ADVERTISEMENT

ವಿಜಯಪುರ ಜಿಲ್ಲೆಯಾದ್ಯಂತ ಸಡಗರ, ಸಂಭ್ರಮದಿಂದ ಈದ್ ಉಲ್ ಫಿತ್ರ್ ಆಚರಣೆ

ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 16:05 IST
Last Updated 11 ಏಪ್ರಿಲ್ 2024, 16:05 IST
ವಿಜಯಪುರದ ದಖನಿ ಈದ್ಗಾ ಮೈದಾನದಲ್ಲಿ ಗುರುವಾರ ಈದ್ ಉಲ್ ಫಿತ್ರ್ ಪ್ರಯುಕ್ತ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ವಿಜಯಪುರದ ದಖನಿ ಈದ್ಗಾ ಮೈದಾನದಲ್ಲಿ ಗುರುವಾರ ಈದ್ ಉಲ್ ಫಿತ್ರ್ ಪ್ರಯುಕ್ತ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು   

ವಿಜಯಪುರ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಈದ್ ಉಲ್ ಫಿತ್ರ್ ಅಂಗವಾಗಿ ಮುಸ್ಲಿಮರು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ನಗರದ ಐತಿಹಾಸಿಕ ಶಾಹಿ ಆಲಂಗೀರ್ ಈದ್ಗಾ, ದಖ್ಖನಿ ಈದ್ಗಾ, ಜಾಮೀಯಾ ಮಸೀದಿ, ಅಂಡೂ ಮಸೀದಿ, ದಾತ್ರಿ ಮಸೀದಿ, ಮಲೀಕ್ ಜಹಾನ್ ಮಸೀದಿ, ಖಡ್ಡೇ ಮಸೀದಿ, ಬುಖಾರಿ ಮಸೀದಿ ಸೇರಿದಂತೆ ವಿವಿಧ ಮಸೀದಿಗಳಲ್ಲಿ ಶ್ರದ್ಧಾ-ಭಕ್ತಿಯಿಂದ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.

ಬೆಳಿಗ್ಗೆಯಿಂದಲೇ ನಗರದಾದ್ಯಂತ ಈದ್ ಸಂಭ್ರಮ ಕಳೆಕಟ್ಟಿತ್ತು. ಪ್ರತಿಯೊಬ್ಬ ಮುಸ್ಲಿಮರು ಹೊಸ ಬಟ್ಟೆ ಧರಿಸಿ, ಕಣ್ಣಿಗೆ ಸುರ್ಮಾ, ಘಮಘಮಿಸುವ ಅತ್ತರ್ ಲೇಪಿಸಿಕೊಂಡು ಸಂತೋಷದಿಂದ ಮಸೀದಿ, ಈದ್ಗಾಗಳತ್ತ ಹೆಜ್ಜೆ ಹಾಕುತ್ತಿರುವ ದೃಶ್ಯಗಳು ಕಂಡು ಬಂತು.

ADVERTISEMENT

ಪ್ರಾರ್ಥನೆ ಬಳಿಕ ಮಸೀದಿ ಮುಂಭಾಗದಲ್ಲಿ ಬಡವರಿಗೆ ದಾನ (ಜಕಾತ್) ನೀಡಿದರು. ಎಲ್ಲೆಡೆ ಹಬ್ಬದ ಸಡಗರ ಮುಗಿಲು ಮುಟ್ಟಿತ್ತು. ಬೀದಿ ಬೀದಿಗಳಲ್ಲೂ ಅತ್ತರ್‌ನ ಘಮಲು ಪಸರಿಸಿತ್ತು. ಚಿಕ್ಕ ಮಕ್ಕಳಂತೂ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದರು. ಹಿರಿಯರು ಸಹ ಪ್ರೀತಿಯಿಂದ ಉಡುಗೊರೆ ನೀಡಿದರು. ಇದಾದ ಬಳಿಕ ತಮ್ಮ ತಮ್ಮ ಮನೆಗಳಿಗೆ ತೆರಳಿ ಹಬ್ಬಕ್ಕಾಗಿ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಸುರಕುಂಬಾ ಸವಿದರು. ಈದ್ ಪ್ರಯುಕ್ತ ವಿವಿಧೆಡೆ ಔತಣಕೂಟಗಳನ್ನು ಏರ್ಪಡಿಸಲಾಗಿತ್ತು.

ಪ್ರತಿ ತಿಂಗಳು ಪವಿತ್ರ ಕಾರ್ಯ ಕೈಗೊಳ್ಳಿ:  ಪವಿತ್ರ ರಮಜಾನ್ ಮಾಸದಲ್ಲಿ ಕೈಗೊಳ್ಳುವ ಪವಿತ್ರ ಕಾರ್ಯಗಳು ಪ್ರತಿ ತಿಂಗಳು ಕೈಗೊಳ್ಳುವ ಸಂಕಲ್ಪ ಮಾಡಬೇಕು ಎಂದು ಮುಸ್ಲಿಂ ಧರ್ಮಗುರು ಹಾಗೂ ಅಹಲೆ ಸುನ್ನತ್ ಜಮಾತ್ ರಾಜ್ಯಾಧ್ಯಕ್ಷ ಹಜರತ್ ಸೈಯ್ಯದ್ ತನ್ವೀರಪೀರಾ ಹಾಶ್ಮಿ ಕರೆ ನೀಡಿದರು.

