
ಆಲಮಟ್ಟಿ: ವಂದಾಲ ಗ್ರಾಮದ ಪ್ರಸಿದ್ಧ ಬನಶಂಕರಿ ದೇವಿ ಜಾತ್ರೆ ಅಂಗವಾಗಿ ಗುರುವಾರ 'ದ್ಯಾಮವ್ವನ ಸೋಗು' ಮೆರವಣಿಗೆ ನಡೆಯಿತು. ಪಾದಕಟ್ಟೆಯಿಂದ ಆರಂಭವಾದ ಮೆರವಣಿಗೆ ಬನಶಂಕರಿ ದೇವಿ ದೇವಸ್ಥಾನದವರೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಯುವಕರ ಡೊಳ್ಳುನಾದ, ಕರಡಿ ಮಜಲು, ಪೂರ್ವಿಕರಿಂದ ನಡೆಸಿಕೊಂಡು ಬಂದ ಹತ್ತಕ್ಕೂ ಅಧಿಕ ವೇಷಧಾರಿಗಳು ಜಾತ್ರೆಯ ಸೊಬಗನ್ನು ಹೆಚ್ಚಿಸಿತು.
ಜನಪದ ಕಲೆಯ ಪ್ರತೀಕವಾಗಿರುವ ನೂರಾರು ವರ್ಷಗಳಿಂದಲೂ ಸಾಗಿ ಬಂದಿರುವ ಈ ಸೋಗಿನ ಪರಂಪರೆ ಆಯಾ ಮನೆತನಗಳ ಇಂದಿನ ಪೀಳಿಗೆಯವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
`ದ್ಯಾಮವ್ವ' ಎಂಬ ದೇವಿಯ ಪ್ರತಿರೂಪವಾಗಿ ಬಸವರಾಜ ಕುಪ್ಪಸ್ತ ಎಂಬ ಯುವಕ ವೇಷಧಾರಿಯಾಗಿದ್ದ. ದೇವಿಯ ಭಕ್ತರಾಗಿ ಕಾಡಿನಲ್ಲಿ ವಾಸಿಸುವ ಪೋತರಾಜ, ಚೌಡಕಿ ಪದಗಳನ್ನು ಹಾಡುವ ಜೋಗಮ್ಮ, ಡೊಳ್ಳು ಬಾರಿಸುವ ಯುವಕರ ವೇಷಧಾರಿಗಳು ಗಮನಸೆಳೆದರು. ನಿತ್ಯ ಬದುಕಿನಲ್ಲಿ ವಿವಿಧ ಸೋಗು ಹಾಕುವ ಈ ಯುವಕರು ಈ ಪಾತ್ರಗಳನ್ನು ನಿರ್ವಹಿಸದಿದ್ದರೂ, ಜಾತ್ರೆಯ ದಿನ ಮಾತ್ರ ಅವರವರ ಮನೆತನಕ್ಕೆ ಆದಿ ಕಾಲದಿಂದಲೂ ಬಂದ ವಿಶೇಷ ಸೋಗನ್ನು ಈಗಿನ ಯುವಕರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ವಿಶೇಷ ಅಲಂಕಾರ: ದೇವಸ್ಥಾನಕ್ಕೆ ಈ ಬಾರಿ ಹೂವು ಸೇರಿದಂತೆ ನಾನಾ ಸಾಮಗ್ರಿಗಳನ್ನು ಬಳಸಿ ಗ್ರಾಮದ ಕಲಾವಿದ ವೆಂಕಟೇಶ ತಳಗೇರಿ ಹಾಗೂ ಅವರ ತಂಡದವರು ವಿಶೇಷ ಅಲಂಕಾರ ಮಾಡಿದ್ದು ಜಾತ್ರೆಗೆ ಆಗಮಿಸುವ ಭಕ್ತಾದಿಗಳೆಲ್ಲಾ ಈ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಆಲಮಟ್ಟಿ ಸಮೀಪದ ವಂದಾಲದಲ್ಲಿ ಗುರುವಾರ ಬನಶಂಕರಿ ದೇವಿ ಜಾತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.