ADVERTISEMENT

ನೀರಾವರಿ ಯೋಜನೆಗಳ ಹೆಸರಲ್ಲಿ ಡೊಂಬರಾಟ: ಮಾಜಿ ಸಚಿವ ನಾಡಗೌಡ

ಪೀರಾಪುರ–ಬೂದಿಹಾಳ ಏತ ನೀರಾವರಿ ಯೋಜನೆ ಕಾಂಗ್ರೆಸ್‌ ಕೊಡುಗೆ

​ಪ್ರಜಾವಾಣಿ ವಾರ್ತೆ
Published 1 ಮೇ 2022, 11:17 IST
Last Updated 1 ಮೇ 2022, 11:17 IST
ಸಿ.ಎಸ್‌.ನಾಡಗೌಡ
ಸಿ.ಎಸ್‌.ನಾಡಗೌಡ   

ವಿಜಯಪುರ: ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ಹೆಸರಿನಲ್ಲಿ ಡೊಂಬರಾಟ ನಡೆದಿದೆ. ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಆರಂಭವಾದ ಯೋಜನೆಗಳನ್ನು ಬಿಜೆಪಿಯವರು ತಮ್ಮದೆಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿರುವುದು ಖಂಡನೀಯ ಎಂದುಮಾಜಿ ಸಚಿವ ಸಿ.ಎಸ್‌.ನಾಡಗೌಡ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಮತ್ತು ಅನುಷ್ಠಾನದ ಹಂತದಲ್ಲಿರುವ ಬಹುಪಾಲು ನೀರಾವರಿ ಯೋಜನೆಗಳು ಕಾಂಗ್ರೆಸ್‌ ಕೊಡುಗೆಯಾಗಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಎಂ.ಬಿ.ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗಪೀರಾಪುರ–ಬೂದಿಹಾಳ ಏತ ನೀರಾವರಿ ಯೋಜನೆ ಜಾರಿಗೆ ಬಂದಿದೆ. ಆದರೆ, ಕೆಲವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ಯೋಜನೆಗೆ ಚಾಲನೆ ನೀಡಿದರು. ಇದೀಗ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು ಎಂದು ಬಿಂಬಿಸಿರುವುದು ಸರಿಯಲ್ಲ ಎಂದರು.

ADVERTISEMENT

ಪೀರಾಪೂರ–ಬೂದಿಹಾಳ ಯೋಜನೆ ಕಾರ್ಯರೂಪಕ್ಕೆ ಬರುವುದು ತಿಳಿದ ನಮ್ಮದೇ ಪಕ್ಷದ ಶಾಸಕರೊಬ್ಬರು ಪ್ರಚಾರಕ್ಕಾಗಿ ಬಂಡಿಯಾತ್ರೆ, ಪಾದಯಾತ್ರೆ ಮಾಡಿದ್ದರು ಎಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರ ವಿರುದ್ಧ ಆರೋಪ ಮಾಡಿದರು.

2013–14ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಪ್ರಥಮ ವರ್ಷದ ಬಜೆಟ್‌ನಲ್ಲಿಯೇ ಪೀರಾಪುರ–ಬೂದಿಹಾಳ ಏತ ನೀರಾವರಿ ಯೋಜನೆಯನ್ನು ಘೋಷಿಸಲಾಯಿತು ಎಂದು ತಿಳಿಸಿದರು.

2015ರ ಸೆಪ್ಟೆಂಬರ್‌ 14ರಂದು ಈ ಯೋಜನೆಗೆ ಅಗತ್ಯವಿರುವ ನೀರಿನ ಹಂಚಿಕೆ ಪ್ರಕ್ರಿಯೆ ಆರಂಭಗೊಂಡಿತು. ಬಳಿಕ 2016ರ ಜುಲೈ 20ರಂದು ₹ 840 ಕೋಟಿ ಮೊತ್ತದ ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು ಎಂದು ಹೇಳಿದರು.

