ADVERTISEMENT

ಗುಮ್ಮಟಪುರಕ್ಕೆ ವಾರಕ್ಕೊಮ್ಮೆ ಕುಡಿಯುವ ನೀರು!

ಬಸವರಾಜ ಸಂಪಳ್ಳಿ
Published 11 ಫೆಬ್ರುವರಿ 2024, 7:03 IST
Last Updated 11 ಫೆಬ್ರುವರಿ 2024, 7:03 IST
ಬೆಂಗಳೂರಿನಲ್ಲಿ ಶನಿವಾರ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರನ್ನು ವಿಜಯಪುರ ಮಹಾನಗರ ಪಾಲಿಕೆ ಸದಸ್ಯರ ನಿಯೋಗ ಭೇಟಿ ಮಾಡಿ ವಿಶೇಷ ಅನುದಾನಕ್ಕೆ ಮನವಿ ಮಾಡಿತು. ಉಪ ಮೇಯರ್‌ ದಿನೇಶ್‌ ಹಳ್ಳಿ, ಮುಖಂಡ ಅಬ್ದುಲ್‌ ರಜಾಕ್‌ ಹೊರ್ತಿ ಇದ್ದಾರೆ
ಬೆಂಗಳೂರಿನಲ್ಲಿ ಶನಿವಾರ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರನ್ನು ವಿಜಯಪುರ ಮಹಾನಗರ ಪಾಲಿಕೆ ಸದಸ್ಯರ ನಿಯೋಗ ಭೇಟಿ ಮಾಡಿ ವಿಶೇಷ ಅನುದಾನಕ್ಕೆ ಮನವಿ ಮಾಡಿತು. ಉಪ ಮೇಯರ್‌ ದಿನೇಶ್‌ ಹಳ್ಳಿ, ಮುಖಂಡ ಅಬ್ದುಲ್‌ ರಜಾಕ್‌ ಹೊರ್ತಿ ಇದ್ದಾರೆ   

ವಿಜಯಪುರ: ನಗರಕ್ಕೆ ಕುಡಿಯುವ ನೀರು ಪೂರೈಕೆ ಮೂಲಗಳಲ್ಲಿ ಒಂದಾದ ಭೂತನಾಳ ಕೆರೆ ಭರಿದಾಗಿರುವುದರಿಂದ ಬೇಸಿಗೆಯಲ್ಲಿ ವಾರಕ್ಕೊಮ್ಮೆ ಮಾತ್ರ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ಜಲಮಂಡಳಿ, ಮಹಾನಗರ ಪಾಲಿಕೆ ಸಾರ್ವಜನಿಕರಿಗೆ ತಿಳಿಸಿವೆ.

ಬೇಸಿಗೆ ಆರಂಭದ ದಿನಗಳಲ್ಲೇ ಗುಮ್ಮಟನಗರಿಗೆ ನೀರಿನ ಕೊರತೆ ಎದುರಾಗಿದ್ದು, ಸಾರ್ವಜನಿಕರು ಮುಂದಿನ ನಾಲ್ಕೈದು ತಿಂಗಳು ಕುಡಿಯುವ ನೀರಿಗಾಗಿ ಪರಿತಪಿಸುವ ಸಾಧ್ಯತೆ ದಟ್ಟವಾಗಿದೆ.

ಪ್ರತಿದಿನ ಮನೆ, ಮನೆಗೆ ಕಸ ಸಂಗ್ರಹಿಸಲು ಬರುವ ಮಹಾನಗರ ಪಾಲಿಕೆ ವಾಹನಗಳಲ್ಲಿ ಶನಿವಾರದಿಂದ ಈ ಸಂಬಂಧ ಸಾರ್ವಜನಿಕರ ಗಮನಕ್ಕೆ ತಂದಿರುವ ಜಲಮಂಡಳಿ, ಕುಡಿಯುವ ನೀರಿನ್ನು ಹಿತಮಿತವಾಗಿ ಬಳಕೆ ಮಾಡಬೇಕು, ಯಾವುದೇ ಕಾರಣಕ್ಕೂ ಪೋಲು ಮಾಡಬಾರದು ಎಂದು ಮನವಿ ಮಾಡಿದೆ.

