ADVERTISEMENT

‘ಕೃಷ್ಣಾ’ ಇದ್ದರೂ ಕುಡಿಯಲು ನೀರಿಲ್ಲ!

ಅಮರಗೋಳದಲ್ಲಿ ಕುಡಿಯುವ ನೀರಿಗೆ ತತ್ವಾರ; ಕೃಷ್ಣಾ ನದಿಯಿಂದಲೇ ನೀರು ತರುವ ಸಾಹಸ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 5:56 IST
Last Updated 20 ಜುಲೈ 2024, 5:56 IST
ಮುದ್ದೇಬಿಹಾಳ ತಾಲ್ಲೂಕಿನ ಅಮರಗೋಳ ಗ್ರಾಮದ ಮಹಿಳೆಯರು ಕುಡಿಯಲು ನೀರಿಲ್ಲದೆ ಕೃಷ್ಣಾ ನದಿಯಿಂದ ನೀರು ತರುವುದು ಸಾಮಾನ್ಯವಾಗಿದೆ
ಮುದ್ದೇಬಿಹಾಳ ತಾಲ್ಲೂಕಿನ ಅಮರಗೋಳ ಗ್ರಾಮದ ಮಹಿಳೆಯರು ಕುಡಿಯಲು ನೀರಿಲ್ಲದೆ ಕೃಷ್ಣಾ ನದಿಯಿಂದ ನೀರು ತರುವುದು ಸಾಮಾನ್ಯವಾಗಿದೆ   

ಮುದ್ದೇಬಿಹಾಳ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಗ್ರಾಮೀಣ ಜನರಿಗೆ ಕುಡಿಯುವ ನೀರಿಗಾಗಿ ನೀರಿನಂತೆ ಹಣ ಖರ್ಚು ಮಾಡುತ್ತಿದ್ದರೂ ಹಳ್ಳಿಗಾಡಿನ ಜನರು ಇನ್ನೂ ನದಿಯಿಂದಲೇ ನೀರು ಹೊತ್ತು ತರುವ ದುಸ್ಥಿತಿ ನಿರ್ಮಾಣವಾಗಿರುವುದು ಅಧಿಕಾರಿಗಳ ಬೇಜವವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅಂತಹ ದುಸ್ಥಿತಿ ಈಗ ಅಮರಗೋಳ ಗ್ರಾಮದಲ್ಲಿ ನಿರ್ಮಾಣವಾಗಿದೆ.

ಅಮರಗೋಳ ಗ್ರಾಮದಿಂದ ಅಂದಾಜು 500 ಮೀಟರ್ ದೂರ ಇರುವ ಕೃಷ್ಣಾ ನದಿಯಿಂದ ಗ್ರಾಮಸ್ಥರು ನಿತ್ಯವೂ ಬೆಳಿಗ್ಗೆ, ಸಂಜೆ ಆದರೆ ಸಾಕು ಕಾಲ್ನಡಿಗೆ, ಬೈಸಿಕಲ್ ಹಾಗೂ ಬೈಕ್, ಚಕ್ಕಡಿ ಮೂಲಕ ನೀರು ಹೊತ್ತು ತರುವ ದೃಶ್ಯಗಳು ಕಂಡು ಬರುತ್ತಿವೆ.

‘ಗ್ರಾಮದ ಪಕ್ಕದಲ್ಲೇ ಕೃಷ್ಣೆ ಇದ್ದರೂ ಗ್ರಾಮಸ್ಥರಿಗೆ ಕುಡಿಯುವ ನೀರು ದೊರಕದೇ ಇರುವುದಕ್ಕೆ ಯಾರನ್ನು ದೂಷಿಸಬೇಕು ಎಂಬುದು ಅರ್ಥವಾಗುತ್ತಿಲ್ಲ’ ಎನ್ನುತ್ತಾರೆ ಗ್ರಾಮದ ಯುವಕ ನಬೀಸಾ ವಾಲೀಕಾರ ಅವರು.

