ADVERTISEMENT

ಮಹಿಳೆಯರು ಸಬಲರಾಗಲು ಶಿಕ್ಷಣ ಅತ್ಯವಶ್ಯ: ಡಾ.ಮೈತ್ರೇಯಿನಿ

‘ಮಹಿಳಾ ಸಬಲೀಕರಣದ ಮುನ್ನೋಟಗಳು’ ವಿಷಯದ ಕುರಿತ ಗೋಷ್ಠಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 15:31 IST
Last Updated 7 ಮಾರ್ಚ್ 2022, 15:31 IST
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ‘ಮಹಿಳಾ ಸಬಲೀಕರಣದ ಮುನ್ನೋಟಗಳು‘ ವಿಷಯದ ಕುರಿತ ಗೋಷ್ಠಿಯಲ್ಲಿ ಬೆಳಗಾವಿಯ ಲೇಖಕಿ ಡಾ.ಮೈತ್ರೇಯಿನಿ ಗದಿಗೆಪ್ಪಗೌಡರ ಮಾತನಾಡಿದರು
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ‘ಮಹಿಳಾ ಸಬಲೀಕರಣದ ಮುನ್ನೋಟಗಳು‘ ವಿಷಯದ ಕುರಿತ ಗೋಷ್ಠಿಯಲ್ಲಿ ಬೆಳಗಾವಿಯ ಲೇಖಕಿ ಡಾ.ಮೈತ್ರೇಯಿನಿ ಗದಿಗೆಪ್ಪಗೌಡರ ಮಾತನಾಡಿದರು   

ವಿಜಯಪುರ:ಮಹಿಳೆ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಲು ಶಿಕ್ಷಣ ಅತ್ಯವಶ್ಯ. ಶಿಕ್ಷಣವಿಲ್ಲದೆಸಬಲೀಕರಣ ಅಸಾಧ್ಯ. ಜ್ಞಾನ ಯವ ದಿಸೆಯಲ್ಲಿ ಸಿಕ್ಕರೂ ಅದನ್ನು ಪಡೆದುಕೊಳ್ಳುವ ತಿಳಿವಳಿಕೆನಮಗಿರಬೇಕು ಎಂದು ಬೆಳಗಾವಿಯ ಲೇಖಕಿ ಡಾ.ಮೈತ್ರೇಯಿನಿ ಗದಿಗೆಪ್ಪಗೌಡರ ಹೇಳಿದರು.

ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಮ್ಮಿಕೊಂಡಿದ್ದ ‘ಮಹಿಳಾ ಸಬಲೀಕರಣದ ಮುನ್ನೋಟಗಳು‘ ವಿಷಯದ ಕುರಿತ ಗೋಷ್ಠಿಯಲ್ಲಿಮಹಿಳೆಯರ ಶೈಕ್ಷಣಿಕ ಸಬಲೀಕರಣದ ಕುರಿತು ಮಾತನಾಡಿದರು.

ಸಾಕ್ಷರತೆ, ಆತ್ಮವಿಶ್ವಾಸ ಮತ್ತು ಕೌಶಲಗಳ ಸಹಾಯದಿಂದ ಸಬಲೀಕರಣ ಸಾಧ್ಯ. ಮಹಿಳೆಗೆ ಸರಿಯಾದ ಶಿಕ್ಷಣ ದೊರೆತರೆ ಅವಳು ತನ್ನ ಕುಟುಂಬದ ಎಲ್ಲರಲ್ಲೂ ತಿಳಿವಳಿಕೆಮೂಡಿಸುತ್ತಾಳೆ ಎಂದರೆ ತಪ್ಪಾಗಲಾರದು. ಆದ್ದರಿಂದ ಮಹಿಳಾ ಸಶಸ್ತ್ರೀಕರಣಕ್ಕೆ, ಸಬಲೀಕರಣಕ್ಕೆ ಶಿಕ್ಷಣವೇ ಮೂಲ ಎಂದರು.

ADVERTISEMENT

ಮಹಿಳೆಯರ ರಾಜಕೀಯ ಸಬಲೀಕರಣದ ಕುರಿತು ಮಾತನಾಡಿದ ‘ಪ್ರಜಾವಾಣಿ‘ ಹುಬ್ಬಳ್ಳಿ ಬ್ಯೂರೊ ಮುಖ್ಯಸ್ಥೆ ರಶ್ಮಿ. ಎಸ್, ರಾಜಕೀಯದಲ್ಲಿ ಶೇ 33ರಷ್ಟು ಮೀಸಲಾತಿ ಇದ್ದರೂ ಸಹ ಮಹಿಳೆಯರು ಮುಂದೆ ಬಂದು ತಮ್ಮ ಹಕ್ಕನ್ನು ಪಡೆಯಲು, ಜವಾಬ್ದಾರಿ ನಿರ್ವಹಿಸಲು ಮುಂದೆ ಬರುತ್ತಿಲ್ಲ. ಮಹಿಳೆಯರಿಗೆ ರಾಜಕೀಯ ಒಲವು ಇದ್ದಾಗ ಮಾತ್ರ ಮಹಿಳೆಯರ ರಾಜಕೀಯ ಸಬಲೀಕರಣ ಸಾಧ್ಯ ಎಂದು ಹೇಳಿದರು.

