ADVERTISEMENT

ಅಭಿವೃದ್ಧಿ ವಿಷಯದಲ್ಲಿ ರಾಜಕೀಯವಿಲ್ಲ: ಕಾರಜೋಳ

ಚಡಚಣ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 14:33 IST
Last Updated 18 ಜನವರಿ 2021, 14:33 IST
ಚಡಚಣ ತಾಲ್ಲೂಕಿನ ಹತ್ತಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ ಮತ್ತು ಶಾಸಕ ದೇವಾನಂದ ಚವ್ಹಾಣ ಅವರನ್ನು ಸನ್ಮಾನಿಸಲಾಯಿತು
ಚಡಚಣ ತಾಲ್ಲೂಕಿನ ಹತ್ತಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ ಮತ್ತು ಶಾಸಕ ದೇವಾನಂದ ಚವ್ಹಾಣ ಅವರನ್ನು ಸನ್ಮಾನಿಸಲಾಯಿತು   

ಚಡಚಣ: ನಾಗಠಾಣ ಮತಕ್ಷೇತ್ರ ಸೇರಿದಂತೆ ಚಡಚಣ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ವಿಷಯದಲ್ಲಿ ತಾವೆಂದೂ ರಾಜಕೀಯ ಮಾಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ ಪ್ರವಾಸಿ ಮಂದಿರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಿ.ಎಸ್‌.ಯಡಿಯೂರಪ್ಪ ರಾಜ್ಯದ ಚುಕ್ಕಾಣಿ ಹಿಡಿದ ಕೆಲವೇ ದಿನಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತು. ನಂತರ ಕೋವಿಡ್‌ ಒಕ್ಕರಿಸಿಕೊಂಡಿತು. ಇದರಿಂದ ಸರ್ಕಾರಕ್ಕೆ ಬರಬೇಕಾದ ಆದಾಯ ಕುಂಟಿತಗೊಂಡಿತು. ಆದಾಗ್ಯೂ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.

ADVERTISEMENT

60 ವರ್ಷ ರಾಜ್ಯವನ್ನಾಳಿದ ಕಾಂಗ್ರೆಸ್‌ ಮಾಡದ ಕಾರ್ಯಗಳನ್ನು ಬಿಜೆಪಿ ಸರ್ಕಾರ ಕೆಲವೇ ವರ್ಷಗಳಲ್ಲಿ ಮಾಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾಗಳು ಎಲ್ಲ ಹಳ್ಳಿಗಳಿಗೆ ವಿದ್ಯುತ್‌‌ ಸಂಪರ್ಕ, ಜನ ಔಷಧ ಕೇಂದ್ರ, ಕಿಸಾನ್‌ ಸಮ್ಮಾನ್‌ ಯೋಜನೆ, ಗ್ಯಾಸ್‌ ವಿತರಣೆ, ಉತ್ತಮ ರಸ್ತೆಗಳ ನಿರ್ಮಾಣ, ಆತ್ಮ ನಿರ್ಭರ ಯೋಜನೆ, ರೈತರಿಗೆ ಸಮರ್ಪಕ ಯೂರಿಯಾ ಪೂರೈಕೆ ಮಾಡಿದೆ ಎಂದು ಹೇಳಿದರು.

ರಾಜ್ಯದ ಗಡಿ ಗ್ರಾಮ ಶಿರಾಡೋಣದಿಂದ ಲಿಂಗಸೂರ ರಸ್ತೆಯನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಚಡಚಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸ್ಥಳ ನಿಗದಿ ಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸಂಸದ ರಮೇಸ ಜಿಗಜಿಣಗಿ ಮಾತನಾಡಿ, ಭೀಮಾ ನದಿಗೆ 9 ಬಾಂದಾರ ನಿರ್ಮಾಣಕ್ಕೆ ಸ್ಪಂದಿಸಿದ್ದೇನೆ. ರಸ್ತೆ ನಿರ್ಮಾಣ ಸೇರಿದಂತೆ ಭಾಗದ ಹಲವಾರು ಕಾಮಗಾರಿಗಳನ್ನು ಕೈಗೊಂಡಿದ್ದೇನೆ. ಸದಾ ಜನರ ಮಧ್ಯದಲ್ಲಿ ಬೆರೆತು ಜನರ ಸೇವಕನಾಗಿ ಕೆಲಸ ಮಾಡಿದ್ದೇನೆ. ನಾನು ದೊಡ್ಡವನಲ್ಲ. ತಾವು ದೊಡ್ಡವರು. ಅದಕ್ಕಾಗಿಯೇ ನನ್ನನ್ನು 45 ವರ್ಷಗಳಿಂದ ಆರಿಸಿ ಅಧಿಕಾರಕ್ಕೆ ತಂದಿದ್ದೀರಿ ಎಂದರು.

