ADVERTISEMENT

ವಿಜಯಪುರ | FTA ಒಪ್ಪಂದಕ್ಕೆ ವಿರೋಧ: ಆ.13ಕ್ಕೆ ಮೋದಿ, ಟ್ರಂಪ್‌ ಪ್ರತಿಕೃತಿ ದಹನ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 11:42 IST
Last Updated 22 ಜುಲೈ 2025, 11:42 IST
   

ವಿಜಯಪುರ: ದೇಶದ ಕೃಷಿ, ಹೈನುಗಾರಿಕಾ ಕ್ಷೇತ್ರಕ್ಕೆ ಮಾರಕವಾಗಿರುವ ಎಫ್‌ಟಿಎ (ಫ್ರೀ ಟ್ರೇಡ್ ಅಗ್ರಿಮೆಂಟ್‌) ಒಪ್ಪಂದಕ್ಕೆ ಸಹಿ ಹಾಕಲು ಪರಸ್ಪರ ಮುಂದಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ನಡೆಯನ್ನು ಖಂಡಿಸಿ, ದೇಶದಾದ್ಯಂತ ಆಗಸ್ಟ್‌ 13ರಂದು ಇಬ್ಬರು ನಾಯಕರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಾಪುರ ನಾಗೇಂದ್ರ ಹೇಳಿದರು.

ದೇಶದಲ್ಲಿ ಡಬ್ಲ್ಯುಟಿಒ ಒಪ್ಪಂದ ವೇಗವಾಗಿ ಜಾರಿಗೆ ತರಲು ಪ್ರಧಾನಿ ಮೋದಿ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಕೇಂದ್ರ ಸರ್ಕಾರದ ಕಾರ್ಪೊರೇಟ್ ಪರ ಆಡಳಿತದ ವಿರುದ್ದ ರೈತ ಸಂಘಟನೆಗಳ ನೇತೃತ್ವದಲ್ಲಿ ದೇಶದಾದ್ಯಂತ ಆಗಸ್ಟ್‌ 15 ರಿಂದ ‘ಕಾರ್ಪೊರೇಟ್ ಕಂಪನಿಗಳೇ ಭಾರತ ಬಿಟ್ಟು ತೊಲಗಿ’ ಎಂಬ ಚಳವಳಿ ಆರಂಭಿಸಲಾಗುವುದು ಎಂದರು.

ADVERTISEMENT

ಕೇಂದ್ರ ಸರ್ಕಾರ ಈ ಹಿಂದೆ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆ ವಿರುದ್ಧ ದೆಹಲಿಯಲ್ಲಿ ನಡೆದಿದ್ದ ರೈತರ ಹೋರಾಟದ ಐದನೇ ವರ್ಷಾಚರಣೆ ಹಿನ್ನೆಲೆಯಲ್ಲಿ ನವೆಂಬರ್ 26ರಂದು ದೆಹಲಿ ಹಾಗೂ ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ ಸಾವಿರಾರು ರೈತರು ಬೃಹತ್ ಟ್ರ್ಯಾಕ್ಟರ್ ಜಾಥಾ ನಡೆಸಲಿದ್ದಾರೆ ಎಂದರು.

ಸರ್ಕಾರ ಕಿತ್ತೊಗೆಯುತ್ತೇವೆ:

ರಾಜ್ಯ ಸರ್ಕಾರವು ರೈತರ ಕೃಷಿ ಪಂಪ್ ಸೆಟ್‌ಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಬಂದರೆ ಸರ್ಕಾರದ ವಿರುದ್ಧ ರೈತ ಚಳುವಳಿ ಆರಂಭಿಸಿ, ಕಿತ್ತೊಗೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿ, ರೈತರಿಗೆ ಅಗತ್ಯ ಇರುವ ಡಿಎಪಿ, ಯೂರಿಯಾ, ಕಾಂಪ್ಲೆಕ್ಸ್ ಕೊರತೆ ಎದುರಾಗಿದೆ. ಜೊತೆಗೆ ಮಾರುಕಟ್ಟೆಯಲ್ಲಿ ಗರಿಷ್ಠ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.‌  ಇದರ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದರು.

ನ್ಯಾನೋ ರಸಗೊಬ್ಬರ ಮಾರಾಟ ಮಾಡುವ ಉದ್ದೇಶದಿಂದ ಡಿಎಪಿ, ಯೂರಿಯೂ ರೈತರ ಕೈಗೆ ಸಿಗದಂತೆ ಮಾಡಲಾಗಿದೆ. ನ್ಯಾನೋ ರಸಗೊಬ್ಬರ ಉತ್ಪಾದನೆಯಲ್ಲಿ ಸರ್ಕಾರಗಳಿಗೆ ಲಾಭ ಹೆಚ್ಚಿದೆ. ಆದ ಕಾರಣ ಸರ್ಕಾರ ಉದ್ದೇಶ ಪೂರ್ವಕಾಗಿ ಡಿಎಪಿ, ಯೂರಿಯಾ ಕೊರತೆ ಮಾಡಿದೆ ಎಂದು ದೂರಿದರು.

ರಾಜ್ಯದಲ್ಲಿ ಅಕ್ರಮ ಗೊಬ್ಬರ ಮಾರಾಟ ತಡೆಗೆ ಹಾಗೂ ನ್ಯಾನೋ ರಸಗೊಬ್ಬರ ಬಳಕೆ ಬಗ್ಗೆ ರೈತರಿಗೆ ಪರಿಣಾಮಕಾರಿಯಾಗಿ ತಿಳಿಸಿ ಕೊಡುವಲ್ಲಿ ಸರ್ಕಾರ, ಕೃಷಿ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.