ನೀರಾವರಿ ಉಳಿತಾಯದಿಂದ ಲಭ್ಯವಾಗುವ ನೀರನ್ನು ಮರು ಹಂಚಿಕೆ ಮಾಡಲು ಮಾಸ್ಟರ್‌ ಪ್ಲಾನ್‌ ಸಭೆ2016ರ ಆಗಸ್ಟ್‌ 30ರಂದು ನಡೆಯಿತು. ಬಳಿಕ 2017ರ ಜನವರಿ 7ರಂದು ಪ್ರಥಮ ಹಂತದ ಯೋಜನೆಗೆ ಇಆರ್‌ಸಿ ಅನುಮೋದನೆ ನೀಡಲಾಯಿತು. ಅದೇ ವರ್ಷ ಫೆಬ್ರುವರಿ 2ರಂದು ಪರಿಸರ ಇಲಾಖೆ ಪರವಾನಗಿ ಪಡೆದುಕೊಳ್ಳಲಾಯಿತು ಎಂದು ತಿಳಿಸಿದರು.

ಯೋಜನೆಯ ಇನ್‌ಟೆಕ್‌ ಕಾಲುವೆ, ಹೆಡ್‌ವರ್ಕ್ಸ್‌, ಜಾಕ್‌ವೆಲ್‌ಗೆ ₹ 527 ಕೋಟಿ ಅಗತ್ಯ ಅನುಮೋದನೆ ನೀಡಿ, ಬಾಕಿ ಉಳಿಯುವ 17,805 ಹೆಕ್ಟೇರ್‌ ಪ್ರದೇಶಕ್ಕೆ ನೀರೊದಗಿಸಲು ಯೋಜಿಸಲಾಯಿತು ಎಂದರು.

ಕಾಲುವೆ ಜಾಲದಿಂದ ಪೈಪ್‌ಲೈನ್‌ ಜಾಲಕ್ಕೆ ಬದಲಾಯಿಸಿ, 0.96 ಟಿಎಂಸಿ ಹೆಚ್ಚಿನ ನೀರಿನಲ್ಲಿ 17,805 ಹೆಕ್ಟೇರ್‌ ಪ್ರದೇಶಕ್ಕೆ ನೀರೊದಗಿಸುವ ಯೋಜನೆ ರೂಪುಗೊಂಡಿತು ಎಂದು ಹೇಳಿದರು.

2018 ಆಗಸ್ಟ್‌ 20ರಂದು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಇಆರ್‌ಸಿ ಸಭೆಯಲ್ಲಿ ಚರ್ಚಿಸಿದಂತೆ ಅನುಮೋದನೆ ನೀಡಲಾಯಿತು ಎಂದರು.

ಪೀರಾಪೂರ–ಬೂದಿಹಾಳ ವಿಸ್ತರಣಾ ಯೋಜನೆಗೆ 2019ರ ಫೆಬ್ರುವರಿ 1ರಂದು ಬೋರ್ಡ್‌ನಲ್ಲಿ ₹549.70 ಕೋಟಿಗೆ ಅನುಮೋದನೆ ನೀಡಲಾಯಿತು ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರೊ.ರಾಜು ಅಲಗೂರ, ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಸುಭಾಸ ಛಾಯಾಗೋಳ, ಎಸ್.ಎಂ.ಪಾಟೀಲ ಗಣಿಹಾರ, ವೈಜನಾಥ ಕರ್ಪೂರಮಠ, ಪ್ರೊ.ಎಂ.ಜಿ.ಯಂಕಂಚಿ, ಶ್ರೀಕಾಂತ ಛಾಯಾಗೋಳ ಇದ್ದರು.

***

ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನದ ವಿಷಯದಲ್ಲಿ ಮಾಜಿಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರ ಸಾಧನೆಯನ್ನು ಯಾರೂ ಮರೆಮಾಚಲು ಸಾಧ್ಯವಿಲ್ಲ. ಇದರಲ್ಲಿ ರಾಜಕಾರಣ ಬೇಡ

–ಸಿ.ಎಸ್‌. ನಾಡಗೌಡ, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.