ADVERTISEMENT

ಅಲ್ಲದೇ, ಮನೆ ಮುಂದೆ ರಸ್ತೆಗೆ ದೂಳು ಹಾರಬಾರದು ಎಂಬ ಕಾರಣಕ್ಕೆ ನೀರನ್ನು ಸಿಂಪಡಿಸುವುದಾಗಲಿ, ಗಿಡ–ಮರಗಳಿಗೆ ನೀರು ಹಾಕುವುದಾಗಲಿ, ವಾಹನಗಳನ್ನು ಸ್ವಚ್ಛಗೊಳಿಸುವುದಾಗಲಿ, ಅನಗತ್ಯವಾಗಿ ಚರಂಡಿಗೆ ನೀರನ್ನು ಹರಿಬಿಟ್ಟಿರುವುದು ಕಂಡುಬಂದರೆ ಅಂತವರ ಮನೆಯ ನಳದ ಸಂಪರ್ಕವನ್ನು ಯಾವುದೇ ಮುನ್ಸೂಚನೆ, ಎಚ್ಚರಿಕೆ ನೀಡದೇ ಬಂದ್‌ ಮಾಡಲಾಗುವುದು ಹಾಗೂ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಕೃಷ್ಣೆಯಲ್ಲಿದೆ ನೀರು:

ವಿಜಯಪುರ ನಗರಕ್ಕೆ ಕುಡಿಯುವ ನೀರು ಪೂರೈಸುವ ಕೃಷ್ಣಾ ನದಿಯಲ್ಲಿ ಸಾಕಷ್ಟು ನೀರಿದೆ. ಸದ್ಯ ನೀರಿನ ಕೊರತೆ ಇಲ್ಲವಾದರೂ ಮಹಾನಗರ ಪಾಲಿಕೆ ಮತ್ತು ಜಲ ಮಂಡಳಿ ನೀರಿನ ಪೂರೈಕೆಗೆ ಅಗತ್ಯ ಮುಂಜಾಗೃತಾ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವ ಪರಿಣಾಮ ನಗರಕ್ಕೆ ಜಲಕಂಟಕ ಎದುರಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಕೆಡಿಪಿ ಸಭೆ ಮತ್ತು ಮಹಾನಗರ ಪಾಲಿಕೆ ಸಭೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದರೂ ಪ್ರಯೋಜನಕ್ಕೆ ಬಂದಿಲ್ಲ. ಜಲಮಂಡಳಿ ಮತ್ತು ಪಾಲಿಕೆ ಅಧಿಕಾರಿಗಳು ಈ ಸಂಬಂಧ ಯಾವುದೇ ಕ್ರಮಕೈಗೊಳ್ಳದೇ ಕೈಚೆಲ್ಲಿದ ಪರಿಣಾಮ ಇದೀಗ ಗುಮ್ಮಟಪುರದ ಜನ ಸಮಸ್ಯೆ ಎದುರಿಸುವಂತಾಗಿದೆ.

ಆದರೆ, ಈ ಕುರಿತು ಜಲಮಂಡಳಿ, ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳುವುದೇ ಬೇರೆ. ಭೂತನಾಳ ಕೆರೆಗೆ ನೀರು ಹರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಕೆಬಿಜಿಎನ್‌ಎಲ್‌ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಪರಿಣಾಮವೇ ಇಂದು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಲು ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

