ADVERTISEMENT

ಬನಶಂಕರಿ ದೇವಿ ಜಾತ್ರೆ: ಗಮನ ಸೆಳೆದ ‘ದ್ಯಾಮವ್ವನ ಸೋಗು’

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 16:05 IST
Last Updated 25 ನವೆಂಬರ್ 2021, 16:05 IST
ನಿಡಗುಂದಿಯಲ್ಲಿ ಗುರುವಾರ ನಡೆದ 'ದ್ಯಾಮವ್ವನ ಸೋಗು' ಮೆರವಣಿಗೆಯಲ್ಲಿ ಪುರುಷರು ಮಹಿಳೆ ವೇಷ ಧರಿಸಿ ಗಮನ ಸೆಳೆದರು
ನಿಡಗುಂದಿಯಲ್ಲಿ ಗುರುವಾರ ನಡೆದ 'ದ್ಯಾಮವ್ವನ ಸೋಗು' ಮೆರವಣಿಗೆಯಲ್ಲಿ ಪುರುಷರು ಮಹಿಳೆ ವೇಷ ಧರಿಸಿ ಗಮನ ಸೆಳೆದರು   

ನಿಡಗುಂದಿ: ಪಟ್ಟಣದಲ್ಲಿ ಬನಶಂಕರಿ ದೇವಿ ಜಾತ್ರೆ ಅಂಗವಾಗಿ ಗುರುವಾರ 'ದ್ಯಾಮವ್ವನ ಸೋಗು' ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಕಳಸದ ಕಟ್ಟೆಯಿಂದ ಆರಂಭವಾದ ಮೆರವಣಿಗೆ ಬನಶಂಕರಿ ದೇವಿ, ಗೌರೀಶ್ವರ ದೇವಸ್ಥಾನದವರೆಗೆ ನಡೆಯಿತು. ಯುವಕರ ಡೊಳ್ಳುನಾದ, ಕರಡಿ ಮಜಲು, ಪೂರ್ವಿಕರಿಂದ ನಡೆಸಿಕೊಂಡು ಬಂದ ಹತ್ತಕ್ಕೂ ಅಧಿಕ ವೇಷಧಾರಿಗಳು ಜಾತ್ರೆಯ ಸೊಬಗನ್ನು ಹೆಚ್ಚಿಸಿತು.

ಜನಪದ ಶೈಲಿಯ ಆನೆ ಸೋಗು, ನವಿಲು ಸೋಗು, ಕುದುರೆ ಸೋಗು, ಕರಡಿ ಸೋಗು....ದೊಡ್ಡ ದೊಡ್ಡ ವಿವಿಧ ಗೊಂಬೆಗಳ ದೊಡ್ಡ ಮುಖವಾಡಗಳನ್ನು ಹೊತ್ತಿರುವ ವ್ಯಕ್ತಿಗಳು ಮೆರವಣಿಗೆಯ ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದರು. ಜನಪದ ಕಲೆಯ ಪ್ರತೀಕವಾಗಿರುವ ನೂರಾರು ವರ್ಷಗಳಿಂದಲೂ ಸಾಗಿ ಬಂದಿರುವ ಈ ಸೋಗಿನ ಪರಂಪರೆ ಆಯಾ ಮನೆತನಗಳ ಇಂದಿನ ಪೀಳಿಗೆಯವರು ಮುಂದುವ ರೆಸಿಕೊಂಡು ಹೋಗುತ್ತಿದ್ದಾರೆ.

`ದ್ಯಾಮವ್ವ' ಎಂಬ ದೇವಿಯ ಪ್ರತಿರೂಪವಾಗಿ ಯುವಕನೋರ್ವ ವೇಷಧಾರಿಯಾಗಿದ್ದ. ದೇವಿಯ ಭಕ್ತರಾಗಿ ಕಾಡಿನಲ್ಲಿ ವಾಸಿಸುವ ಪೋತರಾಜ, ಚೌಡಕಿ ಪದಗಳನ್ನು ಹಾಡುವ ಜೋಗಮ್ಮ, ಡೊಳ್ಳು ಬಾರಿಸುವ ಯುವಕರ ವೇಷಧಾರಿಗಳು ಗಮನಸೆಳೆದರು. ನಿತ್ಯ ಬದುಕಿನಲ್ಲಿ ವಿವಿಧ ಸೋಗು ಹಾಕುವ ಈ ಯುವಕರು ಈ ಪಾತ್ರಗಳನ್ನು ನಿರ್ವಹಿಸದಿದ್ದರೂ, ಜಾತ್ರೆಯ ದಿನ ಮಾತ್ರ ಅವರವರ ಮನೆತನಕ್ಕೆ ಆದಿ ಕಾಲದಿಂದಲೂ ಬಂದ ವಿಶೇಷ ಸೋಗನ್ನು ಈಗಿನ ಯುವಕರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.