ADVERTISEMENT

ಉದ್ಯೋಗಕ್ಕೆ ಶಿಕ್ಷಣದೊಂದಿಗೆ ಕೌಶಲ ಅಗತ್ಯ

ಎಂ.ಆರ್. ಎನ್ (ನಿರಾಣಿ) ಫೌಂಡೇಷನ್‌ನಿಂದ ಉದ್ಯೋಗ ಮೇಳ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 12:21 IST
Last Updated 19 ಆಗಸ್ಟ್ 2022, 12:21 IST
ವಿಜಯಪುರ ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಎಂ.ಆರ್. ಎನ್ (ನಿರಾಣಿ) ಫೌಂಡೇಷನ್ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಬಿಜೆಪಿ ಉಪಾಧ್ಯಕ್ಷ ಉಮೇಶ ಕಾರಜೋಳ ಉದ್ಘಾಟಿಸಿದರು
ವಿಜಯಪುರ ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಎಂ.ಆರ್. ಎನ್ (ನಿರಾಣಿ) ಫೌಂಡೇಷನ್ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಬಿಜೆಪಿ ಉಪಾಧ್ಯಕ್ಷ ಉಮೇಶ ಕಾರಜೋಳ ಉದ್ಘಾಟಿಸಿದರು   

ವಿಜಯಪುರ: ಉತ್ತಮ ಅಂಕ, ಪದವಿಯೊಂದಿಗೆ ವಿಶೇಷ ಜ್ಞಾನ, ಕೌಶಲ ಅಳವಡಿಸಿಕೊಂಡರೆ ಸರ್ಕಾರ ಹಾಗೂ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಾವಕಾಶ ಲಭಿಸುತ್ತವೆ ಎಂದುಬಿಜೆಪಿ ಉಪಾಧ್ಯಕ್ಷ ಉಮೇಶ ಕಾರಜೋಳ ಹೇಳಿದರು.

ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಎಂ.ಆರ್. ಎನ್ (ನಿರಾಣಿ) ಫೌಂಡೇಷನ್ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದಲ್ಲಿ ಮೊದಲ ಘಟ್ಟ ಶಿಕ್ಷಣ ಪೂರೈಸಿ, ಇದೀಗ ಉದ್ಯೋಗ ಎಂಬ ಎರಡನೇ ಘಟ್ಟಕ್ಕೆ ಬಂದಿದ್ದೀರಿ. ಇದು ಅತ್ಯಂತ ಮಹತ್ವದ ಘಟ್ಟವಾಗಿದೆ. ಪರಿಣಿತಿ ಇರುವವರಿಗೆ ಉದ್ಯೋಗ ಲಭಿಸಲಿದೆ ಎಂದರು.

ADVERTISEMENT

ಉದ್ಯೋಗದ ಲಭಿಸಿದ ಬಳಿಕ ಪ್ರತಿ ತಿಂಗಳು ಸಿಗುವ ವೇತನದಲ್ಲಿ ಒಂದು ಅಂಶವನ್ನು ದೇಶಕ್ಕೆ ಮೀಸಲಿಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಮುಖಂಡ ವಿವೇಕಾನಂದ ಡಬ್ಬಿ ಮಾತನಾಡಿ, ಉದ್ಯೋಗ ಸೃಷ್ಟಿ ಹೇಗೆ ಮಾಡಬೇಕು ಎಂಬುದನ್ನು ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರನ್ನು ನೋಡಿ ಕಲಿಯಬೇಕು. ‘ಉದ್ಯಮಿಯಾಗು, ಉದ್ಯೋಗ ನೀಡು’ ಎಂಬ ಧ್ಯೇಯದೊಂದಿಗೆ ಇಂದು 10 ಸಾವಿರ ಜನರಿಗೆ ಉದ್ಯೋಗ ನೀಡಿದ್ದಾರೆ ಎಂದರು.

