ADVERTISEMENT

ಗ್ರಾಹಕರ ಧರಣಿಗೆ ಪ್ರಾಂತ ರೈತಸಂಘ ಬೆಂಬಲ

ಮುರುಗೇಶ ನಿರಾಣಿ ಸೌಹಾರ್ದ ಸಂಘದಿಂದ ವಂಚನೆ ಆರೋಪ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 14:23 IST
Last Updated 28 ನವೆಂಬರ್ 2020, 14:23 IST
ಮುರುಗೇಶ ನಿರಾಣಿ ಸೌಹಾರ್ದ ಸಂಘದ ವಂಚನೆ ವಿರೋಧಿಸಿ ಗ್ರಾಹಕರು ನಡೆಸುತ್ತಿರುವ ಧರಣಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಪಾಲ್ಗೊಂಡಿದ್ದರು
ಮುರುಗೇಶ ನಿರಾಣಿ ಸೌಹಾರ್ದ ಸಂಘದ ವಂಚನೆ ವಿರೋಧಿಸಿ ಗ್ರಾಹಕರು ನಡೆಸುತ್ತಿರುವ ಧರಣಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಪಾಲ್ಗೊಂಡಿದ್ದರು   

ವಿಜಯಪುರ: ಮುರುಗೇಶ ನಿರಾಣಿ ಸೌಹಾರ್ದ ಸಂಘದಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ತೊಡಗಿಸಿದ ಗ್ರಾಹಕರಿಗೆ ಹಣ ಮರಳಿ ಕೊಡದೇ ವಂಚಿಸಿರುವುದನ್ನು ವಿರೋಧಿಸಿ ನಡೆಯುತ್ತಿರುವ ಧರಣಿಗೆ ಕರ್ನಾಟಕ ಪ್ರಾಂತ ರೈತ ಸಂಘ ಬೆಂಬಲ ನೀಡಿದೆ.

ಸಂಘ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಮುರುಗೇಶ ನಿರಾಣಿ ಅವರ ಹೆಸರನ್ನು ನೋಡಿ ಕೋಟ್ಯಂತರ ಹಣವನ್ನು ಜನರು ವಿವಿಧ ರೀತಿಯಿಂದ ಹಣವನ್ನು ತೊಡಗಿಸಿದ್ದಾರೆ. ಈಗ ₹ 39 ಕೋಟಿ ಹಣವನ್ನು ಸೌಹಾರ್ದದದ ಆಡಳಿತ ಮಂಡಳಿ ದುರುಪಯೋಗ ಪಡಿಸಿಕೊಂಡಿದ್ದು, ಗ್ರಾಹಕರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಗ್ರಾಹಕರಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಹಣ ದುರುಪಯೋಗ ಪಡಿಸಿಕೊಂಡ ಸಿಬ್ಬಂದಿಯನ್ನು ಕಾನೂನು ರೀತಿಯ ಕ್ರಮ ಜರುಗಿಸಿ ಅವರ ಆಸ್ತಿಯನ್ನು ಮುಟ್ಟುಗೋಲ ಹಾಕಿಸಿ ಗ್ರಾಹಕರಿಗೆ ಹಣ ಹಿಂದಿರುಗಿಸಬೇಕು. ಮುರುಗೇಶ ನಿರಾಣಿ ಕೂಡ ಇದರಲ್ಲಿ ಮುತುರ್ವಜಿ ವಹಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಸೋಮವಾರದಿಂದ ನಿರಂತರವಾಗಿ ಧರಣಿ ನಡೆಸಲಾಗುವುದು. ಮಂಗಳವಾರದಂದು ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು. ಇದಕ್ಕೂ ಸ್ಪಂದನೆ ಸಿಗದಿದ್ದಲ್ಲಿ ಉಪವಾಸ ಸತ್ಯಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಧರಣಿಯಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮ ರಂಜಣಗಿ, ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣರಾಯ ಈಳಗೇರ, ರೈತ ಸಂಘದ ರಾಹುಲ ಕುಬಕಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ಶಕ್ತಿಕುಮಾರ, ಸದಾಶಿವ ಬರಟಗಿ ರೇಣುಕಾ ಮಾಲಗಾರ ಇದ್ದರು.

ಸಂಬಂಧವಿಲ್ಲ:ಮುರುಗೇಶ ನಿರಾಣಿ

ವಿಜಯಪುರ: ಎಸ್.ಎಂ.ಎನ್. ಸೌಹಾರ್ದ ಸಹಕಾರಿ ಸಂಸ್ಥೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಶಾಸಕ ಮುರುಗೇಶ ನಿರಾಣಿ ತಿಳಿಸಿದ್ದಾರೆ.

ಇದು ರಾಜಕೀಯ ಪ್ರೇರಿತ ಮತ್ತು ದುರುದ್ದೇಶದಿಂದ ಕೂಡಿದ್ದು, ಹಾಗೂ ನನ್ನ ವೈಯಕ್ತಿಕ ತೆಜೋವಧೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಎಸ್.ಎಂ.ಎನ್. ಕ್ರೇಡಿಟ್ ಸೌಹಾರ್ದ ಸಹಕಾರಿಯವರು ಸಹಕಾರಿಯ ಮೊದಲಿನ ನಾಮಫಲಕ ತೆರವುಗೊಳಿಸದೇ ಇರುವುದರಿಂದ ಹಾಗೂ ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರವುದರ ವಿರುದ್ದ ದೂರು ದಾಖಲಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.