ADVERTISEMENT

ವಿಜಯಪುರ: ಮನ, ಮನೆಗಳಲ್ಲಿ ಈದ್‌ ಸರಳ ಸಂಭ್ರಮ

ಮಸೀದಿ, ದರ್ಗಾಗಳಲ್ಲಿ ರಂಜಾನ್‌ ನಡೆಯದ ಸಾಮೂಹಿಕ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 14 ಮೇ 2021, 13:30 IST
Last Updated 14 ಮೇ 2021, 13:30 IST
ವಿಜಯಪುರ ಬಬಲೇಶ್ವರ ನಾಕಾದ ನಿವಾಸಿ ಅಝೀಜ್‌ ಅರಳಿಕಟ್ಟಿ ಕುಟುಂಬದವರು ಶುಕ್ರವಾರ ಮನೆಯಲ್ಲೇ ಈದ್‌ ಉಲ್‌ ಫಿತ್ರ್‌ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು  –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ಬಬಲೇಶ್ವರ ನಾಕಾದ ನಿವಾಸಿ ಅಝೀಜ್‌ ಅರಳಿಕಟ್ಟಿ ಕುಟುಂಬದವರು ಶುಕ್ರವಾರ ಮನೆಯಲ್ಲೇ ಈದ್‌ ಉಲ್‌ ಫಿತ್ರ್‌ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು  –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ:ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಮುಸ್ಲಿಮರು ಈದ್‌ ಉಲ್‌ ಫಿತ್ರ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ರಂಜಾನ್ ಮಾಸದ ಹಿನ್ನೆಲೆಯಲ್ಲಿ ತಿಂಗಳಿಂದ ಉಪವಾಸ ವ್ರತದಲ್ಲಿದ್ದ ಮುಸ್ಲಿಂ ಬಾಂಧವರು ಕೋವಿಡ್‌ ಆತಂಕದ ಕಾರಣ ಹೆಚ್ಚು ವಿಜೃಂಭಣೆಗೆ ಆದ್ಯತೆ ನೀಡದೇ ಸರಳವಾಗಿ ಮನೆಗಳಲ್ಲಿ ಆಚರಿಸಿದರು.

ಈದ್ಗಾ ಮೈದಾನ ಮತ್ತು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದ ಕಾರಣ ಧಾರ್ಮಿಕ ಮುಖಂಡರು, ಹಿರಿಯರು ಮತ್ತು ಮಕ್ಕಳು, ಮಹಿಳೆಯರು ಮನೆಗಳಲ್ಲೇ ವಿಶೇಷ ಪ್ರಾರ್ಥನೆ ಸಲ್ಲಿಸಿ, ಕುರಾನ್‌ ಪಠಿಸಿದರು.ಮೊಬೈಲ್‌ ಫೋನ್‌ ಕರೆ, ವಾಟ್ಸ್‌ ಆ್ಯಪ್‌ ಸಂದೇಶಗಳ ಮೂಲಕ ಈದ್‌ ಶುಭಾಶಯ ವಿನಿಮಯ ಮಾಡಿಕೊಂಡರು.

ADVERTISEMENT

ಹಬ್ಬದ ಅಂಗವಾಗಿ ಮನೆಗಳಲ್ಲಿ ಹಾಲು, ಡ್ರೈಫ್ರೂಟ್ಸ್‌ಗಳ ಮಿಶ್ರಣದಿಂದ ವಿಶೇಷವಾಗಿ ತಯಾರಿಸಿದ ಸುರುಕುಂಬಾವನ್ನು ಸವಿದರು. ಕುರಿ ಹಾಗೂ ಕೋಳಿ ಮಾಂಸದ ಬಿರಿಯಾನಿ, ಕುಷ್ಕಾ, ಕಬಾಬ್‌, ಕೈಮಾ ಸೇರಿದಂತೆ ವಿವಿಧ ಭಕ್ಷ್ಯ, ಭೋಜನ ತಯಾರಿಸಿ ತಿಂದರು. ಮನೆ ಬಳಿ ಬಂದ ಬಡವರಿಗೆ ದಿನಸಿ ಹಾಗೂ ತಿಂಡಿ ತಿನಿಸುಗಳನ್ನು ದಾನ ಮಾಡಿದರು.

ಮನೆಪೂರ್ತಿಗೆ ಆಚರಣೆ:

ಹಬ್ಬದ ಆಚರಣೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿಜಯಪುರ ಬಬಲೇಶ್ವರ ನಾಕಾದ ನಿವಾಸಿ, ತಾರಾಪುರ ಎಚ್‌. ಶಾಲೆಯ ಮುಖ್ಯ ಶಿಕ್ಷಕ ಅಝೀಜ್‌ ಅರಳಿಕಟ್ಟಿ, ಕೋವಿಡ್‌ ಸಂಕಷ್ಟದ ಕಾರಣ ಈ ಬಾರಿ ಹಬ್ಬವನ್ನು ಸರಳವಾಗಿ, ಮನೆಪೂರ್ತಿಗೆ ಆಚರಿಸಿದೆವು. ಹೊಸಬಟ್ಟೆ ಸೇರಿದಂತೆ ಏನೊಂದನ್ನು ಖರೀದಿಸಲಿಲ್ಲ. ಮನೆಯಲ್ಲೇ ಕುಟುಂಬದವರು ಸೇರಿಕೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿ, ಅಲ್ಲಾಹುವನ್ನು ಸ್ಮರಿಸಿದೆವು. ಹಬ್ಬಕ್ಕೆ ಮಾಡಬೇಕಾದ ಖರ್ಚು, ವೆಚ್ಚವನ್ನು ಉಳಿಸಿ ಬಡವರಿಗೆ, ಸಂಕಷ್ಟದಲ್ಲಿರುವವರಿಗೆ ನೆರವು ನೀಡಿದೆವು ಎಂದು ಹೇಳಿದರು.

ಕೋವಿಡ್‌ ಕಾರಣಕ್ಕೆ ಗೆಳೆಯರು, ಸಂಬಂಧಿಕರನ್ನು ಮನೆಗೆ ಆಹ್ವಾನಿಸಲು ಸಾಧ್ಯವಾಗಲಿಲ್ಲ. ಮಸೀದಿ, ದರ್ಗಾಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಲು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾಡಿನಲ್ಲಿ ಸಾವು–ನೋವಿಗೆ ಕಾರಣವಾಗಿರುವ ಕೋವಿಡ್‌ ಆದಷ್ಟು ಬೇಗ ತೊಲಗಲಿ. ಜನರು ಮೊದಲಿನಂತೆ ಬದುಕುವಂತಾಗಲಿ ಎಂದು ಅಲ್ಲಾಹುವಿನಲ್ಲಿ ವಿಶೇಷವಾಗಿ ಪ್ರಾರ್ಥಿಸಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.