ವಿಜಯಪುರ: ‘ಮರಕ್ಕೆ ಬೇರು ಎಷ್ಟು ಮುಖ್ಯವೋ, ಅದೇ ರೀತಿ ಮನುಷ್ಯನಿಗೆ ನಂಬಿಕೆ ಬಹಳ ಮುಖ್ಯ. ದೇವರು ನಮಗೆ ಎರಡು ಆಯ್ಕೆ ನೀಡಿದ್ದಾನೆ. ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು' ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು.
ವಿಜಯಪುರದಲ್ಲಿ ಶುಕ್ರವಾರ ನಡೆದ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಪಾಲ್ಗೊಂಡು ಸಂದರ್ಭೋಚಿತವಾಗಿ ಹೇಳಿದ ಅವರ ಮಾತುಗಳು ಪರೋಕ್ಷವಾಗಿ ಮುಖ್ಯಮಂತ್ರಿಯವರನ್ನು ಉದ್ದೇಶಿಸಿಯೇ ಹೇಳಿದಂತಿತ್ತು.
‘ಬುದ್ಧಿ ಇದ್ದವರು ಯುದ್ಧ ಗೆಲ್ಲುತ್ತಾರೆ. ಗುಣ ಇದ್ದವರು ಹೃದಯವನ್ನು ಗೆಲ್ಲುತ್ತಾರೆ. ತಾಳ್ಮೆ ಇದ್ದವರು ಜಗತ್ತನ್ನೇ ಗೆಲ್ಲುತ್ತಾರೆ’ ಎಂದೂ ಹೇಳಿದರು.
ಸಹಕಾರ ನೀಡುತ್ತಿಲ್ಲ:
‘ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ. ಈ ಯೋಜನೆಗೆ ಅಧಿಸೂಚನೆ ಹೊರಡಿಸುತ್ತಿಲ್ಲ. ನೆರೆ ರಾಜ್ಯಗಳು ದಾವೆಗಳ ಮೂಲಕ ಯೋಜನೆ ಜಾರಿಗೆ ಅಡಚಣೆ ಉಂಟು ಮಾಡುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.
ರೈತರಿಗೆ ಎಕರೆಗೆ ಪರಿಹಾರ:
ಕೃಷ್ಣಾ ಮೇಲ್ದಂಡೆ ಯೋಜನೆ ಯೋಜನೆ ಮುಳುಗಡೆ ಸಂತ್ರಸ್ತರಿಗೆ ಬೊಮ್ಮಾಯಿ ಸರ್ಕಾರ ₹ 20, ₹ 25 ಲಕ್ಷ ಪ್ರತಿ ಎಕರೆಗೆ ಪರಿಹಾರ ನೀಡಲು ನಿರ್ಧರಿಸಿತ್ತು. 1,33,867 ಎಕರೆ ಮುಳುಗಡೆಯಾಗಲಿದ್ದು, ನಮ್ಮ ಸರ್ಕಾರ ಪ್ರತಿ ಎಕರೆಗೆ ₹30- ₹40 ಲಕ್ಷ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ₹ 70 ಸಾವಿರ ಕೋಟಿ ವಿತರಣೆ ಮಾಡಲಾಗುವುದು. ಇನ್ನು ಕಾಲುವೆ ಭೂ ಸಂತ್ರಸ್ಥರಿಗೆ ₹25, ₹30 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ ಎಂದರು.
‘ಯುಕೆಪಿ ಭಾಗದ ಅನೇಕ ರೈತರು ಕೋರ್ಟ್ ಮೇಟ್ಟಿಲೇರಿದ್ದು, 29 ಸಾವಿರ ಪ್ರಕರಣಗಳು ಇವೆ. ಅಲ್ಲಿ ನಿಮಗೆ ಹೆಚ್ಚಿನ ಪರಿಹಾರ ಸಿಗಲಿದೆ ಎಂದು ಭಾವಿಸಿದ್ದೀರಿ. ಅದು ಸಾಧ್ಯವಿಲ್ಲ. ಕೋಟಿಗಟ್ಟಲೆ ಪರಿಹಾರ ನೀಡಬೇಕಾದರೆ, ಯಾವುದೇ ಸರ್ಕಾರ ಈ ಯೋಜನೆ ಜಾರಿ ಮಾಡಲು ಸಾಧ್ಯವಿಲ್ಲ. ಒಪ್ಪಿತ ಭೂಸ್ವಾಧೀನ ಪ್ರಕ್ರಿಯೆ ಮಾಡಬೇಕು ಎಂದು ನಿಮ್ಮ ನಾಯಕರ ಒತ್ತಡದ ಮೇರೆಗೆ ಸರ್ಕಾರದ ಮೇಲೆ ಆರ್ಥಿಕ ಹೊರೆ ಬಿದ್ದರೂ ನಾವು ಈ ತೀರ್ಮಾನ ಮಾಡಿದ್ದೇವೆ. ನೀವೆಲ್ಲರೂ ಸರ್ಕಾರದ ಪರಿಹಾರ ಪಡೆದು ಭೂಮಿಯನ್ನು ನೀಡಬೇಕು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.