₹100 ಕೋಟಿ ಅನುದಾನ ಭರವಸೆ
ವಿಜಯಪುರ: ನಗರದ ಸಮಗ್ರ ಅಭಿವೃದ್ಧಿಗೆ ₹100 ಕೋಟಿ ವಿಶೇಷ ಅನುದಾನ ನೀಡುವುದಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರು ಬೆಂಗಳೂರಿನಲ್ಲಿ ಶನಿವಾರ ಭೇಟಿಯಾದ ಮೇಯರ್‌ ಮೆಹಜಬೀನ್‌ ಅಬ್ದುಲ್‌ ರಜಾಕ್‌ ಹೊರ್ತಿ ನೇತೃತ್ವದ ಕಾಂಗ್ರೆಸ್‌ ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ಉಪ ಮೇಯರ್‌ ದಿನೇಶ್‌ ಹಳ್ಳಿ ತಿಳಿಸಿದ್ದಾರೆ. ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು ನಗರದಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವುದರಿಂದ ನೀರಿನ ಸಮಸ್ಯೆ ನಿವಾರಣೆಗಾಗಿ ₹25 ಕೋಟಿಯನ್ನು ತುರ್ತಾಗಿ ನೀಡುವುದಾಗಿಯೂ ಸಚಿವರು ಭರವಸೆ ನೀಡಿದ್ದಾರೆ ಎಂದರು. ಪಾಲಿಕೆ ಕಾಂಗ್ರೆಸ್‌ ಸದಸ್ಯರನ್ನೊಳಗೊಂಡ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರನ್ನು ಭೇಟಿಯಾಗಿ ಭೂತನಾಳ ಕೆರೆಗೆ ತಿಡಗುಂದಿ ಅಕ್ವಾಡೆಕ್ಟ್‌ನಿಂದ ನೀರು ಹರಿಸಲು ಕೆಬಿಜಿಎನ್‌ಎಲ್‌ನಿಂದ ಅನುಮತಿ ಕೊಡಿಸುವಂತೆ ಕೋರಿದರು. ಬಳಿಕ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರನ್ನು ಭೇಟಿಯಾಗಿ ಅನುದಾನಕ್ಕೆ ಮನವಿ ಸಲ್ಲಿಸಿದರು.
14 ಎಂಎಲ್‌ಡಿ ನೀರಿನ ಕೊರತೆ
ವಿಜಯಪುರ: ಮಹಾನಗರ ಪಾಲಿಕೆಯ 35 ವಾರ್ಡ್‌ಗಳಿಗೆ ಪ್ರತಿನಿತ್ಯ ಪೂರೈಕೆಗೆ 74 ಎಂಎಲ್‌ಡಿ ನೀರಿನ ಅಗತ್ಯವಿದೆ. ಭೂತನಾಳದಿಂದ 10 ಕೃಷ್ಣಾ ನದಿಯಿಂದ(ಕೊಲ್ಹಾರದಿಂದ) 60 ಎಂಎಲ್‌ಡಿ ಪೂರೈಕೆಯಾಗುತ್ತಿತ್ತು. ಆದರೆ ಈಗ ಭೂತನಾಳ ಕೆರೆ ಭರಿದಾಗಿರುವುದರಿಂದ ನೀರಿನ ಕೊರತೆಯಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್‌ ಸೌದಾಗರ ‘ಪ್ರಜಾವಾಣಿ’ಗೆ ತಿಳಿಸಿದರು. ಕೊಲ್ಹಾರದಿಂದ ವಿಜಯಪುರಕ್ಕೆ ಈ ಮೊದಲು ನೀರು ‍ಪೂರೈಕೆ ಆಗುತ್ತಿದ್ದ ಪೈಪ್‌ಲೈನ್‌  2010ರಿಂದಲೇ ಸ್ಥಗಿತವಾಗಿದ್ದು ಅದನ್ನು ಪುನರಾರಂಭಿಸುವ ಕಾರ್ಯ ನಡೆದಿದೆ. ಜೊತೆಗೆ ತಿಡಗುಂದಿ ಅಕ್ವಾಡೆಕ್ಟ್‌ನಿಂದ ಭೂತನಾಳ ಕೆರೆಗೆ ನೀರು ಹರಿಸಲು ₹7.5 ಕೋಟಿ ಮೊತ್ತದ ಯೋಜನೆಯೊಂದು ಸಿದ್ದಪಡಿಸಲಾಗಿದೆ. ಇದಕ್ಕೆ ಕೆಬಿಜಿಎನ್‌ಎಲ್‌ನ ಒಪ್ಪಿಗೆಗಾಗಿ ಕಾದಿದೆ. ಈ ಎರಡು ಯೋಜನೆಗಳು ಆದರೆ ನೀರು ಪೂರೈಕೆ ವ್ಯವಸ್ಥೆ ಸರಿ ಹೋಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.