ADVERTISEMENT

ಮುದ್ದೇಬಿಹಾಳ : ಅತೀವೃಷ್ಟಿಗೆ ನಲುಗಿದ ಅನ್ನದಾತನ ಬದುಕು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 7:16 IST
Last Updated 8 ಅಕ್ಟೋಬರ್ 2025, 7:16 IST
ಫೋಟೋ:07ಎಂ.ಬಿ.ಎಲ್‌05 ಮುದ್ದೇಬಿಹಾಳ ತಾಲ್ಲೂಕು ಇಂಗಳಗೇರಿ ಗ್ರಾಮದ ಅತೀವೃಷ್ಟಿಯಿಂದಾಗಿ ಮಹಾದೇವಪ್ಪ ದೋರನಳ್ಳಿ ಅವರ ಹೊಲದಲ್ಲಿ ಬೆಳೆದ ಮೆಕ್ಕೆಜೋಳ ನೀರಿನಲ್ಲಿ ನಿಂತು ಕೊಳೆತಿರುವುದು.
ಫೋಟೋ:07ಎಂ.ಬಿ.ಎಲ್‌05 ಮುದ್ದೇಬಿಹಾಳ ತಾಲ್ಲೂಕು ಇಂಗಳಗೇರಿ ಗ್ರಾಮದ ಅತೀವೃಷ್ಟಿಯಿಂದಾಗಿ ಮಹಾದೇವಪ್ಪ ದೋರನಳ್ಳಿ ಅವರ ಹೊಲದಲ್ಲಿ ಬೆಳೆದ ಮೆಕ್ಕೆಜೋಳ ನೀರಿನಲ್ಲಿ ನಿಂತು ಕೊಳೆತಿರುವುದು.   

ಮುದ್ದೇಬಿಹಾಳ : ಆಗ‌ಸ್ಟ್‌ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆದ ಹಲವಾರು ಬೆಳೆಗಳು ನೀರಲ್ಲಿ ನಿಂತಿದ್ದು ಅನ್ನದಾತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಮುದ್ದೇಬಿಹಾಳ ತಾಲ್ಲೂಕಿನ ಇಂಗಳಗೇರಿ ಭಾಗದಲ್ಲಿ ನೂರಾರು ಎಕರೆ ಜಮೀನಿನಲ್ಲಿ ಬೆಳೆದಿರುವ ಬಹುತೇಕ ಎಲ್ಲ ಬೆಳೆಗಳು ಕೊಳೆತಿವೆ. ಉಳ್ಳಾಗಡ್ಡಿ, ಹತ್ತಿ, ತೊಗರಿ,ಮೆಕ್ಕೆಜೋಳ,ದ್ರಾಕ್ಷಿ,ಬಾಳೆ,ಟೊಮ್ಯಾಟೋ ಅತಿವೃಷ್ಟಿಯಿಂದ ಹೊಲದಲ್ಲಿಯೇ ಹಾಳಾಗಿದೆ.

