ADVERTISEMENT

ನೀರು ಕೊಡದಿದ್ದರೆ ನಿಮ್ಮನ್ನು ಬಿಡಲ್ಲ..!

‘ದಿಶಾ’ ಸಭೆ; ಸಂಸದ ರಮೇಶ ಜಿಗಜಿಣಗಿ ಅಧಿಕಾರಿಗಳಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 10:13 IST
Last Updated 24 ಅಕ್ಟೋಬರ್ 2019, 10:13 IST
ವಿಜಯಪುರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂಸದ ರಮೇಶ ಜಿಗಜಿಣಗಿ ಅಧ್ಯಕ್ಷತೆಯಲ್ಲಿ ಬುಧವಾರ ‘ದಿಶಾ’ ಸಭೆ ಜರುಗಿತು
ವಿಜಯಪುರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂಸದ ರಮೇಶ ಜಿಗಜಿಣಗಿ ಅಧ್ಯಕ್ಷತೆಯಲ್ಲಿ ಬುಧವಾರ ‘ದಿಶಾ’ ಸಭೆ ಜರುಗಿತು   

ವಿಜಯಪುರ: ‘ಕುಡಿಯುವ ನೀರು ಕೊಡದಿದ್ದರೆ ನಿಮ್ಮನ್ನು ಬಿಡಲ್ಲ.. ಜನರನ್ನು ತಂದು ನಿಮ್ಮ ಕಚೇರಿ ಎದುರು ಕೂರಸ್ತೀನಿ’..–ಹೀಗೆಂದು ಖಡಕ್ ಆಗಿ ಎಚ್ಚರಿಕೆ ನೀಡುವ ಮೂಲಕ ಸಂಸದ ರಮೇಶ ಜಿಗಜಿಣಗಿ ಅವರು ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜರುಗಿದ ಕೇಂದ್ರ ಪುರಸ್ಕೃತ ಯೋಜನೆಗಳ (ದಿಶಾ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಕುಡಿಯುವ ನೀರು ಪೂರೈಕೆ ಮೊದಲ ಆದ್ಯತೆ ಆಗಬೇಕು’ ಎಂದು ತಾಕೀತು ಮಾಡಿದರು.

‘ಬಹುಹಳ್ಳಿ ಕುಡಿಯುವ ನೀರು ಯೋಜನೆಯಡಿ ಹಂಜಗಿ ಸೇರಿ 34 ಹಳ್ಳಿಗಳಿಗೆ ₹110 ಕೋಟಿ ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಅದು ಪೂರ್ಣಗೊಂಡಿಲ್ಲ. ಹೀಗಾದರೆ ಹೇಗೆ’ ಎಂದು ಖಾರವಾಗಿ ಪ್ರಶ್ನಿಸಿದರು.

ADVERTISEMENT

‘ಕುಡಿಯುವ ನೀರು, ಸಾರ್ವಜನಿಕ ಮತ್ತು ವೈಯಕ್ತಿಕ ಶೌಚಾಲಯ ನಿರ್ಮಾಣ, ವಸತಿ ರಹಿತರಿಗೆ ಮನೆ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಬೇಕು. ಪ್ಲಾಸ್ಟಿಕ್ ನಿಷೇಧದ ಜತೆಗೆ ಪರ್ಯಾಯಕ್ಕೆ ಅವಕಾಶ ಕಲ್ಪಿಸಬೇಕು. ಚಿಕ್ಕಮಗಳೂರು ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿದ್ದು, ಅಲ್ಲಿಗೆ ಭೇಟಿ ನೀಡಿ ಪರ್ಯಾಯವಾಗಿ ಏನು ಬಳಕೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು’ ಎಂದು ಸೂಚಿಸಿದರು.

ನನ್ನ ಕಾರಲ್ಲಿ ಕೂರು!: ‘ಶುದ್ಧ ಕುಡಿಯುವ ನೀರಿನ ಘಟಕಗಳು ಬಹಳಷ್ಟು ಕಡೆ ಸ್ಥಗಿತಗೊಂಡಿವೆ. ಕೂಡಲೇ ಅವುಗಳನ್ನು ದುರಸ್ತಿಗೊಳಿಸಬೇಕು’ ಎಂದು ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ‘ಇಲ್ಲ, ಸರ್, ಕೆಲವು ಕಡೆ ಮಾತ್ರ ಬಂದ್ ಆಗಿವೆ’ ಎಂದರು. ಇದರಿಂದ ಸಿಟ್ಟಿಗೆದ್ದ ಜಿಗಜಿಣಗಿ, ‘ನನ್ನ ಕಾರಲ್ಲಿ ಬಂದು ಕೂರು. ನಾನೇ ಕರೆದುಕೊಂಡು ಹೋಗಿ ತೋರಸ್ತೀನಿ’ ಎಂದು ಗರಂ ಆದರು.

ಬಹುಹಳ್ಳಿ ನೀರು ಸರಬರಾಜು: ‘ವಿಜಯಪುರ 5, ಇಂಡಿ 12, ಬಸವನಬಾಗೇವಾಡಿ 8, ಮುದ್ದೇಬಿಹಾಳ 11 ಮತ್ತು ಸಿಂದಗಿಯಲ್ಲಿ 5 ಸೇರಿದಂತೆ ಜಿಲ್ಲೆಗೆ 41 ಬಹುಹಳ್ಳಿ ಕುಡಿಯುವ ಯೋಜನೆಗಳು ಮಂಜೂರಾಗಿವೆ. ಈ ಪೈಕಿ 34 ಪೂರ್ಣಗೊಂಡಿದ್ದು, 7 ಪ್ರಗತಿಯಲ್ಲಿವೆ’ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.

ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಮಾತನಾಡಿ, ‘ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ 15,075 ಅರ್ಜಿಗಳು ಸ್ವೀಕೃತವಾಗಿದ್ದು, 9,484 ಶೌಚಾಲಯಗಳನ್ನು ನಿರ್ಮಿಸಲಾಗಿದೆ. 101 ಪ್ರಗತಿಯಲ್ಲಿದ್ದು, 120 ಬಾಕಿ ಉಳಿದುಕೊಂಡಿವೆ. ಕೊಳೆಗೇರಿ ಮತ್ತು ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಸಂಪರ್ಕ ಕಲ್ಪಿಸುವುದು ಕಷ್ಟವಾಗುತ್ತಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗೋವಿಂದರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.