ADVERTISEMENT

ವಿಜಯಪುರ | ಮಾದಕ ವಸ್ತುಗಳಿಗೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿ ಡಾ.ಆನಂದ ಕೆ.

ಶಾಲಾ-ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ಘಟಕದಿಂದ ಜಾಗೃತಿ ಮೂಡಿಸಿ 

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 6:19 IST
Last Updated 19 ಸೆಪ್ಟೆಂಬರ್ 2025, 6:19 IST
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮಾದಕ ದ್ರವ್ಯಗಳ ನಿರ್ಮೂಲನಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ಮಾತನಾಡಿದರು
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮಾದಕ ದ್ರವ್ಯಗಳ ನಿರ್ಮೂಲನಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ಮಾತನಾಡಿದರು   

ವಿಜಯಪುರ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕಲು  ಶಾಲಾ, ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ (ಆ್ಯಂಟಿ ಡ್ರಗ್) ಘಟಕ ಸ್ಥಾಪಿಸಿ, ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಸೂಚನೆ ನೀಡಿದರು. 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮಾದಕ ದ್ರವ್ಯಗಳ ನಿರ್ಮೂಲನಾ ಸಮಿತಿ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟವಾಗದಂತೆ ಸಂಬಂಧಿಸಿದ ಇಲಾಖೆಗಳು ಸಮನ್ವಯ ಸಾಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಗ್ರಾಮ ಪಂಚಾಯಿತಿ  ಹಾಗೂ ಸ್ಥಳೀಯ ಆಡಳಿತದೊಂದಿಗೆ ಸಂಪರ್ಕ ಸಾಧಿಸಿ, ಅನಧಿಕೃತವಾಗಿ ಮದ್ಯ ಮಾರಾಟ ಮಾಡುವವರ ಮೇಲೆ ಕ್ರಮ ವಹಿಸಬೇಕು. ಅನಧಿಕೃತ ಮದ್ಯ ಮಾರಾಟ ಮಾಡುವವರ ಟ್ರೇಡ್ ಲೈಸೆನ್ಸ್ ರದ್ಧುಪಡಿಸಲು ಕ್ರಮ ವಹಿಸಬೇಕು ಎಂದರು.

ADVERTISEMENT

ಅಬಕಾರಿ ಉಪ ಆಯುಕ್ತ ಮುರಳೀಧರ ಎಚ್.ಒ. ಮಾತನಾಡಿ, ಅಬಕಾರಿ ಇಲಾಖೆಯು ಆಗಸ್ಟ್‌ನಲ್ಲಿ 119 ದಾಳಿ ಕೈಗೊಂಡಿದ್ದು, ಈ ಪೈಕಿ 10 ದೊಡ್ಡ ಪ್ರಕರಣಗಳು, ದಾಬಾ ಹೊಟೇಲ್ ಸಾರ್ವಜನಿಕ ಸ್ಥಳಗಳಲ್ಲಿ 39 ಪ್ರಕರಣಗಳು, ಲೈಸನ್ಸ್‌ ಅಂಗಡಿಯಲ್ಲಿ 15 ಪ್ರಕರಣಗಳು ಸೇರಿದಂತೆ ಒಟ್ಟು 64 ಪ್ರಕರಣಗಳನ್ನು ದಾಖಲಿಸಿಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ನಶಾ ಮುಕ್ತ ಕೇಂದ್ರಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ಆಯಾ ತಾಲ್ಲೂಕಿನ ವೈದ್ಯಾಧಿಕಾರಿಗಳು ಒಳರೋಗಿ, ಹೊರರೋಗಿ ಕೈಗೊಂಡ ವೈದ್ಯಕೀಯ ಚಿಕಿತ್ಸೆ ಔಷಧೋಪಚಾರ ಬಗ್ಗೆ ನಿಗಾ ವಹಿಸಿ ಮಾಹಿತಿಯನ್ನು ಸಂಬಂಧಿಸಿದವರಿಗೆ ವರದಿ ಮಾಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿರುವ ಟೆಲಿ ಮನಸ್ ಸಹಾಯವಾಣಿ ಸಂಖ್ಯೆ 14416ಕ್ಕೆ ಕರೆಮಾಡಿ ಕೌನ್ಸೆಲಿಂಗ್ ಪಡೆಯುವಂತೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಈ ಮಾಹಿತಿಯನ್ನು ಎಲ್ಲ ಶಾಲಾ ಕಾಲೇಜಿನಲ್ಲಿ ಪ್ರದರ್ಶಿಸಬೇಕು. ಮಾದಕ ದ್ರವ್ಯ ಬೆಳೆಯುವಂತಹ ಸಸಿ ಗಿಡಗಳ ಮೇಲೆ ಅರಣ್ಯ ಇಲಾಖೆ ನಿರಂತರವಾಗಿ ನಿಗಾ ಇರಿಸಬೇಕು. ಇಂತಹ ಸಸಿ-ಗಿಡಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು. 

ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಔಷಧದ ಮಳಿಗೆಗಳಲ್ಲಿ ಕಡ್ಡಾಯವಾಗಿ ವೈದ್ಯರ ಅನುಮತಿ ಪಡೆದು ಔಷಧ ಮಾರಾಟಕ್ಕೆ ಕ್ರಮ ವಹಿಸಬೇಕು ಎಂದರು.

ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಿಂ ಬಾಬಾ, ಪೀಟರ್ ಅಲೆಕ್ಸಾಂಡರ್ ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.