ಪತ್ರಿಕೆಯೊಂದಿಗೆ ಮಾತನಾಡಿದ ರೈತ ಬಸವರಾಜ ಕುಂಟೋಜಿ, ಅತೀವೃಷ್ಟಿಯಿಂದ ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದೇವೆ.ಮಳೆ ನಿರಂತರವಾಗಿ ಸುರಿದು ಬೆಳೆ ಹಾನಿಯಾಗಿದ್ದರೂ ಯಾವ ಅಧಿಕಾರಿಯೂ ನಮ್ಮತ್ತ ಬಂದಿಲ್ಲ.ಗ್ರಾಮಲೆಕ್ಕಾಧಿಕಾರಿಗಳಿಗೆ ಕರೆ ಮಾಡಿದರೆ ಫೋನ್ ಕರೆ ಸ್ವೀಕರಿಸುವುದಿಲ್ಲ.ರೈತನಿಗೆ ಹಾನಿ ಆಗಿದೆ ಎಂದು ಹೇಗೆ ಯಾರು ಬಂದು ಕೇಳುತ್ತಾರೆ ಎಂದು ಪ್ರಶ್ನಿಸಿದರಲ್ಲದೇ ಸಾಲ ಸೋಲ ಮಾಡಿ ಹೊಲಕ್ಕೆ ಮಾಡಿದ ಖರ್ಚು ಮಳೆಯಿಂದ ಕೊಚ್ಚಿ ಹೋಗಿದೆ.ರೈತರ ಬದುಕು ನೀರಲ್ಲಿ ಬೆಳೆ ಮುಳುಗಿದಂತಾಗಿದೆ ಎಂದು ಹೇಳಿದರು.
ರೈತರಾದ ಹಣಮಂತ ಚಲವಾದಿ,ಬಸವರಾಜ ಹಿರೇಕುರುಬರ,ವಿಠ್ಠಪ್ಪ ಚನ್ನದಾಸರ,ಶಂಕರಗೌಡ ಪಾಟೀಲ,ಮಲ್ಲಣ್ಣ ಕೋಳೂರ,ಪ್ರಭುಗೌಡ ಗುರೆಡ್ಡಿ, ಸಿದ್ದಣ್ಣ ದಿಡ್ಡಿ, ಗುರಣ್ಣ ಕಡ್ಡಿ, ಸಾಹೇಬಗೌಡ ಹರನಾಳ,ಶಂಕ್ರಪ್ಪ ಕುಂಟೋಜಿ ಮೊದಲಾದವರು ಮಾತನಾಡಿ, ಅತೀವೃಷ್ಟಿಯಿಂದ ಬೆಳೆ ಹಾನಿಯಾಗಿದ್ದು ಈವರೆಗೂ ಒಬ್ಬರೆ ಒಬ್ಬ ತಾಲ್ಲೂಕು ಮಟ್ಟದ ಅಧಿಕಾರಿಗಳು ನಮ್ಮ ಭಾಗದಲ್ಲಿ ಬಂದಿಲ್ಲ.ಅಳಲು ಯಾರಿಗೆ ಹೇಳಬೇಕು ಎಂದು ಅಲವತ್ತುಕೊಂಡರು.
ಸರ್ವೆ ಮಾಡದ ಅಧಿಕಾರಿಗಳು: ತಾಲ್ಲೂಕು ಆಡಳಿತವೇನೋ ಜಂಟಿ ಸಮೀಕ್ಷೆ ಆರಂಭಿಸಲಾಗಿದೆ ಎಂದು ಹೇಳುತ್ತಿದ್ದಾರೆ.ಆದರೆ ಈವರೆಗೂ ಕೃಷಿ,ಕಂದಾಯ,ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸರ್ವೆಗೆ ಹೋಗಿರುವುದು ಕಂಡಿಲ್ಲ ಎನ್ನುತ್ತಿದ್ದಾರೆ ಇಂಗಳಗೇರಿ ಭಾಗದ ರೈತರು.

ADVERTISEMENT

’ಮಳೀ ನೀರಾಗ ಬೆಳಿ ನಿಂತು ಕೊಳ್ಯಾಕತ್ತದರೀ.ಅದು ನೋಡ್ತಿದ್ರ ಜೀವ ಕಿತ್ತಿ ಬಂದAಗ ಆಗಾಕತ್ತದ.ಸರ್ಕಾರದವ್ರು ನಮ್ಗ ಆಸ್ರ ಆಗಬೇಕು.ರೈತನ ಬಾಳೆವು ಮಳೀ ಭಾಳ ಬಂದ್ರೂ ತ್ರಾಸ್,ಸ್ವಲ್ಪ ಬಂದ್ರೂ ತ್ರಾಸ ಅನ್ನುವಂಗಾಗೈತ್ರಿ’ ಎಂದು ರೈತ ಶಂಕರಗೌಡ ಪಾಟೀಲ ಹೇಳಿದರು.

ಫೋಟೋ:07-ಎಂ.ಬಿ.ಎಲ್‌05ಎ ಮುದ್ದೇಬಿಹಾಳ ತಾಲ್ಲೂಕು ಇಂಗಳಗೇರಿ ಗ್ರಾಮದ ರೈತ ಸಿದ್ದಲಿಂಗಪ್ಪ ಕುಂಟೋಜಿ ಅವರ ಹೊಲದಲ್ಲಿ ಬೆಳೆದಿದ್ದ ಈರುಳ್ಳಿ ನೀರಲ್ಲಿ ಮುಳುಗಿದಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.