ADVERTISEMENT

ಎತ್ತುಗಳಿಗೆ ಕೃಷಿ ಸಲಕರಣೆ ಕಟ್ಟಿ ಪ್ರತಿಭಟನೆ

ಕೃಷಿ ಕಾಯ್ದೆ ಹಿಂಪಡೆಯಲು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 11:42 IST
Last Updated 26 ಜನವರಿ 2021, 11:42 IST
ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ವಿಜಯಪುರ ನಗರದಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ವತಿಯಿಂದ ಎತ್ತುಗಳಿಗೆ ಕೃಷಿ ಸಲಕರಣೆಗಳು ಕಟ್ಟಿ ಪ್ರತಿಭಟನೆ ನಡೆಸಲಾಯಿತು
ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ವಿಜಯಪುರ ನಗರದಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ವತಿಯಿಂದ ಎತ್ತುಗಳಿಗೆ ಕೃಷಿ ಸಲಕರಣೆಗಳು ಕಟ್ಟಿ ಪ್ರತಿಭಟನೆ ನಡೆಸಲಾಯಿತು   

ವಿಜಯಪುರ: ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿ ಮತ್ತು ಬೆಂಗಳೂರಿನಲ್ಲಿ ಮಂಗಳವಾರ ನಡೆದರೈತರ ಟ್ರ್ಯಾಕ್ಟರ್ ಪರೇಡ್‍ ಬೆಂಬಲಿಸಿ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‍ಸಿಸಿ) ವತಿಯಿಂದ ಜಿಲ್ಲೆಯ ವಿವಿಧ ರೈತ ಸಂಘಟನೆಗಳ ಮುಖಂಡರು ಎತ್ತುಗಳಿಗೆ ಕೃಷಿ ಸಲಕರಣೆಗಳು ಕಟ್ಟಿ ಪ್ರತಿಭಟನೆ ನಡೆಸಿದರು.

ದೆಹಲಿ ಹೋರಾಟದಲ್ಲಿ ಹುತಾತ್ಮರಾದ ರೈತರ ಭಾವಚಿತ್ರಕ್ಕೆ ರಿಯ ಹೋರಾಟಗಾರ ಭೀಮಸಿ ಕಲಾದಗಿ ಮಾಲಾರ್ಪಣೆ ಮಾಡಿದರು. ಬೆಳಗಾವಿ ವಿಭಾಗದ ರೈತರ ಪ್ರಚಾರ ಜಾಥಾ ತಂಡದವರು ಭಾಗವಹಿಸಿ ಹೋರಾಟದ ಹಾಡುಗಳು ಪ್ರಸ್ತುತಪಡಿಸಿದರು. ರೈತರ ಟ್ರ್ಯಾಕ್ಟರ್ ಪರೇಡ್ ಯಶಸ್ವಿಯಾಗಲಿ, ಕೃಷಿ ಕಾಯ್ದೆ ಹಿಂಪಡೆಯದ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗುದರು.

ರೈತ ಮುಖಂಡರಾದ ಭೀಮಶಿ ಕಲಾದಗಿ ಮಾತನಾಡಿ,ಎಪಿಎಂಸಿ ತಿದ್ದುಪಡಿ ಕಾಯ್ದೆ 2020, ಗುತ್ತಿಗೆ ಕೃಷಿ ಕಾಯ್ದೆ 2020, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ 2020 ಹಾಗೂ ವಿದ್ಯುತ್ ತಿದ್ದುಪಡಿ ಮಸೂದೆ 2020 ಹಾಗೂ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಎ.ಪಿ.ಎಂ.ಸಿ. ತಿದ್ದುಪಡಿ ಕಾಯ್ದೆ, ಭೂ ಸ್ವಾಧೀನ ತಿದ್ದುಪಡಿ ಕಾಯ್ದೆಕರಾಳ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಆರೋಪಿಸಿದರು.

ADVERTISEMENT

ಈ ಕಾಯ್ದೆಗಳು ಅಗತ್ಯ ವಸ್ತುಗಳನ್ನು ಕಾಳಸಂತೆಯಲ್ಲಿ ದಾಸ್ತಾನು ಮಾಡುವುದಕ್ಕೆ ಅವಕಾಶ ನೀಡುತ್ತದೆ. ಅಲ್ಲದೆ, ಇದು ಸರ್ಕಾರಿ ಕೃಷಿ-ಮಂಡಿಗಳನ್ನು (ಎಪಿಎಂಸಿ) ನಾಶ ಮಾಡುತ್ತದೆ. ಉದ್ಯಮಿಗಳಿಗೆ ಖಾಸಗಿ (ಎಪಿಎಂಸಿ) ಮಂಡಿಗಳನ್ನು ತೆರೆಯಲು ಅವಕಾಶ ನೀಡುತ್ತದೆ ಎಂದು ದೂರಿದರು.

