ADVERTISEMENT

ಕಣ್ಮನ ಸೆಳೆದ ಪ್ರಸಿದ್ಧ ಚಿತ್ರ ಕಲಾಕೃತಿಗಳು

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಚಿತ್ರಕಲಾ ಶಿಬಿರ

ಬಾಬುಗೌಡ ರೋಡಗಿ
Published 26 ಸೆಪ್ಟೆಂಬರ್ 2018, 13:53 IST
Last Updated 26 ಸೆಪ್ಟೆಂಬರ್ 2018, 13:53 IST
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ನಡೆದ ಚಿತ್ರಕಲಾ ಶಿಬಿರದಲ್ಲಿ ‘ಕುರಂದವಾಡ ಸಂಸ್ಥಾನದ ರಾಜವಾಡೆ’ ಚಿತ್ರಕ್ಕೆ ಅಂತಿಮ ಸ್ಪರ್ಶ ನೀಡಿದ ಚಿತ್ರಕಲಾ ಶಿಕ್ಷಕ ಡಾ.ಜಿ.ಎಸ್‌.ಭೂಸಗೊಂಡಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ನಡೆದ ಚಿತ್ರಕಲಾ ಶಿಬಿರದಲ್ಲಿ ‘ಕುರಂದವಾಡ ಸಂಸ್ಥಾನದ ರಾಜವಾಡೆ’ ಚಿತ್ರಕ್ಕೆ ಅಂತಿಮ ಸ್ಪರ್ಶ ನೀಡಿದ ಚಿತ್ರಕಲಾ ಶಿಕ್ಷಕ ಡಾ.ಜಿ.ಎಸ್‌.ಭೂಸಗೊಂಡಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ಸಂಸ್ಕೃತಿ, ಸಂಪ್ರದಾಯ, ಐತಿಹಾಸಿಕ ಮಹತ್ವ ಸಾರುವ ಸ್ಮಾರಕಗಳು, ಗ್ರಾಮೀಣ ಸೊಗಡು ಬಿಂಬಿಸುವ ಆಕರ್ಷಕ ಕಲಾಕೃತಿಗಳು ಜಿಲ್ಲೆಯ ಖ್ಯಾತ ಕಲಾವಿದರ ಕುಂಚದಲ್ಲಿ ಅರಳಿವೆ.

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಪ್ರವಾಸೋದ್ಯಮ ಇಲಾಖೆಯ ನಗರದಲ್ಲಿನ ಆರ್ಟ್‌ ಗ್ಯಾಲರಿಯಲ್ಲಿ ಆಯೋಜಿಸಿರುವ ಚಿತ್ರಕಲಾ ಶಿಬಿರದಲ್ಲಿ ರಾಜ್ಯದ ವಿವಿಧಡೆ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಪ್ರಸಿದ್ಧ 25 ಕಲಾವಿದರು, ಮೂರು ದಿನ ಶ್ರಮ ವಹಿಸಿ ರಚಿಸಿರುವ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಈ ಎಲ್ಲ ಕಲಾಕೃತಿಗಳನ್ನು ಆರ್ಟ್‌ ಗ್ಯಾಲರಿಯಲ್ಲೇ ಶಾಶ್ವತ ಪ್ರದರ್ಶನಕ್ಕಿಡುತ್ತಿರುವುದು ವಿಶೇಷ.

