ಮುದ್ದೇಬಿಹಾಳ: ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ನಿದ್ದೆಗೆಟ್ಟು ಹಗಲು ರಾತ್ರಿ ಎನ್ನದೇ ಓದಿದರೆ ನಿರೀಕ್ಷಿತ ಫಲಿತಾಂಶ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ ರ‍್ಯಾಂಕ್ ಪಡೆದಿರುವ ಆಕ್ಸಫರ್ಡ್ ಪಾಟೀಲ್ಸ್ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ಕುಲಕರ್ಣಿ ಹೇಳಿದರು.
ಪಟ್ಟಣದ ಮಾರುತಿ ನಗರದಲ್ಲಿರುವ ಪ್ರತಿಭಾ ಕಿಡ್ಸ್ ಕಿಂಡರ್ ಗಾರ್ಟನ್ ಸ್ಕೂಲ್‌ನಲ್ಲಿ ಭಾನುವಾರ 2025ನೇ ಸಾಲಿನ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.
ನಿದ್ದೆಗೆಟ್ಟು ಓದಿದರೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸ್ನೇಹಿತರೊಂದಿಗೆ ಅಂದಂದಿನ ಪಾಠಗಳನ್ನು ಅಂದೇ ಓದಿ ಮನನ ಮಾಡಿಕೊಂಡರೆ ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದು ಎಂದರು.
ಪ್ರತಿಭಾ ಕಿಡ್ಸ್ ಕಿಂಡರ್ ಗಾರ್ಟನ್ ಸ್ಕೂಲ್‌ನ ಮುಖ್ಯಶಿಕ್ಷಕಿ ಅಕ್ಷತಾ ಮಠ ಮಾತನಾಡಿ, ವಿದ್ಯಾರ್ಥಿಗಳಿಗೆ ರಜೆಯ ಸಮಯದಲ್ಲಿ ವಚನಗಳು, ಭಗವದ್ಗೀತೆ ಶ್ಲೋಕಗಳನ್ನು ಹೇಳಿಕೊಡಲಾಗಿದ್ದು ಮುಂಬರುವ ವಿದ್ಯಾಭ್ಯಾಸದ ಸಮಯದಲ್ಲಿ ಅವರ ಓದಿಗೆ ಸಹಕಾರಿಯಾಗಲಿವೆ ಎಂದರು.
ಸಂಸ್ಥೆಯ ಅಧ್ಯಕ್ಷೆ ನೀಲಮ್ಮ ಮಠ, ಸಂಸ್ಥಾಪಕ ಶಿವಕುಮಾರ ಮಠ, ಶಿಕ್ಷಕ ಬಿ.ಎಂ.ಕಡಿ, ಬಿ.ಎಸ್.ಬಿರಾದಾರ,ಶಿವಾನಂದ ಹೆಬ್ಬಾಳ, ಪಾಲಕರಾದ ಸಿ.ಜಿ.ಕುಲಕರ್ಣಿ ಮಾತನಾಡಿದರು.ಶಿಕ್ಷಕರಾದ ಸವಿತಾ ಪಾಟೀಲ, ಆರ್ಚನಾ ಮಠ ಇದ್ದರು.ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಾಸಂತಿ ಹಿರೇಮಠ, ಅನುಶ್ರೀ ಬಿರಾದಾರ, ಸಿಂಧೂ ಬಳವಾಟ,ಸಂಗೀತಾ ಹುಲಿಗೇರಿ,ಶ್ರೇಯಾ ಹೊನಕೇರಿ, ಸೇಜಲ ಮೇಟಿ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.