ಕೊಲ್ಹಾರ: ಇಲ್ಲಿ ಯುಕೆಪಿ ಬಳಿ ವಾರ್ಡ್ ನಂ.17 ಕ ಸ ನಂ 236ರಲ್ಲಿ ಕಟ್ಟಿಸಿರುವ ಮನೆ ತೆರವುಗೊಳಿಸಲು ನೀಡಿರುವ ನೋಟಿಸನ್ನು ಹಿಂಪಡೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡುವಂತೆ ಪಟ್ಟಣದ ನಿವಾಸಿಗಳು ಮತ್ತು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ನೇತೃತ್ವದಲ್ಲಿ ತಹಶೀಲ್ದಾರ್ ಎಸ್ ಎಚ್ ಅರಕೇರಿ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಕೊಲ್ಹಾರದ ಯುಕೆಪಿ ಬಳಿ ವಾರ್ಡ್ ನಂ.17ರ ಕ.ಸ.ನಂ. 236 ರಲ್ಲಿ ಸರಕಾರಿ ಜಾಗವೆಂದು ತಿಳಿದು ಸುಮಾರು 10- 15ಕುಟುಂಬಗಳು ಕಳೆದ 25-30 ವರ್ಷಗಳಿಂದ ವಾಸವಾಗಿರುತ್ತಾರೆ. ಇವರಲ್ಲಿ ಸಂತ್ರಸ್ತರು, ದಲಿತ ಸಮುದಾಯದವರು, ಬಡಜನರು ಸೇರಿದ್ದಾರೆ. ಅಂತಹ ಕುಟುಂಬಗಳಿಗೆ ಕೃ.ಮೇ.ಯೋ ಅಡಿಯಲ್ಲಿ ಮುಳುಗಡೆಯಾದ ಕೊಲ್ದಾರ ಪುನರ್ವಸತಿ ಕೇಂದ್ರದಲ್ಲಿ ನಿವೇಶನ ಹಂಚಿಕೆ ಕೂಡಾ ಮಾಡಿರುವುದಿಲ್ಲ.
ನೋಟಿಸ್ ನೀಡಿರುವ ಎಲ್ಲ ಕುಟುಂಬದವರನ್ನು ಸರಕಾರದ ಆಶ್ರಯ ವಸತಿ ಯೋಜನೆಯ ಫಲಾನುಭವಿಗಳೆಂದು ಗುರುತಿಸಿ ನಿವೇಶನದ ಹಕ್ಕು ಪತ್ರ ವಿತರಣೆ ಮಾಡಬೇಕು. ಸಾಧ್ಯವಾಗದಿದ್ದರೆ ಪರ್ಯಾಯ ವ್ಯವಸ್ಥೆ ಮಾಡುವವರೆಗೆ ನೋಟಿಸ್ ಹಿಂಪಡೆಯಬೇಕು. ಅಲ್ಲದೇ ಆ ಎಲ್ಲಾ ಕುಟುಂಬಗಳ ಜಾಗವನ್ನು ಬಿಟ್ಟು ಪ್ರವಾಸಿ ಮಂದಿರದ ಆವರಣ ಗೋಡೆ ನಿರ್ಮಿಸಿಕೊಳ್ಳಲು ಮತ್ತು ತಮ್ಮ ಉಳಿದ ಕಾಮಗಾರಿಗಳನ್ನು ಮಾಡಿಕೊಳ್ಳಲು ಇಲಾಖೆಯವರಿಗೆ ಸೂಚನೆ ನೀಡಬೇಕು ಎಂದು ಕೋರುವುದಾಗಿ ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ ಹೇಳಿದರು.
ರಾಜಶೇಖರ ಶೀಲವಂತ, ರಾಮಣ್ಣ ಬಾಟಿ, ಗಿರಿಯಪ್ಪ ಕಾಳೆ, ಖಾಸೀಂ ಕಾಳೆ, ರತ್ನವ್ವ ಮಾದರ, ಹಣಮವ್ವ ತಳಗೇರಿ, ಕಾಶಿಬಾಯಿ ಬುದ್ನಿ, ಮಹಾದೇವಿ ಬಾಡಗಂಡಿ, ರತ್ನವ್ವ ಬ್ಯಾಲ್ಯಾಳ, ರೇಣುಕಾ ಗುಡದಿನ್ನಿ, ಶಾಂತವ್ವ ಇಂಗಳೇಶ್ವರ, ಯಲ್ಲವ್ವ ಬ್ಯಾಲ್ಯಾಳ ಇನ್ನೂ ಹಲವಾರು ಮಹಿಳೆಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.