ADVERTISEMENT

‘ಗ್ರಾಮದಲ್ಲಿ ಕಳೆದ ಒಂದೂವರೆ ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಹೀಗೆಯೇ ಇದೆ. ಕೊಡಗಳನ್ನು ಹಿಡಿದುಕೊಂಡು ಗ್ರಾಮಸ್ಥರು ಗುಂಪು ಗುಂಪಾಗಿ ನದಿಯಿಂದ ನೀರು ತರುವುದು ತಿಳಿಯುತ್ತಿದ್ದಂತೆ ಒಂದು ದಿನ ನೀರು ಪೂರೈಕೆ ಮಾಡಿದಂತೆ ಮಾಡಿ ನಂತರ ಸುಮ್ಮನಾಗಿಬಿಡುತ್ತಾರೆ. ಗ್ರಾಮದಲ್ಲಿ ಅನುಷ್ಠಾನಗೊಂಡಿರುವ ಯಾವ ಯೋಜನೆಗಳಿಂದಲೂ ಸರಿಯಾಗಿ ಗ್ರಾಮಸ್ಥರಿಗೆ ನೀರು ದೊರಕುತ್ತಿಲ್ಲ. ಅಧಿಕಾರಿಗಳಿಗೆ, ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಹೇಳಿದ್ದರೂ ಕಿವಿಮೇಲೆ ಹಾಕಿಕೊಂಡಿಲ್ಲ. ಜೆಜೆಎಂ ಕಾಮಗಾರಿಯೂ ಅಸಮರ್ಪಕವಾಗಿದ್ದು ಒಂದು ದಿನ ನೀರು ಬಂದಂತೆ ಮಾಡಿ ಬಂದ್ ಆಗಿದೆ. ಒಂದೇ ಕೈ ಪಂಪ್ ಇದ್ದು ಊರಿನವರಿಗೆ ಸಾಕಾಗುವುದಿಲ್ಲ. ಬಾವಿಯ ನೀರು ಕಲುಷಿತಗೊಂಡಿದೆ ಎಂದು ಗ್ರಾಮಸ್ಥರಾದ ನಜೀರ ನದಾಫ, ಆದೇಶ ಕಂಡ್ರಿ, ಮಲ್ಲೇಶ ಕುರಿ, ಗುರು ಹಿರೇಮಠ ದೂರಿದರು.

ಸಣ್ಣ ಸಣ್ಣ ಮಕ್ಕಳನ್ನು ಕರೆದುಕೊಂಡು ಮಹಿಳೆಯರು, ಯುವಕರು, ವೃದ್ಧರು ಕೊಡಗಳನ್ನು ತೆಗೆದುಕೊಂಡು ನದಿ ತೀರಕ್ಕೆ ತೆರಳುತ್ತಿದ್ದಾರೆ. ನೀರಿನ ಪ್ರವಾಹ ಸದ್ಯಕ್ಕೆ ಹೆಚ್ಚಿಲ್ಲ. ಆದರೆ ಮಳೆ ಬಂದರೆ ಪ್ರವಾಹ ಬಂದು ಪ್ರಾಣಹಾನಿ ಆಗುವ ಸಾಧ್ಯತೆಗಳು ಇಲ್ಲದಿಲ್ಲ. ಇಷ್ಟೊಂದು ಗಂಭೀರ ಪರಿಸ್ಥಿತಿ ಮಳೆಗಾಲದಲ್ಲಿದ್ದು ಗ್ರಾಮ ಪಂಚಾಯಿತಿ, ತಾಲ್ಲೂಕು ಆಡಳಿತ ಕುಡಿಯುವ ನೀರಿನ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಬೇಕು. ಮಹಿಳೆಯರು ಕೊಡ ಹೊತ್ತುಕೊಂಡು ನೀರು ತರುವುದೇ ಕಾಯಕ ಎನ್ನುವಂತಾಗಿದ್ದು ನಮ್ಮ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ ಎಂದು ಗ್ರಾಮದ ಮಹಿಳೆಯರಾದ ಸಂಗಮ್ಮ ಕಂಡ್ರಿ, ಚಾಂದಬಿ ನದಾಫ, ಮಹಾದೇವಿ ಕುರಿ,ಬಸಮ್ಮ ಕವಡಿಮಟ್ಟಿ, ಅನಸೂಯ ಹಿರೇಮಠ ಹೇಳುತ್ತಾರೆ.