ಸಚಿವ ಎಂ.ಬಿ.ಪಾಟೀಲ ಅವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ಹಸಿವಿನ ಮಹತ್ವ ತಿಳಿಸುವ ರೋಜಾ, ಬಡವರ ಸಂಕಷ್ಟಕ್ಕೆ ನೆರವಾಗುವ ಜಕಾತ್, ಪವಿತ್ರ ನಮಾಜ್ ರಮಜಾನ್ ತಿಂಗಳಲ್ಲಿ ನಿರ್ವಹಿಸಲಾಗಿದೆ, ಈ ಎಲ್ಲ ಪವಿತ್ರ ಕಾರ್ಯಗಳು ಎಲ್ಲ ಮಾಸದಲ್ಲಿಯೂ ನಿರ್ವಹಿಸುವ ನಿಟ್ಟಿನಲ್ಲಿ ಮುಸ್ಲಿಂ ಬಾಂಧವರು ಶ್ರಮಿಸಬೇಕು ಎಂದರು.

ಹಜರತ್ ಸೈಯ್ಯದ್ ತನ್ವೀರ್ ಪೀರಾ ಹಾಶ್ಮಿ ಮಾತನಾಡಿದರು

ಹಜರತ್ ಪ್ರವಾದಿ ಮೊಹ್ಮದ್ ಪೈಗಂಬರ್ ಮಾನವೀಯತೆಯ ಇನ್ನೊಂದು ಹೆಸರು, ಎಲ್ಲ ಮನುಕುಲದ ಉದ್ಧಾರಕ್ಕಾಗಿ ದೇವರು ಅವರನ್ನು ಪ್ರವಾದಿ ರೂಪದಲ್ಲಿ ಕಳುಹಿಸಿದರು. ಪ್ರವಾದಿ ಮೊಹ್ಮದ್ ಪೈಗಂಬರ್ ಅವರ ಮೇಲೆ ಅನೇಕರು ಕಲ್ಲು ಎಸೆದರು, ಅದಕ್ಕೆ ಪ್ರತಿಯಾಗಿ ಪ್ರವಾದಿ ಮೊಹ್ಮದ್ ಪೈಗಂಬರ್ ಕಲ್ಲು ಎಸೆಯಲಿಲ್ಲ, ಅವರ ಹಿತಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸಿದರು. ಅವರ ಮೇಲೆ ದ್ವೇಷ ಸಾಧಿಸಿದವರ ಮೇಲೆ ದ್ವೇಷ ಸಾಧಿಸಲಿಲ್ಲ, ಪ್ರತಿಯಾಗಿ ಅವರ ಒಳಿತಿಗಾಗಿ ಪ್ರಾರ್ಥಿಸಿದರು. ಇದು ಪ್ರವಾದಿ ಮೊಹ್ಮದ್ ಪೈಗಂಬರ್ ಅವರ ಆದರ್ಶ ಜೀವನ.

ಇಸ್ಲಾಂ ಎಂದರೆ ಮಾನವೀಯತೆ, ಇಸ್ಲಾಂ ಎಂದರೆ ಅತಿಥಿ ಸತ್ಕಾರ, ಇಸ್ಲಾಂ ಎಂದರೆ ಶಾಂತಿ, ಇಸ್ಲಾಂ ಎಂದರೆ ಕ್ಷಮೆ ಎಂದರು. ಹಜರತ್ ಪ್ರವಾದಿ ಮೊಹ್ಮದ್ ಪೈಗಂಬರ್ ಅವರು ಸಾರಿದ ತತ್ವಗಳನ್ನು ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.

ನೆರೆಹೊರೆಯವರ ಕಷ್ಟಗಳಿಗೆ ಸ್ಪಂದಿಸಬೇಕು, ಅವರ ಮನೆಯಲ್ಲಿ ಸಂಕಷ್ಟ ಎದುರಾದಾಗ ಅವರಿಗೆ ಅಭಯ ತುಂಬಿ ಅವರಿಗೆ ನೆರವಾಗುವವನೇ ನಿಜವಾದ ಮುಸ್ಲಿಂ. ಹಸಿದವನಿಗೆ ಊಟ ನೀಡಿ, ಎಲ್ಲರ ಮೇಲೆ ಶಾಂತಿ ಇರಲಿ ಎಂಬ ಪ್ರವಾದಿ ಅವರ ಉನ್ನತ ತತ್ವಗಳು ನಮ್ಮ ಜೀವನಮಂತ್ರವಾಗಬೇಕು ಎಂದು ಕರೆ ನೀಡಿದರು.

ಸಚಿವ ಎಂ.ಬಿ. ಪಾಟೀಲ, ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಪ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.