ವಿಜಯಪುರ: ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಮುತ್ತಹೀದಾ ಕೌನ್ಸಿಲ್ ಸಹಯೋಗದಲ್ಲಿ ಶುಕ್ರವಾರ ನಗರದಲ್ಲಿ ಭವ್ಯ ಶಾಂತಿಯಾತ್ರೆ ನಡೆಯಿತು.
ಹಕೀಂ ವೃತ್ತದಿಂದ ಆರಂಭವಾದ ಯಾತ್ರೆಯಲ್ಲಿ ಸಾವಿರಾರು ಯುವಕರು ಭಾಗವಹಿಸಿದ್ದರು. ‘ನಾರಾಯೇ ತಕ್ಬೀರ್ ಅಲ್ಲಾಹು ಅಕ್ಬರ್...’, ‘ಯಾ ರಸೂಲ್ಲಾಹ...’ ಎಂದು ಹೇಳುತ್ತಾ ಮೆರವಣಿಗೆಯಲ್ಲಿ ಯುವಜನರು ಹೆಜ್ಜೆ ಹಾಕಿದರು. ಹಸಿರು ವರ್ಣದ ಬೃಹತ್ ಬಾವುಟವನ್ನು ಹಾರಿಸಿದರು. ಪ್ರವಾದಿ ಅವರ ಚಿಂತನೆ ಸಾರುವ ನಾತ್ (ಪವಿತ್ರ ಗೀತೆಗಳು) ಹಾಗೂ ಕವ್ಹಾಲಿಗಳ ಅನುರುಣಿಸಿತು. ದಾರಿಯುದ್ದಕ್ಕೂ ಮೆರವಣಿಗೆಗೆ ಪುಷ್ಪಗಳ ಮೂಲಕ ಸ್ವಾಗತ ಕೋರಲಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರಿಗೆ ತಂಪು ಪಾನೀಯ, ಶರಬತ್, ಕುಡಿಯುವ ನೀರು ವಿತರಿಸಲಾಯಿತು.
ಹಕೀಂ ವೃತ್ತದಿಂದ ಆರಂಭವಾದ ಶಾಂತಿಯಾತ್ರೆ ಝಂಡಾ ಕಟ್ಟಾ, ಜಾಮೀಯಾ ಮಸೀದಿ, ಬಡಿಕಮಾನ್, ಅತಾವುಲ್ಲಾ ಸರ್ಕಲ್, ಗಾಂಧೀವೃತ್ತ, ಡಾ.ಅಂಬೇಡ್ಕರ್ ವೃತ್ತ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ದರಬಾರ್ ಹೈಸ್ಕೂಲ್ ತಲುಪಿ ಸಂಪನ್ನಗೊಂಡಿತು.
ಕರ್ನಾಟಕ ಅಹಲೆ ಸುನ್ನತ್ ಜಮಾತ್ ರಾಜ್ಯಾಧ್ಯಕ್ಷ, ಧರ್ಮಗುರು ಹಜರತ್ ಸೈಯ್ಯದ್ ತನ್ವೀರಪೀರಾ ಹಾಶ್ಮೀ, ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್, ವಿಡಿಎ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಕಾಂಗ್ರೆಸ್ ಮುಖಂಡರಾದ ಮೊಹ್ಮದ್ ರಫೀಕ್ ಟಪಾಲ್, ಎಂ.ಸಿ. ಮುಲ್ಲಾ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಕೀಲ್ ಬಾಗಮಾರೆ ಮೊದಲಾದವರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಆಸಾರ್ ಉರುಸ್:
ಈದ್ ಮಿಲಾದ್ ಪ್ರಯುಕ್ತ ವಿಜಯಪುರದ ಆಸಾರ್ ಮಹಲ್‌ನಲ್ಲಿ ಉರುಸ್ ವಿಜೃಂಭಣೆಯಿಂದ ನಡೆಯಿತು.
ಉರುಸ್ ಅಂಗವಾಗಿ ಮಹಿಳೆಯರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಆಸಾರ್ ಮಹಲ್‌ಗೆ ಭೇಟಿ ನೀಡಿದರು. ಹರಕೆ ಹೊತ್ತಿದ್ದ ಕೆಲವರು ಅಲ್ಲಿರುವ ಕೊಳದಲ್ಲಿ ದೀಪ ಇರಿಸಿದ ಸಣ್ಣ ದೋಣಿಗಳನ್ನು ಬಿಟ್ಟು ಭಕ್ತಿ ಮೆರೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.