ADVERTISEMENT

ಶಿಕ್ಷಣ ಇಲಾಖೆ: ಸಾಮೂಹಿಕ ವರ್ಗಾವಣೆ

ಆಡಳಿತ ನಿರ್ವಹಣೆ ವಿಫಲ, ಕರ್ತವ್ಯ ನಿರ್ಲಕ್ಷ್ಯ, ಭ್ರಷ್ಟಾಚಾರ, ಇಲಾಖೆಗೆ ಮುಜುಗರ ಆರೋಪ

ಬಸವರಾಜ ಸಂಪಳ್ಳಿ
Published 20 ಜನವರಿ 2026, 2:59 IST
Last Updated 20 ಜನವರಿ 2026, 2:59 IST
<div class="paragraphs"><p>ವರ್ಗಾವಣೆ</p></div>

ವರ್ಗಾವಣೆ

   

ವಿಜಯಪುರ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತ, ಕಚೇರಿಯಲ್ಲಿ ಭ್ರಷ್ಟಾಚಾರ, ಕಡಿತಗಳ ನಾಪತ್ತೆ, ಅಧಿಕಾರಿಗಳಿಗೆ ಕಿರುಕುಳ ಮತ್ತಿತರ ಆರೋಪ ಹೊತ್ತ ವಿಜಯಪುರ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಕಚೇರಿ ಸುಧಾರಣೆಗೆ ಕೊನೆಗೂ ಕ್ರಮ ಕೈಗೊಳ್ಳಲಾಗಿದೆ.

ಕಚೇರಿ ಆಡಳಿತ ನಿರ್ವಹಣೆಯಲ್ಲಿ ವಿಫಲ, ಕರ್ತವ್ಯ ನಿರ್ಲಕ್ಷ್ಯ, ಶಿಕ್ಷಕರ ಹಾಗೂ ಸಾರ್ವಜನಿಕ ಕೆಲಸ ಕಾರ್ಯಗಳ ವಿನಾಕಾರಣ ವಿಳಂಬ ಸೇರಿ ಹಲವು ಕಾರಣಗಳಿಗೆ ಇಲಾಖೆಯ ವಿಜಯಪುರ ಜಿಲ್ಲಾ ಕಚೇರಿಯ 14 ಬೋಧಕೇತರ ಸಿಬ್ಬಂದಿಯನ್ನು ಸೋಮವಾರ ಕಚೇರಿಯಿಂದ ಬೇರೆಡೆ ವರ್ಗಾವಣೆ ಮಾಡಿ, ಧಾರವಾಡ ವಿಭಾಗದ ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಆದೇಶ ಹೊರಡಿಸಿದ್ದಾರೆ.

ADVERTISEMENT

ಲೋಕಾಯುಕ್ತ ದಾಳಿ: 

ವ್ಯಾಪಕ ಅವ್ಯವಹಾರ ಮತ್ತು ಭ್ರಷ್ಟಾಚಾರದ ಆರೋಪದ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಕಚೇರಿ, ವಿಜಯಪುರ ನಗರ ಮತ್ತು ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳ ಮೇಲೆ ಕಳೆದ ವರ್ಷ ಡಿಸೆಂಬರ್‌ 4ರಂದು ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು. ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ಅವರು ಸ್ವಯಂ ಪೇರಿತ ಪ್ರಕರಣ ದಾಖಲಿಸಿಕೊಂಡು, ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಲು ವಾರೆಂಟ್ ಹೊರಡಿಸಿದ್ದರು.  

ನಿವೃತ್ತ ಶಿಕ್ಷಕರ ವೇತನ ವಿಳಂಬ, ವೈದ್ಯಕೀಯ ಬಿಲ್‌ಗಳ ವಿಲೇವಾರಿಯಲ್ಲಿ ವಿಳಂಬ ಮಾಡಿರುವುದು ಪತ್ತೆಯಾಗಿತ್ತು. ಅಲ್ಲದೇ, ಶಿಕ್ಷಕರ ಸೌಲಭ್ಯ ನೀಡುವಲ್ಲಿ ಅಕ್ರಮ ಎಸಗಿರುವುದೂ ಸಹ ಪತ್ತೆ ಹಚ್ಚಲಾಗಿತ್ತು. ವಿದ್ಯಾರ್ಥಿಗಳಿಗೆ ನೀಡಬೇಕಾದ ಪಠ್ಯ ಪುಸ್ತಕಗಳನ್ನು ಸಮರ್ಪಕವಾಗಿ ವಿತರಿಸದಿರುವುದು ಕಂಡು ಬಂದಿತ್ತು. ಅತಿಥಿ ಶಿಕ್ಷಕರ ನೇಮಕದಲ್ಲಿ ಪಾರದರ್ಶಕತೆ ಇಲ್ಲದಿರುವುದು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ನೇಮಕಾತಿ ನೀಡುವಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವುದು ಕಂಡು ಬಂದಿತ್ತು.  

ಜನಪ್ರತಿನಿಧಿಗಳ ಆಕ್ರೋಶ:

ಡಿಸೆಂಬರ್‌ 22ರಂದು ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲೂ ಜಿಲ್ಲೆಯ ಶಾಸಕರು, ಸಚಿವರು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ(ಡಿಡಿಪಿಐ) ಕಚೇರಿಯಲ್ಲಿ ತುಂಬಿರುವ ಭ್ರಷ್ಟಾಚಾರ, ಲಂಚಗುಳಿತ, ಅಧಿಕಾರಿ, ಸಿಬ್ಬಂದಿಗಳ ಅದಕ್ಷತೆ, ಪಿತೂರಿ, ಅವ್ಯವಸ್ಥೆ, ಜಿಲ್ಲೆಯಲ್ಲಿ ಹದಗೆಟ್ಟಿರುವ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ಧ್ವನಿ ಎತ್ತಿದರು.

‘ಜಿಲ್ಲೆಯಲ್ಲೇ ಅತ್ಯಂತ ಕೆಟ್ಟ ಇಲಾಖೆ ಎಂದರೆ ಅದು ಶಿಕ್ಷಣ ಇಲಾಖೆ, ಒಳ್ಳೆಯ ಅಧಿಕಾರಿಗಳು ಜಿಲ್ಲೆಗೆ ಬರಲು ಒಪ್ಪತ್ತಿಲ್ಲ. ಇಲಾಖೆಯ ಸಿಬ್ಬಂದಿಗಳು ಸರಿಯಿಲ್ಲ’ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದರು.

‘ಶಿಕ್ಷಣ ಇಲಾಖೆ ಕಚೇರಿಯಲ್ಲಿ ಹಲವು ವರ್ಷಗಳಿಂದ ಇರುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗುವುದು. ಶಿಕ್ಷಣ ಇಲಾಖೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದ್ದರು. ಇದಾದ ತಿಂಗಳಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.