ಶಾಸಕ ದೇವಾನಂದ ಚವ್ಹಾಣ ಮಾತನಾಡಿ, ಡಿಸಿಎಂ ಅವರು ಮಧೋಳ ಮತಕ್ಷೇತ್ರದ ಮೇಲಿನ ಪ್ರೀತಿಯನ್ನು ನಾಗಠಾಣ ಮತಕ್ಷೇತ್ರದ ಮೇಲೆ ತೋರಲಿ. ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಲಿ. ಅವರು ಕೈಗೊಳ್ಳುವ ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೆ ಸಹಕರಿಸುವೆ ಎಂದರು.

ಕ್ಷೇತ್ರದಲ್ಲಿ ಅರ್ಧಕ್ಕೆ ನಿಂತಿರುವ ಎಲ್ಲ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಳಿಸಲು ಉಪ ಮುಖ್ಯಮಂತ್ರಿಗಳು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ವಿವಿಧ ಕಾಮಗಾರಿಗಳಿಗೆ ಚಾಲನೆ:

ಲೋಣಿ ಕ್ರಾಸ್‌ನಿಂದ ತದ್ದೇವಾಡ ಗ್ರಾಮದ ವರೆಗೆ ನಿರ್ಮಾಣವಾಗಿರುವ ಡಾಂಬರ್‌ ರಸ್ತೆ ಲೋಕಾರ್ಪಣೆ, ₹ 126 ಕೋಟಿ ವೆಚ್ಚದಲ್ಲಿ ಉಮರಾಣಿ ಗ್ರಾಮದ ಹತ್ತಿರದ ಬಾಂದಾರ ಎತ್ತರಿಸುವ ಕಾಮಗಾರಿಗೆ ಭೂಮಿ ಪೂಜೆ, ಹತ್ತಳ್ಳಿ ಗ್ರಾಮದ ಪಕ್ಕದ ಹಳ್ಳಕ್ಕೆ ಸೇತುವೆ ನಿರ್ಮಾಣದ ಶಂಕು ಸ್ಥಾಪನೆ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ 4ರಡಿ ಚಡಚಣ-ಹಾವಿನಾಳ-ಹತ್ತಳ್ಳಿ-ಲೋಣಿ(ಬಿ.ಕೆ) ಗ್ರಾಮದಿಂದ ರಾಜ್ಯ ಹೆದ್ದಾರಿ 41ಕ್ಕೆ ಕೂಡು ರಸ್ತೆ ಸುಧಾರಣೆಗೆ ಉಪಮುಖ್ಯಮಂತ್ರಿ ಕಾರಜೋಳ ಚಾಲನೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಭೀಮಾಶಂಕರ ಬಿರಾದಾರ, ಶಿವಯೋಗೆಪ್ಪ ನೇದಲಗಿ, ಶಿವಶರಣ ಭೈರಗೊಂಡ, ಜಿ.ಪಂ.ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಸದಸ್ಯ ಅಣ್ಣಪ್ಪ ಖೈನೂರ, ಪಂಚಪ್ಪ ಕಲಬುರ್ಗಿ, ಚಡಚಣ ಮಂಡಳ ಬಿಜೆಪಿ ಅಧ್ಯಕ್ಷ ರಾಮ ಅವಟಿ, ಪ್ರಧಾನ ಕಾರ್ಯದರ್ಶಿ ಅಪ್ಪುಗೌಡ ಬಿರಾದಾರ, ಮಾಜಿ ಅಧ್ಯಕ್ಷ ಕಲ್ಲು ಉಟಗಿ, ಜಿಪಂ.ಸಿಇಒ ಲಕ್ಷ್ಮೀಕಾಂತ ರೆಡ್ಡಿ, ಉಪ ವಿಭಾಗಾಧಿಕಾರಿ ರಾಹುಲ್‌ ಶಿಂಧೆ, ತಹಶೀಲ್ದಾರ್‌ ಸುರೇಶ ಚವಲರ, ಪಿಡಬ್ಲ್ಯುಡಿ ವಿಭಾಗೀಯ ಎಂಜನಿಯರ್‌ ಇ.ವೈ. ಪವಾರ, ಕಾರ್ಯ ನಿರ್ವಾಹಕ ಎಂಜನಿಯರ್‌ ಬಿ.ಬಿ.ಪಾಟೀಲ, ಸಹಾಯಕ ಎಂಜನಿಯರ್‌ ಆರ್.ಆರ್.ಕತ್ತಿ, ಎಸ್‌.ಎಂ.ಪಾಟೀಲ ಇದ್ದರು.