ಪ್ರತಿ ಯಶಸ್ವಿ ಮಹಿಳೆಯ ಹಿಂದೆ ಅವಳ ಚಾರಿತ್ರ್ಯ ಅವಹೇಳನ ಮಾಡಿದ ಇತಿಹಾಸ ಇದ್ದೇ ಇರುತ್ತದೆ. ಆದರೆ, ಈ ಎಲ್ಲ ಅಡೆತಡೆಗಳನ್ನ ಮೀರಿ, ಅವುಗಳನ್ನುಧೈರ್ಯವಾಗಿ ಎದುರಿಸಿ, ಹಿಂದೇಟು ಹಾಕದೇ ಮಹಿಳೆ ಮುಂದೆ ಬಂದಾಗ ಮಾತ್ರ ಮಹಿಳೆ ತನ್ನ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದರು.

ಮಹಿಳೆ ತನ್ನಲ್ಲಿರುವ ಅಂತರ್‌ ಶಕ್ತಿಯನ್ನು ಹೊರ ತಂದಾಗಮಾತ್ರ ಸಬಲರಾಗಲು ಸಾಧ್ಯ. ಅವಳು ನಿಂತ ನೀರಾಗದೆ ಹರಿಯುವ ನೀರಾಗಬೇಕು. ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಒಪ್ಪಿ ಮುನ್ನಡೆದರೆ ಸಬಲೀಕರಣ, ಮಹಿಳಾ ಸಶಕ್ತೀಕರಣಸಾಧ್ಯ ಎಂದು ಹೇಳಿದರು.

‘ಮಹಿಳೆಯರ ಆರ್ಥಿಕ ಸಬಲೀಕರಣ’ದ ಕುರಿತು ವಿಚಾರ ಮಂಡಿಸಿದಬೆಂಗಳೂರಿನ ‘ಸುವರ್ಣ’ ನ್ಯೂಸ್ ಚಾನೆಲ್‍ನ ಔಟ್‌ಪುಟ್ ಹೆಡ್ ಶೋಭಾ ಎಂ.ಸಿ.,ನಿಮ್ಮಲ್ಲಿರುವ ಕಲೆಯನ್ನು ನವ ಮಾಧ್ಯಮಗಳಮೂಲಕ ಬೆಳಕಿಗೆ ತರಬಹುದು. ಹಲವಾರು ಸಾಫ್ಟ್‌ವೇರ್‌ಗಳ ಸಹಾಯದಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಬಹುದು. ದಾರಿಗಳು ನೂರಾರು ಇವೆ. ಆದರೆ, ಅದನ್ನು ಬಳಸಿಕೊಳ್ಳುವ ಕಲೆ ನಮಗೆ ತಿಳಿದಿರಬೇಕು ಎಂದುಹೇಳಿದರು.

ಓದುವಾಗಲೇ ಡಿಜಿಟಲ್ ಮಾಧ್ಯಮದಲ್ಲಿ, ಫೇಸ್‍ಬುಕ್, ಯೂಟುಬ್ ಚಾನೆಲ್ ಹೀಗೆ ವಿವಿಧ ಸಾಮಾಜಿಕ ಜಾಲತಾಣದಮೂಲಕ ನಿಮ್ಮದೇ ಆದ ಶೈಲಿನಲ್ಲಿ ವಿಡಿಯೋಗಳನ್ನು ಮಾಡಿ, ನಿಮ್ಮ ಕಲೆಯನ್ನು ಪ್ರದರ್ಶಿಸುವುದರ ಜೊತೆಗೆ ಆರ್ಥಿಕ ಸಬಲತೆಗೆ ಇದು ಸಹಾಯಕವಾಗಿದೆ ಎಂದರು.

ಪ್ರಸ್ತುತ ದಿನಮಾನಗಳಲ್ಲಿ ಎಲ್ಲ ವಿದ್ಯಮಾನಗಳ ವಿಷಯಗಳ ಬಗ್ಗೆ ನಾವು ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕು. ಈ ಡಿಜಿಟಲ್ ಯುಗದಲ್ಲಿ ಕಲೆಗೆ ಬೆಲೆ ಇದೆ. ನಮ್ಮ ಕಲೆಯನ್ನು ಸದುಪಯೋಗ ಪಡಿಸಿಕೊಳ್ಳುವ ಜ್ಞಾನ ನಮಗೆ ತಿಳಿದಿರಬೇಕುಎಂದು ಹೇಳಿದರು.

ಸಮಾಜ ಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ವಿಜಯಾ ಕೋರಿಶೆಟ್ಟಿಅಧ್ಯಕ್ಷತೆ ವಹಿಸಿದ್ದರು. ಸಂಶೋಧನಾ ವಿದ್ಯಾರ್ಥಿನಿ ಸುಷ್ಮಾ ನಾಯಕ ಸ್ವಾಗತಿಸಿದರು. ಸುಷ್ಮಾ ಪವಾರ, ಫಿಲೊಮಿನಾ ಪರಿಚಯಿಸಿದರು. ದೀಪಾ ತಟ್ಟಿಮನಿ ನಿರೂಪಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರಗೌಡ ಕಾಕಡೆ ವಂದಿಸಿದರು.

***

ಬೌದ್ಧಿಕವಾಗಿ ಸಿಗುವ ಜ್ಞಾನದ ಜೊತೆಗೆ ಸಬಲೀಕರಣಕ್ಕೆ ಬೇಕಾದ ಆತ್ಮಾಭಿಮಾನತುಂಬಾ ಮುಖ್ಯ. ಈ ನಿಟ್ಟಿನಲ್ಲಿ ಮಹಿಳೆಯರಲ್ಲಿ ಮೊದಲು ಸಬಲೀಕರಣದ ಅರಿವು ಮೂಡಿಸಬೇಕು
-ಡಾ.ಮೈತ್ರೇಯಿನಿ ಗದಿಗೆಪ್ಪಗೌಡರ,ಲೇಖಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.