ADVERTISEMENT

ತಾಳಿಕೋಟೆ: ಮಳೆ ಅಬ್ಬರಕ್ಕೆ ಡೋಣಿ ಸೇತುವೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 5:25 IST
Last Updated 12 ಸೆಪ್ಟೆಂಬರ್ 2025, 5:25 IST
ತಾಳಿಕೋಟೆ ಪಟ್ಟಣದಿಂದ ವಿಜಯಪುರಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಅಡ್ಡಲಾಗಿ ಹರಿಯುತ್ತಿರುವ ಡೋಣಿ ನದಿಗೆ ನಿರ್ಮಿಸಿರುವ ಸೇತುವೆಯು ಪ್ರವಾಹದಿಂದ ಜಲಾವೃತವಾಗಿದೆ
ತಾಳಿಕೋಟೆ ಪಟ್ಟಣದಿಂದ ವಿಜಯಪುರಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಅಡ್ಡಲಾಗಿ ಹರಿಯುತ್ತಿರುವ ಡೋಣಿ ನದಿಗೆ ನಿರ್ಮಿಸಿರುವ ಸೇತುವೆಯು ಪ್ರವಾಹದಿಂದ ಜಲಾವೃತವಾಗಿದೆ   

ತಾಳಿಕೋಟೆ: ಡೋಣಿ ನದಿಯ ಜಲಾನಯನದಲ್ಲಿ ಬುಧವಾರ ರಾತ್ರಿ ಸುರಿದ ಅಬ್ಬರದ ಮಳೆಯಿಂದಾಗಿ ಪಟ್ಟಣದಿಂದ ವಿಜಯಪುರಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಅಡ್ಡಲಾಗಿ ಹರಿಯುತ್ತಿರುವ ಡೋಣಿ ನದಿಗೆ ನಿರ್ಮಿಸಿರುವ ಬ್ರಿಟಿಷ್ ಕಾಲದ ಸೇತುವೆಯು ಪ್ರವಾಹದಿಂದ ಜಲಾವೃತವಾಗಿ, ಗುರುವಾರ ಮಧ್ಯಾಹ್ನದಿಂದ ಸಂಚಾರ ಸ್ಥಗಿತವಾಗಿದೆ.

ಈ ರಾಜ್ಯ ಹೆದ್ದಾರಿ ಬಳಸಿಕೊಂಡು ಸಾಗುವ ಮತ್ತು ಬರುವ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದರಿಂದ ಬಸವನ ಬಾಗೇವಾಡಿ, ವಿಜಯಪುರದತ್ತ ಹೋಗುವ ವಾಹನಗಳು ತಾಳಿಕೋಟೆಯಿಂದ ಹಡಗಿನಾಳ ಮಾರ್ಗದಲ್ಲಿ ಇದೇ ಡೋಣಿ ನದಿಗೆ ನಿರ್ಮಿಸಿರುವ ಮೇಲ್ಸೇತುವೆ ಬಳಸಿ ಮೂಕಿಹಾಳ, ಮಿಣಜಗಿ ಮಾರ್ಗದಲ್ಲಿ 15 ಕಿ.ಮೀ ಸುತ್ತು ಹಾಕಿಕೊಂಡು ಸಂಚರಿಸಿದವು.

ಡೋಣಿ ನದಿಯ ಜಲಾನಯನದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಡಾ. ವಿನಯಾ ಹೂಗಾರ ಅವರ ಆದೇಶದಂತೆ ಡೋಣಿ ನದಿಯ ಬಳಿ ಪೊಲೀಸ್ ಕಾವಲು ಇರಿಸಲಾಗಿತ್ತು. ಗುರುವಾರ ಮಧ್ಯಾಹ್ನ 12 ಗಂಟೆಗೆ ಸೇತುವೆ ಜಲಾವೃತವಾಗುತ್ತಿದ್ದಂತೆ ಡೋಣಿ ನದಿಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸಿ ಪೊಲೀಸ್ ಇಲಾಖೆ ಬ್ಯಾರಿಕೇಡ್ ಹಾಕಿ ಅಪಾಯಕ್ಕೆ ಅವಕಾಶ ಕೊಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಪಿಎಸ್‌ಐ (ಅಪರಾಧವಿಭಾಗ) ಆರ್.ಎಸ್.ಭಂಗಿ ತಿಳಿಸಿದರು.

ADVERTISEMENT

ತಾಳಿಕೋಟೆ ಪಟ್ಟಣದಲ್ಲಿ ರಾತ್ರಿಯಿಂದ ಬೆಳಗಿನವರೆಗೆ 4.91 ಸೆಂ.ಮೀ ಮಳೆ ದಾಖಲಾಗಿದೆ. ಪಟ್ಟಣಕ್ಕಿಂತ ಹೆಚ್ಚಿನ ಮಳೆ ತಾಲ್ಲೂಕು ವ್ಯಾಪ್ತಿಯಲ್ಲಿನ ಡೋಣಿ ಜಲಾನಯನ ಪ್ರದೇಶಗಳಾದ ಬಮ್ಮನಳ್ಳಿ, ತುಂಬಗಿ, ಅಂಬಳನೂರ, ಬಿ.ಬಿ.ಇಂಗಳಗಿ, ಸಾಸನೂರ, ಹಂಚಲಿ, ನಾಗರಾಳ, ಕೊಂಡಗೂಳಿಗಳಲ್ಲಿ ಉತ್ತಮ ಮಳೆಯಾಗಿದೆ. ಗ್ರಾಮೀಣ ಭಾಗದಲ್ಲಿನ ಜಮೀನುಗಳಿಗೆ ನೀರು ನುಗ್ಗಿದೆ. ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಕಲಕೇರಿ ಹಾಗೂ ಸುತ್ತಮುತ್ತ ಗುರುವಾರ ಬೆಳಗಿನ ಜಾವ ಉತ್ತಮ ಮಳೆಯಾಗಿದೆ. ಈ ಭಾಗದಲ್ಲಿನ ಗ್ರಾಮೀಣ ರಸ್ತೆಗಳು ಹೆಚ್ಚಿನೆಡೆ ಹಾಳಾಗಿದ್ದು ರಸ್ತೆಗಳಲ್ಲಿ ತೆಗ್ಗುಗಳು ನೀರು ತುಂಬಿ ಸಂಚಾರಕ್ಕೆ ಅಡ್ಡಿಪಡಿಸಿದವು. ಮಳೆಯಿಂದಾಗಿ ಕಲಕೇರಿ ಗ್ರಾಮದಲ್ಲಿನ ವಾರದ ಸಂತೆಯೂ ಅಸ್ತವ್ಯಸ್ತವಾಯಿತು. ತಾಲ್ಲೂಕಿನಾದ್ಯಂತ ಆಶ್ಲೇಷಾ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ತಾಳಿಕೋಟೆ ತಾಲ್ಲೂಕಿನ ಕಲಕೇರಿಗೆ ಹೋಗುವ ಮಾರ್ಗದಲ್ಲಿರುವ ಜಮೀನುಗಳಿಂದ ಕೋಡಿ ಬಿದ್ದು ಕೆಸರಟ್ಟಿ ಬಿಂಜಲಭಾವಿ ಮಧ್ಯದಲ್ಲಿನ ಹಾಳಾಗಿರುವ ರಸ್ತೆಯಲ್ಲಿ ಮಳೆಯ ನೀರು ಹಳ್ಳದಂತೆ ಗುರುವಾರ ಹರಿಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.