ADVERTISEMENT

‘ನೀವು ಏನಾಗಬೇಕು, ನೀವೇ ನಿರ್ಧರಿಸಿ’

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 15:38 IST
Last Updated 10 ಜನವರಿ 2020, 15:38 IST
ಡಾ.ಓಂಕಾರ ಕಾಕಡೆ
ಡಾ.ಓಂಕಾರ ಕಾಕಡೆ   

ವಿಜಯಪುರ: ‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟ. ನೀವೆಲ್ಲರೂ ಈಗ ಕವಲು ದಾರಿಯಲ್ಲಿ ಇದ್ದೀರಿ. ಎಸ್ಸೆಸ್ಸೆಲ್ಸಿ ನಂತರ ಮುಂದೇನು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆ. ನೀವು ಏನಾಗಬೇಕು ಎಂಬುದನ್ನು ನೀವೇ ನಿರ್ಧರಿಸಿ’..

–ಇವು, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಓಂಕಾರ ಕಾಕಡೆ ಅವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹೇಳಿದ ಆತ್ಮವಿಶ್ವಾಸದ ಮಾತುಗಳು.

‘ಲ್ಯಾಪ್‌ಟಾಪ್, ಮೊಬೈಲ್, ಟ್ಯಾಬ್, ಟಿ.ವಿಯನ್ನು ಭವಿಷ್ಯ ರೂಪಿಸಿಕೊಳ್ಳಲು ಬಳಸಿಕೊಳ್ಳಬೇಕು. ಯಾವ ಕೋರ್ಸ್‌ಗಳೂ ಶ್ರೇಷ್ಠ, ಕನಿಷ್ಠ ಎಂದಿಲ್ಲ. ಆದರೆ, ನಿಮ್ಮ ಮನೆಯ ಆರ್ಥಿಕ ಸ್ಥಿತಿಗತಿ ಮತ್ತು ನಿಮ್ಮ ಸಾಮರ್ಥ್ಯವನ್ನು ಆಧರಿಸಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಯಾರದ್ದೋ ಮಾತು ಕೇಳಿ ಕೋರ್ಸ್‌ ಆಯ್ಕೆ ಮಾಡಿಕೊಳ್ಳದೆ, ನಿಮ್ಮ ಆಸಕ್ತಿಯ ಕ್ಷೇತ್ರಗಳನ್ನೇ ಆಯ್ಕೆ ಮಾಡಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ’ ಎಂದು ಕಿವಿಮಾತು ಹೇಳಿದರು.

ADVERTISEMENT

‘ವಿಜ್ಞಾನ ಮೆದುಳಿನ ಕೆಲಸ; ಕಲೆ ಹೃದಯದ ಕೆಲಸ. ಕಲಾ ವಿಭಾಗ ಹೃದಯಕ್ಕೆ ಹತ್ತಿರ. ಶ್ರದ್ಧೆ, ಪ್ರಾಮಾಣಿಕತೆ, ಕಠಿಣ ಪರಿಶ್ರಮ ಈ ಮೂರು ಇದ್ದರೆ ಸಾಧನೆ ಸಾಧ್ಯ. ಮುಗಿಲಿಗೇ ಹಾರುವ ಗುರಿ ಹೊಂದಿದರೆ, ಕಡೇ ಪಕ್ಷ ನೆಲುವಿಗಾದರೂ ಹಾರಬಹುದು ಎಂಬುದನ್ನು ನೆನಪಿಟ್ಟುಕೊಳ್ಳಿ’ ಎಂದರು.

‘ಆದ್ಯತೆಯ ಕ್ಷೇತ್ರ ಮತ್ತು ಸಾಮರ್ಥ್ಯದ ಮೇಲೆ ನಿಮ್ಮ ಕನಸುಗಳು ಸಾಕಾರವಾಗುತ್ತವೆ. ಹವ್ಯಾಸಗಳು ಬದುಕನ್ನು ಹಸನುಗೊಳಿಸುತ್ತವೆ. ನಿಮ್ಮನ್ನು ಏಕತಾನೆಯಿಂದ ಬಹುತ್ವದೆಡೆಗೆ ಕರೆದೊಯ್ಯುತ್ತವೆ. ಅಷ್ಟೇ ಅಲ್ಲ; ಬದುಕನ್ನು ಸಹನೀಯವಾಗಿಸುತ್ತವೆ. ಹೀಗಾಗಿ, ಎಲ್ಲರೂ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ವಿದ್ಯಾರ್ಥಿಗಳು ಅಸಾಧ್ಯವಾದ ಹಾಗೂ ನಿಮಗೆ ಗೊತ್ತಿರುವವರು ನಿಮ್ಮನ್ನು ನೋಡಿ ನಗುವಂತಹ ಗುರಿಯನ್ನು ಇಟ್ಟುಕೊಳ್ಳಬೇಕು. ಆಗ ಸಾಧನೆ ನಿಮ್ಮದಾಗುತ್ತದೆ. ಐಎಎಸ್‌ ಅಧಿಕಾರಿ ಆಗಬೇಕು ಎಂಬ ಗುರಿ ಇಟ್ಟುಕೊಂಡರೆ, ಐಎಎಸ್‌ ಅಧಿಕಾರಿ ಆಗುತ್ತೀರಿ. ಒಂದೊಮ್ಮೆ ಆಗದಿದ್ದರೆ ಐಪಿಎಸ್, ಐಆರ್‌ಎಸ್‌ ಅಧಿಕಾರಿಯಾದರೂ ಆಗುತ್ತೀರಿ’ ಎಂದು ಧೈರ್ಯ ತುಂಬಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.