ADVERTISEMENT

ಭೂಕಂಪನ: ಉನ್ನತಮಟ್ಟದ ಅಧ್ಯಯನವಾಗಲಿ

ವಿಧಾನಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 12:29 IST
Last Updated 15 ಸೆಪ್ಟೆಂಬರ್ 2022, 12:29 IST
ಸುನೀಲಗೌಡ ಪಾಟೀಲ
ಸುನೀಲಗೌಡ ಪಾಟೀಲ   

ವಿಜಯಪುರ: ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿರುವ ಭೂಕಂಪನದ ಕುರಿತು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ವಿಧಾನಮಂಡಲ ಅಧಿವೇಶನದಲ್ಲಿ ಗುರುವಾರ ಧ್ವನಿ ಎತ್ತಿದರು.

ಜಿಲ್ಲೆಯಲ್ಲಿ ಮೇಲಿಂದ ಮೇಲೆ ಈ ವರೆಗೆ ಸುಮಾರು 52 ದಾರಿ ಭೂಕಂಪನವಾಗಿದೆ. ಜನರು ಆತಂಕದಲ್ಲಿದ್ದಾರೆ. ಮನೆಯ ಹೊರಗಡೆ ಮಲಗಬೇಕೆಂದರೆ ಮಳೆ ಇರುತ್ತದೆ. ಮನೆ ಒಳಗಡೆ ಕುಳಿತುಕೊಳ್ಳಬೇಕೆಂದರೆ ಭೂಕಂಪನವಾಗುತ್ತದೆ ಎಂದು ಜನ ಹೆದರುತ್ತಿದ್ದಾರೆ ಎಂದು ಅವರು ತಿಳಿಸಿದರು.

ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ಜಿಲ್ಲಾಡಳಿತ ಮತ್ತು ಗಣಿ ಭೂವಿಜ್ಞಾನ ಇಲಾಖೆ ಸ್ಪಷ್ಟ ತಾಂತ್ರಿಕ ಮಾಹಿತಿಯನ್ನು ನೀಡುತ್ತಿಲ್ಲ. ಹೀಗಾಗಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ
ತಜ್ಞರನ್ನು ಕರೆಯಿಸಿ ಭೂಕಂಪನಕ್ಕೆ ಕಾರಣ ಕುರಿತು ಅಧ್ಯಯನ ನಡೆಸಬೇಕು. ಈ ಮೂಲಕ ಜನರಲ್ಲಿರುವ ಭಯವನ್ನು ಹೊಗಲಾಡಿಸಬೇಕು ಎಂದು ಅವರು ಆಗ್ರಹಿಸಿದರು.

ADVERTISEMENT

ಸುನೀಲಗೌಡ ಪಾಟೀಲ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಆರ್‌.ಅಶೋಕ, ವಿಜಯಪುರ ಜಿಲ್ಲೆಯಲ್ಲಿ 2021 ಮತ್ತು 2022ರಲ್ಲಿ ಭೂಕಂಪನ ಉಂಟಾಗಿರುವ ಮಾಹಿತಿಗಳು ಲಭ್ಯ ಇವೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಹಯೋಗದಲ್ಲಿ ರಾಷ್ಟ್ರಮಟ್ಟದಪ್ರತಿಷ್ಠಿತ ಸಂಸ್ಥೆಗಳ ವೈಜ್ಞಾನಿಕ ಅಧಿಕಾರಿಗಳ ತಂಡ ಜಿಲ್ಲೆಯ ಭೂಕಂಪನ ಪ್ರದೇಶಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಗೆ ಭೂಕಂಪಗಳ ಬಗ್ಗೆ ಅರಿವು ಮೂಡಿಸಿದೆ. ಭೂಕಂಪನದಿಂದ ಉಂಟಾಗುವ ಆಪಾಯಗಳನ್ನು ಹೇಗೆ ತಗ್ಗಿಸಬಹುದು ಎಂಬುದರ ಕುರಿತು ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಮಾಡಲಾಗಿದೆ. ಜೊತೆಗೆ ಈ ಭೂಕಂಪನದ ಕುರಿತು ಹೆಚ್ಚಿನ ಅಧ್ಯಯನ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಸಹಯೋಗದಲ್ಲಿ ರಾಷ್ಟ್ರಮಟ್ಟದ ಪ್ರತಿಷ್ಠಿತ ಸಂಸ್ಥೆಗಳಾದ ಭೌತಿಕ ಸಂಶೋಧಾನಾ ಸಂಸ್ಥೆ (NGRI) ಮತ್ತು ಭಾರತೀಯ ಭೂವಿಜ್ಞಾನ ವೈಜ್ಞಾನಿಕ ಸರ್ವೇಕ್ಷಣೆ ಸಂಸ್ಥೆ (GSI) ಹಾಗೂ ರಾಷ್ಟ್ರೀಯ ಶಿಲಾ ಯಂತ್ರಶಾಸ್ತ್ರ (NIRM) ಸಂಸ್ಥೆಗಳ ವೈಜ್ಞಾನಿಕ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ಮಾಡಿ ಅಧ್ಯಯನ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.