‘ತಿಕೋಟಾದಲ್ಲಿ ನಾಲ್ಕು ಎಕರೆ ಪ್ರದೇಶದಲ್ಲಿರುವ ಕುರಂದವಾಡ ಸಂಸ್ಥಾನದ ರಾಜವಾಡೆ ಪ್ರಾಚ್ಯವಸ್ತು ಇಲಾಖೆಯ ನಿರ್ಲಕ್ಷ್ಯಕ್ಕೀಡಾಗಿದೆ. ಇದರಿಂದ ವಾಡೆಯೊಳಗೆ ಮುಳ್ಳು ಕಂಟಿಗಳು ಬೆಳೆದು, ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ. ಬಹುತೇಕರಿಗೆ ಇದರ ಮಾಹಿತಿಯೇ ಇಲ್ಲ. ಹೀಗಾಗಿ ಸರ್ಕಾರದ ಗಮನ ಸೆಳೆಯಲು ಹಾಗೂ ಪ್ರವಾಸಿಗರ ಗಮನವನ್ನು ಇತ್ತ ಸೆಳೆಯಲು ಇದನ್ನು ಆಯ್ಕೆ ಮಾಡಿಕೊಂಡು ಕಲಾಕೃತಿ ರಚಿಸಿದ್ದೇನೆ. ಆರ್ಟ್‌ ಗ್ಯಾಲರಿಯಲ್ಲಿ ಶಾಶ್ವತ ಪ್ರದರ್ಶನಕ್ಕೆ ಈ ಚಿತ್ರ ಇಡುತ್ತಿರುವುದರಿಂದ ಮತ್ತಷ್ಟು ಪರಿಚಯ ಸಿಗಲಿದೆ’ ಎಂದು ಚಿತ್ರಕಲಾ ಶಿಕ್ಷಕ ಡಾ.ಜಿ.ಎಸ್‌.ಭೂಸಗೊಂಡ ತಿಳಿಸಿದರು.

ADVERTISEMENT

‘ಈ ಚಿತ್ರಕಲಾ ಶಿಬಿರ ಜನರಿಗೆ ಗೊತ್ತಿಲ್ಲದ ಬಹುತೇಕ ಸ್ಮಾರಕಗಳು ಮತ್ತು ಸಂಸ್ಕೃತಿ, ಸಂಪ್ರದಾಯ ಬಿಂಬಿಸುವ ಕಲಾಕೃತಿಗಳನ್ನು ಪರಿಚಯಿಸಲು ಉತ್ತಮ ವೇದಿಕೆಯಾಗಿದೆ. ಪ್ರತಿ ಕಲಾವಿದರೂ ಈವರೆಗೆ ಕತ್ತಲಲ್ಲಿ ಮುಳುಗಿದ್ದ ಜಿಲ್ಲೆಯ ಬಹುತೇಕ ವಿಶೇಷತೆಗಳನ್ನು ತಮ್ಮ ಕುಂಚದಲ್ಲಿ ಅರಳಿಸುವ ಮೂಲಕ ದೇಶ, ವಿದೇಶಗಳ ಪ್ರವಾಸಿಗರಿಗೆ ಪರಿಚಯಿಸುವ ಸಣ್ಣ ಪ್ರಯತ್ನ ನಡೆಸಿದ್ದಾರೆ’ ಎಂದು ಅವರು ಹೇಳಿದರು.

‘ಆದಿಲ್‌ ಶಾಹಿ ಅರಸರ ಕಾಲದಲ್ಲಿ ಕುಡಿಯುವ ನೀರಿಗಾಗಿ ನಿರ್ಮಿಸಿದ್ದ ಐತಿಹಾಸಿಕ ತಾಜ್‌ ಬಾವಡಿ ನಿರಂತರವಾಗಿ ತುಂಬಿ ತುಳುಕಿರುತ್ತಿತ್ತು. ಅದರ ಆಳ ಎಷ್ಟಿದೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಈಚೆಗೆ ಸ್ವಚ್ಛತೆಗೊಳಿಸಿದ್ದರಿಂದ ಕೆಳಭಾಗ ಹೇಗಿದೆ ಎಂಬುದು ನಮಗೆ ತಿಳಿಯಿತು. ಮತ್ತೆ ಇದರ ತಳಪಾಯ ಕಾಣುವುದು ಕಷ್ಟ ಸಾಧ್ಯ. ಹೀಗಾಗಿ ಮುಂದಿನ ಜನಾಂಗ ಚಿತ್ರದಲ್ಲಾದರೂ ಆಳ ಮತ್ತು ಕೆಳ ಭಾಗದ ಕುರಿತು ತಿಳಿಯಲಿ ಎನ್ನುವ ಕಾರಣದಿಂದ ತಾಜ್‌ಬಾವಡಿ ಖಾಲಿ ಇರುವ ದೃಶ್ಯ ರಚಿಸಿದ್ದೇನೆ’ ಎನ್ನುತ್ತಾರೆ ಹಿರಿಯ ಕಲಾವಿದ ಪಿ.ಎಸ್‌.ಕಡೇಮನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.