ADVERTISEMENT

ಶಾಲೆಗಳಲ್ಲಿ ಸ್ಥಗಿತಗೊಂಡ ಪಾಠ ಬೋಧನೆ..!

ಶಿಕ್ಷಕರಿಗೆ ಶಿಷ್ಯವೇತನ ದಾಖಲೀಕರಣ ಹೆಚ್ಚುವರಿ ಹೊರೆ

ಶಾಂತೂ ಹಿರೇಮಠ
Published 16 ಸೆಪ್ಟೆಂಬರ್ 2018, 19:30 IST
Last Updated 16 ಸೆಪ್ಟೆಂಬರ್ 2018, 19:30 IST
   

ಸಿಂದಗಿ:ಇದೀಗ ಶಾಲೆಗಳಲ್ಲಿ ಪಾಠ ಬೋಧನೆ ನಿಂತಿದೆ. ಶಿಕ್ಷಕರ ಚಿತ್ತವೆಲ್ಲಾ ವಿದ್ಯಾರ್ಥಿಗಳ ಶಿಷ್ಯ ವೇತನದ ಅರ್ಜಿ ನಮೂನೆ ತುಂಬುವತ್ತ ನೆಟ್ಟಿದೆ.

ಯಾವ ಶಾಲೆಗೆ ಭೇಟಿ ನೀಡಿದರೂ ಇದೇ ಕೆಲಸ ಬಿರುಸಿನಿಂದ ನಡೆದಿದೆ. ಶಿಕ್ಷಕರು ಪಾಠ ಮಾಡಲು ಸಮಯವಿಲ್ಲದಾಗಿದೆ. ಇಲಾಖೆಯ ಅಧಿಕಾರಿಗಳ ಒತ್ತಡಕ್ಕೆ ಮಣಿದು, ಹಗಲು–ರಾತ್ರಿಯೆನ್ನದೇ ಶಿಷ್ಯ ವೇತನ ದಾಖಲೀಕರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಸ್ವಲ್ಪ ತಡವಾದರೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಕ್ಷೇತ್ರಶಿಕ್ಷಣಾಧಿಕಾರಿಯಿಂದ ಶಾಲೆಗೆ ಕಾರಣ ಕೇಳಿ ನೋಟಿಸ್‌ ನೀಡುತ್ತಿದ್ದಾರೆ. ಮಾನಸಿಕ ಕಿರಿಕಿರಿ, ಒತ್ತಡದಲ್ಲಿ ಬದುಕು... ಇದು ಇದೀಗ ಪ್ರತಿಯೊಬ್ಬ ಶಿಕ್ಷಕನು ಎದುರಿಸುತ್ತಿರುವ ವಾಸ್ತವ ಚಿತ್ರಣ.

ಎಲ್ಲ ಮಕ್ಕಳೂ ಈ ಯೋಜನೆಯಡಿ ಅರ್ಜಿ ಸಲ್ಲಿಸಬೇಕು. ಬೇಡವೆಂದವರು ಬೇಡ ಎಂದಾದರೂ ಬರೆದು ಕೊಡಬೇಕು. ಆದರೆ ಇಲ್ಲಿ ಮಕ್ಕಳಿಗೆ ಅಗತ್ಯವಾದ ದಾಖಲೆಗಳು ಮಾತ್ರ ಸಕಾಲಕ್ಕೆ ಸಿಗುತ್ತಿಲ್ಲ. ಇದು ಅಧಿಕಾರಿ ವರ್ಗಕ್ಕೆ ತಿಳಿಯುತ್ತಿಲ್ಲವೇ ? ಎಂಬುದು ಶಿಕ್ಷಕರ ಆಕ್ರೋಶದ ನುಡಿ.

ADVERTISEMENT

‘ಬ್ಯಾಂಕ್‌ ಪಾಸ್‌ಬುಕ್‌ನ ವಿವರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಥಿ ಸೇರಿದಂತೆ ಆತನ ತಂದೆ–ತಾಯಿಯ ಆಧಾರ್‌ ನಂಬರ್‌. ಈ ಎಲ್ಲವನ್ನೂ ಪಡೆಯಲು ಮಕ್ಕಳು–ಪಾಲಕರು ಹೈರಾಣಾಗುತ್ತಿದ್ದಾರೆ. ಇವರ ಬೆನ್ನತ್ತಿರುವ ನಮ್ಮ ಪಡಿಪಾಟಲು ಹೇಳಲು ಬಾರದು.

ಕೆಲವರ ಪೋಷಕರು ದುಡಿಯಲು ವಲಸೆ ಹೋಗಿದ್ದಾರೆ. ಇವರ ಮಾಹಿತಿಯೇ ಸಿಗದಾಗಿದೆ. ಇಂತಹ ಸ್ಥಿತಿಯಲ್ಲೂ ಅಧಿಕಾರಿಗಳ ಎಲ್ಲರ ಅರ್ಜಿ ತುಂಬಿ ಎಂದು ಕಟ್ಟಪಟ್ಟಣೆ ಹೊರಡಿಸುತ್ತಿದ್ದಾರೆ. ಹಾಸ್ಟೆಲ್‌ಗಳಲ್ಲಿರುವ ಮಕ್ಕಳ ಬಳಿ ದಾಖಲೆ, ಮಾಹಿತಿ ಸಂಗ್ರಹಿಸಲು ಪಡಬಾರದ ಕಷ್ಟ ಅನುಭವಿಸುತ್ತಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಶಿಕ್ಷಕರೊಬ್ಬರು ತಿಳಿಸಿದರು.

‘ಇದರ ನಡುವೆಯೇ ನಿಗದಿತ ಅವಧಿಯೊಳಗೆ ಪಾಠ, ಪರೀಕ್ಷೆ ಮುಗಿಸಬೇಕು. ಶಿಕ್ಷಕರಿಗೆ ಅನ್ಯ ಕೆಲಸ ನೀಡಕೂಡದು ಎಂದು ಶಿಕ್ಷಣ ತಜ್ಞರು, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸೇರಿದಂತೆ ಯಾರೇ ಹೇಳಿದರೂ ಈ ಹೊರೆಯಿಂದ ಹೊರಗೆ ಶಿಕ್ಷಕರಿಗೆ ಬರಲಾಗುತ್ತಿಲ್ಲ. ಇದರ ಜತೆಗೆ ಮತದಾರರ ಪರಿಷ್ಕರಣೆ, ಬಿಎಲ್ಒ ಕೆಲಸದ ಒತ್ತಡವೂ ಕೂಡ.

ಇದೇ ಕೆಲಸಕ್ಕೆ ರಾತ್ರಿಯೆಲ್ಲಾ ನಿದ್ರೆಗೆಟ್ಟು ಕಂಪ್ಯೂಟರ್ ಎದುರು ಕುಂತರೆ ಸರ್ವರ್ ಅರ್ಧದಲ್ಲೇ ನಿಲ್ಲುತ್ತದೆ. ಅದನ್ನು ಕಾಯುತ್ತ ಕೂರುವುದೊಂದು ಶಿಕ್ಷೆಯೇ ಸರಿ’ ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಕರು ತಮ್ಮ ಗೋಳನ್ನು 'ಪ್ರಜಾವಾಣಿ' ಎದುರು ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.