ್ನು ಸಭೆಗೆ ಆಹ್ವಾನಿಸಿ ಜಿಲ್ಲೆಯ ಅಭಿವೃದ್ಧಿಗೆ ನೀಲನಕ್ಷೆ ರೂಪಿಸುವ ಚಿಂತನೆ ಹಂಚಿಕೊಂಡಿದ್ದರು. ನಂತರ ಎಲ್ಲವೂ ಅದಲು ಬದಲಾಯ್ತು. ಮನಗೂಳಿ ವಿಜಯಪುರ ಉಸ್ತುವಾರಿ ಹೊಣೆ ಹೊತ್ತರು. ಜಡ್ಡುಗಟ್ಟಿರುವ ಜಿಲ್ಲಾಡಳಿತಕ್ಕೆ ಕೆಡಿಪಿ ಸಭೆ ಮುನ್ನುಡಿ ಬರೆಯಲಿದೆಯೇ ಎಂಬುದು ಇದೀಗ ಜಿಲ್ಲೆಯ ಜನರನ್ನು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.

‘ವರ್ಷದ ಹಿಂದೆ ತೊಗರಿ ಮಾರಿದ 1000ಕ್ಕೂ ಹೆಚ್ಚು ರೈತರ ಖಾತೆಗಳಿಗೆ ಇನ್ನೂ ಬೆಂಬಲ ಬೆಲೆ ಜಮೆಯಾಗಿಲ್ಲ. ಬೆಳೆ ವಿಮೆಯ ಕತೆಯೂ ಇದೇ ಆಗಿದೆ. ಇದರ ನಡುವೆ ಜಿಲ್ಲಾಡಳಿತದ ಕೆಲ ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲಾಧಿಕಾರಿ ಎಲ್ಲರನ್ನೂ ಸಂಭಾಳಿಸುವಲ್ಲಿ ಎಡವುತ್ತಿದ್ದಾರೆ. ಇಲಾಖೆಗಳಿಂದ ಸಕಾಲಕ್ಕೆ ಕೆಲಸ ಪಡೆಯುತ್ತಿಲ್ಲ ಎಂಬುದು ಈಗಿನ ಆಡಳಿತವನ್ನು ಗಮನಿಸಿದರೆ ಸ್ಪಷ್ಟವಾಗಿ ಗೋಚರಿಸುತ್ತಿದೆ’ ಎಂದು ಎಸ್‌.ಎಸ್‌.ಬಾಗಲಕೋಟ ದೂರಿದರು.

ಶಾಸಕರ ಹಾಜರಿ ?

ವಿಜಯಪುರ ಜಿಲ್ಲೆಯಲ್ಲಿ ಎಂಟು ಶಾಸಕರು, ಇಬ್ಬರು ವಿಧಾನ ಪರಿಷತ್‌ ಸದಸ್ಯರಿದ್ದಾರೆ. ಈ ಹಿಂದಿನ ಐದು ವರ್ಷದ ಅವಧಿಯಲ್ಲಿ ಎಂ.ಬಿ.ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸುವ ಸಂದರ್ಭ ಕಾಂಗ್ರೆಸ್‌ನ ಆರು ಶಾಸಕರಿದ್ದರೂ; ಸಭೆಗೆ ಹಾಜರಾದವರು ವಿರಳ.

ಸಿಂದಗಿ ಕ್ಷೇತ್ರದ ಬಿಜೆಪಿ ಶಾಸಕ ರಮೇಶ ಭೂಸನೂರ ಮಾತ್ರ ಕಾಯಂ ಹಾಜರಾಗಿ ತಮ್ಮ ಕ್ಷೇತ್ರದ ಸಮಸ್ಯೆಗಳ ಕುರಿತಂತೆ ಬೆಳಕು ಚೆಲ್ಲುತ್ತಿದ್ದರು. ಶಾಸಕರ ಗೈರು ಆಡಳಿತಕ್ಕೆ ಹೊಡೆತ ನೀಡುತ್ತಿತ್ತು. ಜಿಲ್ಲಾ ಪಂಚಾಯ್ತಿಯ ಕೆಡಿಪಿ ಸಭೆಗೆ ಕಾಂಗ್ರೆಸ್‌ನೊಳಗಿನ ಬಣ ರಾಜಕಾರಣದಿಂದಲೇ ಬಹುತೇಕರು ಗೈರು ಹಾಜರಾಗುತ್ತಿದ್ದುದು ಜಗಜ್ಜಾಹೀರುಗೊಂಡಿತ್ತು.

ಇದೀಗ ಕಾಲ ಬದಲಾಗಿದೆ. ಕಾಂಗ್ರೆಸ್‌, ಬಿಜೆಪಿಯ ತಲಾ ಮೂವರು ಶಾಸಕರಿದ್ದಾರೆ. ಸಚಿವರು ಸೇರಿದಂತೆ ಜೆಡಿಎಸ್‌ನ ಇಬ್ಬರು ಶಾಸಕರು ಜಿಲ್ಲೆ ಪ್ರತಿನಿಧಿಸುತ್ತಿದ್ದಾರೆ. ಕಾಂಗ್ರೆಸ್‌, ಬಿಜೆಪಿಯ ವಿಧಾನ ಪರಿಷತ್‌ ಸದಸ್ಯರು ಜಿಲ್ಲೆಯಲ್ಲಿದ್ದಾರೆ.

ಸಚಿವರಾದ ಎಂ.ಸಿ.ಮನಗೂಳಿ, ಶಿವಾನಂದ ಪಾಟೀಲ, ಶಾಸಕರಾದ ಎಂ.ಬಿ.ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ಯಶವಂತರಾಯಗೌಡ ಪಾಟೀಲ, ಎ.ಎಸ್‌.ಪಾಟೀಲ ನಡಹಳ್ಳಿ, ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ಅನುಭವಿಗಳು. ಸೋಮನಗೌಡ ಪಾಟೀಲ ಸಾಸನೂರ, ದೇವಾನಂದ ಚವ್ಹಾಣ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಬಿ.ಪಾಟೀಲ ಹೊಸಬರು.

ಇವರಲ್ಲಿ ಮನಗೂಳಿ, ಶಿವಾನಂದ ಪಾಟೀಲ, ಯತ್ನಾಳ ಕೆಡಿಪಿ ಸಭೆಗೆ ಹಾಜರಾಗುವುದು ಬಹುತೇಕ ಖಚಿತಗೊಂಡಿದೆ. ಹಿಂದಿನ ಅವಧಿಯಂತೆ ಈ ಬಾರಿಯೂ ಬಹುತೇಕ ಶಾಸಕರು ಸಭೆಯಿಂದ ದೂರ ಉಳಿಯುವುದು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಹೊಡೆತ ನೀಡಿದಂತೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.