ನಾಗರಾಜ ಕುಲಕರ್ಣಿ ಮಾತನಾಡಿ, ನಿರುದ್ಯೋಗ ನಿವಾರಣೆಗೆ ನಿರಾಣಿ ಸಮೂಹ ಸಂಸ್ಥೆ ಕಾರ್ಯಕ್ರಮ ಹಾಕಿಕೊಂಡಿದೆ. ಅವರೊಂದಿಗೆ ಕೈಜೋಡಿಸಿದರೆ ನಾಡಿಗೆ ಒಳ್ಳೆಯದಾಗಲಿದೆ ಎಂದರು.

ಸಂಸ್ಥೆ ಅಧ್ಯಕ್ಷ ಸುರೇಶ ಬಿರಾದಾರ ಮಾತನಾಡಿ, ನಿರಾಣಿ ಅವರುಕರ್ನಾಟಕ ಮಾತ್ರವಲ್ಲ, ನೆರೆಯ ಮಹಾರಾಷ್ಟ್ರದಲ್ಲೂ ಕಾರ್ಖಾನೆಗಳನ್ನು ನಿರ್ಮಿಸಿ ದೇಶದಾದ್ಯಂತ ಬೆಳೆಯುತ್ತಿದ್ದಾರೆ ಎಂದರು.

ನಿರಾಣಿ ಸಮೂಹಕ್ಕೆ ಸೇರಿದ 43 ಕಾರ್ಖಾನೆಗಳು ಸದ್ಯ ಇವೆ. ವರ್ಷದೊಳಗೆ 100 ಕಾರ್ಖಾನೆ ಸ್ಥಾಪಿಸಬೇಕು ಎಂಬುದು ಅವರ ಗುರಿಯಾಗಿದೆ ಎಂದು ಹೇಳಿದರು.

ಕೋವಿಡ್ ಕಾರಣಕ್ಕೆ ಹಲವರು ಉದ್ಯೋಗ ಕಳೆದುಕೊಂಡಿದ್ದರು. ಅಂತವರಿಗೆ ನೆರವಾಗಲಿ ಎಂಬ ಉದ್ದೇಶದಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.

ಹನುಮಂತ ನಿರಾಣಿ ಅವರು ವಿಧಾನ ಪರಿಷತ್ ಸದಸ್ಯರಾಗಿ ದಾಖಲೆ ಅಂತರದಲ್ಲಿ ಆಯ್ಕೆಯಾಗಲು ಯುವ ಸಮೂಹ ಕಾರಣವಾಗಿದೆ.‌ ಆ ಕಾರಣಕ್ಕೆ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.

ಬುರಾಣಪುರದ ಯೋಗೇಶ್ವರ ಮಾತಾಜಿ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಪ್ರಮುಖರಾದ ಶೀಲಾ ಬಿರಾದಾರ, ಬಿ.ಎಸ್.ಬಿರಾದಾರ, ಸಂಜುಗೌಡ ಪಾಟೀಲ, ರಾಜು ಕಳಸಗೊಂಡ, ಗಿರೀಶ ಅಂಗಡಿ, ದಿವ್ಯಾ ಬಿರಾದಾರ, ಐ.ಜಿ.ನ್ಯಾಮಗೌಡ, ಭಾರತಿ ಬುಯ್ಯಾರ, ಗಿರೀಶ ಆನೆಗುಂದಿ, ರಾಜು ವಾಲಿ ಇದ್ದರು.

ನೂರಾರು ಉದ್ಯೋಗಕಾಂಕ್ಷಿಗಳು ಪಾಲ್ಗೊಂಡಿದ್ದರು. ಟಾಟಾ, ಮಾರ್ಕೊಪೋಲ್, ಐಸಿಐಸಿಐ, ಹೊಂಡಾ ಸೇರಿದಂತೆ 56ಕ್ಕೂ ಅಧಿಕ ಕಂಪನಿಗಳು ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.