ADVERTISEMENT

ಚುನಾವಣಾ ಬಾಂಡ್‌ | ಬಿಜೆಪಿ ಭ್ರಷ್ಟತೆ ಬಯಲು-ಬಿ.ಎಂ.ಬಿರಾದಾರ

ಎನ್‌ಸಿಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಬಿರಾದಾರ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 15:52 IST
Last Updated 25 ಮಾರ್ಚ್ 2024, 15:52 IST
ಬಿ.ಎಂ.ಬಿರಾದಾರ
ಬಿ.ಎಂ.ಬಿರಾದಾರ   

ವಿಜಯಪುರ: ‘ಚುನಾವಣಾ ಬಾಂಡ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಭ್ರಷ್ಟ ರಾಜಕಾರಣ ದೇಶದ ಮುಂದೆ ಬಯಲಾಗಿದೆ’ ಎಂದು ಎನ್‌ಸಿಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಬಿರಾದಾರ ಮನಗೂಳಿ ಹೇಳಿದ್ದಾರೆ.

‘ಪ್ರಧಾನಿ ಮೋದಿ ಅವರು ರಾಷ್ಟ್ರ ರಾಜಕಾರಣದಲ್ಲಿ ನಾನೊಬ್ಬನೇ ಪರಿಶುದ್ಧ, ಯಾರಿಗೂ ತಿನ್ನಲು ಬಿಡುವುದಿಲ್ಲ, ನಾನೂ ತಿನ್ನುವುದಿಲ್ಲ ಎಂದೆಲ್ಲ ಹೇಳುತ್ತಲೇ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ನಾಂದಿ ಹಾಡಿದ್ದಾರೆ’ ಎಂದು ಅವರು ಆರೋಪಿಸಿದರು.

‘ಚುನಾವಣಾ ಬಾಂಡ್‌ ಮೂಲಕ ಸಾವಿರಾರು ಕೋಟಿ ಹಣವನ್ನು ಕಾರ್ಪೊರೇಟ್‌ ಕಂಪನಿಗಳಿಂದ ದೇಣಿಗೆ ಪಡೆದು, ಕಂಪನಿಗಳಿಗೆ ಲಕ್ಷಾಂತರ ಕೋಟಿ ಮೊತ್ತದ ವಿವಿಧ ಕಾಮಗಾರಿಗಳನ್ನು ನೀಡಿ ಲಾಭ ಮಾಡಿಕೊಟ್ಟಿದ್ದಾರೆ. ಈ ಮೂಲಕ ‘ಚಂದಾ ದೋ, ದಂದಾ ಲೋ’ ನೀತಿ ಅನುಸರಿಸಿದ್ದಾರೆ. ಇನ್ನು ಮುಂದೆ ಯಾವ ಮುಖ ಇಟ್ಟುಕೊಂಡು ರಾಜಕೀಯ ಮಾಡುತ್ತಾರೆ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಚುನಾವಣಾ ಬಾಂಡ್‌ ಹಗರಣದ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಖಂಡನೆ:

‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಅಬಕಾರಿ ಹಗರಣದ ನೆಪದಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿರುವುದು ಖಂಡನೀಯ. ಚುನಾವಣೆ ಹೊತ್ತಿನಲ್ಲಿ ಪ್ರತಿಪಕ್ಷಗಳನ್ನು ಹಣಿಯಲು ಮೋದಿ ಸರ್ಕಾರ ಕನಿಷ್ಠ ಮಟ್ಟಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ’ ಎಂದಿದ್ದಾರೆ.

ಟಿಕೆಟ್‌ ನೀಡಿಕೆ ಸರಿಯಲ್ಲ:

‘ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷದ ಶಾಸಕರು, ಸಚಿವರು ತಮ್ಮ ಪುತ್ರ, ಪುತ್ರಿ, ಅಕ್ಕ, ತಮ್ಮ, ಅಣ್ಣ, ಪತ್ನಿಗೆ ಟಿಕೆಟ್‌ ಕೊಡಿಸುವ ಮೂಲಕ ಪಕ್ಷದ ಇತರೆ ನಾಯಕರಿಗೆ ರಾಜಕೀಯವಾಗಿ ವಂಚನೆ ಮಾಡಿದ್ದಾರೆ’ ಎಂದು ಅವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.