ಕಾರ್ಪೊರೇಟ್ ಕಂಪನಿಗಳ, ಬಹುರಾಷ್ಟ್ರೀಯ ಕಂಪನಿಗಳ ಮೋಸ, ಶೋಷಣೆಗೆ ರೈತರು ಬಲಿಯಾಗುತ್ತಾರೆ. ಗುತ್ತಿಗೆ ಕೃಷಿಯ ಹೆಸರಿನಲ್ಲಿ ರೈತರಿಂದ ಅವರ ಜೀವನೋಪಾಯದ ಏಕೈಕ ಸಾಧನವಾಗಿರುವ ಕೃಷಿ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತದೆ. ಕೃಷಿಯನ್ನು ಖಾಸಗಿ ಬೃಹತ್ ಕಂಪನಿಗಳ ನಿಯಂತ್ರಣಕ್ಕೆ ತರಲಾಗುತ್ತದೆ. ರೈತರು ಸಂಪೂರ್ಣವಾಗಿ ತಮ್ಮ ಸ್ವಾತಂತ್ರ್ಯ ಕಳೆದುಕೊಂಡು ಕಂಪನಿಗಳ ಹಂಗಿನಲ್ಲಿ ನಡೆದಾಡುವ ಹೆಣಗಳಾಗಿ ಬಿಡುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಬಂಡವಾಳಶಾಹಿ ಉದ್ಯಮಿಗಳು ರೈತರ ಭೂಮಿಯನ್ನು ಖರೀದಿ ಮಾಡಿ ಸಮಸ್ತ ಸಂಪತ್ತಿನ ಒಡೆಯರಾಗುತ್ತಾರೆ. ಹಳ್ಳಿ-ಹಳ್ಳಿಗಳಲ್ಲಿರುವ ಕೃಷಿ ಸಂಪತ್ತನ್ನು ರೈತರಿಂದ ಕಿತ್ತು ಶ್ರೀಮಂತ ಬಂಡವಾಳಿಗರಿಗೆ ಧಾರೆಯೆರೆಯಲು ಸರ್ಕಾರ ಈ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಚಂದ್ರಗೌಡ ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರದ ಜನದ್ರೋಹಿ ಕಾನೂನುಗಳನ್ನು ಹಿಮ್ಮೆಟ್ಟಿಸಲೇಬೇಕು ಎಂದರು.

ರೈತ ಮುಖಂಡ ಶಕ್ತಿಕುಮಾರ ಉಕಮನಾಳ ಮಾತನಾಡಿ, ಬಿ.ಜೆ.ಪಿ. ಅಧಿಕಾರಕ್ಕೆ ಬಂದಾಗಿನಿಂದಲೂ ಕಾರ್ಮಿಕರು, ವಿದ್ಯಾರ್ಥಿ, ಯುವಜನ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ. ಈಗ ರೈತರ ಕೃಷಿ ಭೂಮಿ ಸಂಪತ್ತನ್ನು ಲೂಟಿ ಮಾಡಲು ಅಂಬಾನಿ ಅದಾನಿಗೆ ಅವಕಾಶಮಾಡಿಕೊಟ್ಟಿದೆ ಎಂದು ಆರೋಪಿಸಿದರು.

ಆರ್‌ಕೆಎಸ್ ಜಿಲ್ಲಾ ಸಂಚಾಲಕ ಬಾಳು ಜೇವೂರ, ರೈತ ಮುಖಂಡರಾದ ವರಲಕ್ಷ್ಮೀ, ಎಂ.ಬಿ.ಮಾಣಿಕ, ಅರವಿಂದ ಕುಲಕರ್ಣಿ, ಸುರೇಖಾ ರಜಪೂತ, ಅಣ್ಣಾರಾಯ ಈಳಗೇರ, ಪ್ರಕಾಶ್ ಹಿಟ್ನಳ್ಳಿ, ಸಂಗಪ್ಪ ಕಪಾಳೆ, ಯಲ್ಲಪ್ಪ ಹರಗೇ, ತಿಪರಾಯ ಹತ್ತರಕಿ, ಮಹಾದೇವ ಲಿಗಾಡೆ, ಆಕಾಶ, ಮಿನಾಕ್ಷಿ ಕಾಲೇಬಾಗ, ಸುಜಾತಾ ಶಿಂದೆ, ಶೋಭಾ ಬಗಲಿ, ಲತಾ ಈಟಿ, ನೀಲಮ್ಮ ಬಾಗಮಾರೆ, ಧನಸಿಂಗ್ ರಾಠೋಡ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

***

ಸರ್ಕಾರವು ರೈತ ವಿರೋಧಿ ಕಾಯ್ದೆಗಳನ್ನು ಕೈಬಿಡಲು ತಯಾರಿಲ್ಲ. ಹೋರಾಟ ಒಡೆಯಲು, ದಿಕ್ಕು ತಪ್ಪಿಸಲು ಎಲ್ಲ ಕುತಂತ್ರಗಳನ್ನು ಮಾಡುತ್ತಿದೆ. ಚಳವಳಿಗೆ ಕಳಂಕ ಹಚ್ಚಲು ಪ್ರಯತ್ನಿಸುತ್ತಿದೆ

- ಬಾಳು ಜೇವೂರ,ಜಿಲ್ಲಾ ಸಂಚಾಲಕ, ಆರ್‌ಕೆಎಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.