ಮುದ್ದೇಬಿಹಾಳ ತಾಲ್ಲೂಕಿನ ಅಮರಗೋಳದ ಯುವಕರು ಕೊಡಗಳೊಂದಿಗೆ ನೀರು ತರಲು ಕೃಷ್ಣಾ ನದಿಗೆ ಬಂದಿರುವುದು.
ಮುದ್ದೇಬಿಹಾಳ ತಾಲ್ಲೂಕಿನ ಅಮರಗೋಳದ ಗ್ರಾಮಸ್ಥರು ಬೈಕ್ಸೈಕಲ್ ಮೂಲಕ ನೀರು ತರುತ್ತಿರುವುದು
ಮುದ್ದೇಬಿಹಾಳ ತಾಲ್ಲೂಕಿನ ಅಮರಗೋಳದ ಗ್ರಾಮಸ್ಥರು ಸೈಕಲ್ ಮೂಲಕ ನೀರು ತರುತ್ತಿರುವುದು
ತಂಗಡಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದಿವ್ಯ ಮೌನ ವಹಿಸಿದ್ದಾರೆ. ಜನರು ನೀರಿಗಾಗಿ ಇಷ್ಟೊಂದು ಪರದಾಡುತ್ತಿದ್ದರೂ ಅಮರಗೋಳ ಗ್ರಾಮ ತಮ್ಮ ಪಂಚಾಯಿತಿಗೆ ಸಂಬಂಧವೇ ಇಲ್ಲದಂತೆ ಇದ್ದಾರೆ
–ಬಸವರಾಜ ಗೋಡಿ ಗ್ರಾಮ ಪಂಚಾಯಿತಿ ಸದಸ್ಯ

ನೀರು ಪೂರೈಕೆಗೆ ಕ್ರಮ ಕುಂಚಗನೂರಿನಿಂದ ಹಾಗೂ ಧನ್ನೂರ ಜಾಕ್‌ವೆಲ್‌ನಿಂದ ನೀರು ಪೂರೈಸುವ ಮೋಟರ್‌ಗಳು ಸುಟ್ಟಿದ್ದರಿಂದ ಎರಡು ದಿನಗಳ ಮಟ್ಟಿಗೆ ನೀರಿನ ಸಮಸ್ಯೆ ಉದ್ಭವಿಸಿತ್ತು. ಸದ್ಯಕ್ಕೆ ಧನ್ನೂರನಿಂದ ನೀರು ಪೂರೈಸುವ ಕಾರ್ಯ ನಡೆದಿದೆ. ಗ್ರಾಮದಲ್ಲಿ ಒಂದಿಬ್ಬರು ಕುಡಿಯುವ ನೀರಿನ ನಳದ ಪೈಪ್ ಒಡೆಯುವುದು ಮಾಡುತ್ತಿದ್ದಾರೆ ಎಂದು ಲಿಖಿತ ದೂರನ್ನು ಪಂಚಾಯಿತಿಯಿಂದ ಪೊಲೀಸ್ ಠಾಣೆಗೂ ನೀಡಲಾಗಿದೆ. ಗ್ರಾಮಸ್ಥರಿಗೆ ತೊಂದರೆಯಾಗದಂತೆ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. –ಆರ್.ಎಸ್.ಹಿರೇಗೌಡ್ರ ತಾಲ್ಲೂಕು ಪಂಚಾಯಿತಿ ಪ್ರಭಾರಿ ಇ.ಒ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.