‘ನೆಲ, ಜಲ ವಿಷಯದಲ್ಲಿ ರಾಜಿ ಇಲ್ಲ’

ಬೆಳಗಾವಿ ಕನ್ನಡದ ನೆಲವಾಗಿದ್ದು, ರಾಜ್ಯದ ನೆಲ, ಜಲ ವಿಷಯಗಳಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಲಾಗುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ಮರಾಠಿ ಭಾಷಿಕರೂ ಕೂಡ ನಾಡದೇವಿಗೆ ಕೈಮುಗಿದು ಹಬ್ಬದ ರೀತಿಯಲ್ಲಿ ಆಚರಿಸಿದ್ದಾರೆ ಎಂದರು.

ಛತ್ರಪತಿ ಶಿವಾಜಿ ಮಹಾರಾಜರ ಕಾಲದಿಂದಲೂ ಕನ್ನಡಿಗರು ಮತ್ತು ಮರಾಠಿಗರು ಸಹೋದರತೆಯಿಂದ ಜೀವನ ನಡೆಸುತ್ತಿದ್ದು, ಉತ್ತಮ ಬಾಂಧವ್ಯ ಹೊಂದಿದ್ದಾರೆ. ಜನತೆಗೆ, ಸಮಾಜದಲ್ಲಿ ಎಲ್ಲ ಜನಪ್ರತಿನಿಧಿಗಳಿಂದ ಒಳ್ಳೆಯ ಸಂದೇಶ ರವಾನೆಯಾಗಲಿ ಎಂದು ಹೇಳಿದರು.

ಚಡಚಣಕ್ಕೆ ವಿವಿಧ ಸರ್ಕಾರಿ ಕಚೇರಿಗಳು ಬರಬೇಕಾಗಿದ್ದು ಇದಕ್ಕಾಗಿ ಸೂಕ್ತ ಜಾಗವನ್ನು ಗುರುತಿಸಿದ್ದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಲಾಗುವುದು
–ಗೋವಿಂದ ಕಾರಜೋಳ
ಉಪಮುಖ್ಯಮಂತ್ರಿ

ಬೋರಿಹಳ್ಳಕ್ಕೆ ₹ 5 ಕೋಟಿ ಮೊತ್ತದಲ್ಲಿ ಸೇತುವೆ

ಉಮರಾಣಿ ಬಾಂದಾರ ಎತ್ತರಿಸುವ ಕಾಮಗಾರಿಗೆ ಭೂಮಿ ಪೂಜೆ

ಚಡಚಣ-ಹಾವಿನಾಳ-ಹತ್ತಳ್ಳಿ-ಲೋಣಿ(ಬಿ.ಕೆ) ರಸ್ತೆ ದುರಸ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.