ADVERTISEMENT

ತಂದೆ, ತಾಯಿ ದೇಗುಲ ಕಟ್ಟಿದ ಮಕ್ಕಳು!

ಸಹೋದರರ ಸತ್ಕಾರ್ಯ ಅನನ್ಯ: ಪ್ರೊ.ಕೊಣ್ಣೂರ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 14:43 IST
Last Updated 19 ಏಪ್ರಿಲ್ 2021, 14:43 IST
ವಿಜಯಪುರ ಸಮೀಪದ ಜಾಲಗೇರಿ ಎಲ್.ಟಿ.ನಂ.5 ರಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅಶೋಕಕುಮಾರ ಜಾಧವ ಹಾಗೂ ಸಹೋದರರು ತಮ್ಮ  ತಂದೆ ತಾಯಿ ನೆನಪಿಗಾಗಿ ನಿರ್ಮಿಸಿರುವ  ದೇಗುಲವನ್ನು ಯಲ್ಲಟ್ಟಿ ಗ್ರಾಮದ ಕೊಣ್ಣೂರ ಪಿಯು ಕಾಲೇಜು ಸಂಸ್ಥಾಪಕ ಪ್ರೊ.ಬಸವರಾಜ ಕೊಣ್ಣೂರ ಉದ್ಘಾಟಿಸಿದರು
ವಿಜಯಪುರ ಸಮೀಪದ ಜಾಲಗೇರಿ ಎಲ್.ಟಿ.ನಂ.5 ರಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅಶೋಕಕುಮಾರ ಜಾಧವ ಹಾಗೂ ಸಹೋದರರು ತಮ್ಮ  ತಂದೆ ತಾಯಿ ನೆನಪಿಗಾಗಿ ನಿರ್ಮಿಸಿರುವ  ದೇಗುಲವನ್ನು ಯಲ್ಲಟ್ಟಿ ಗ್ರಾಮದ ಕೊಣ್ಣೂರ ಪಿಯು ಕಾಲೇಜು ಸಂಸ್ಥಾಪಕ ಪ್ರೊ.ಬಸವರಾಜ ಕೊಣ್ಣೂರ ಉದ್ಘಾಟಿಸಿದರು   

ವಿಜಯಪುರ: ಆಧುನಿಕತೆಯ ಸೆಳೆತದಲ್ಲಿ ಎಲ್ಲವನ್ನು ಕಳೆದುಕೊಳ್ಳುತ್ತಿದ್ದೇವೆ. ಅದರಲ್ಲೂ ತಂದೆ, ತಾಯಿ, ಬಂಧು–ಬಳಗ, ಒಡಹುಟ್ಟಿದ ಅಣ್ಣ,ತಮ್ಮ, ಅಕ್ಕ,ತಂಗಿ ಹೀಗೆ ಎಲ್ಲ ಪವಿತ್ರ ಭಾವಬಂಧದ ಬೇಸುಗೆ ದಿನೇದಿನೇ ಕಳಚುತ್ತಲಿವೆ. ಇಂಥಅನುಬಂಧಿತ ಸಂಬಂಧಗಳು ಕಣ್ಮರೆಯಾಗುತ್ತಿರುವಾಗ ಜಾಧವ ಸಹೋದರರು ತಮ್ಮ ಜನ್ಮದಾತರ ಸವಿನೆನಪಿಗಾಗಿ ದೇಗುಲ ನಿರ್ಮಿಸಿ ತಂದೆ ತಾಯಿಗಳ ಮೇಲಿನ ಪ್ರೀತಿಯ ಋಣಭಾವ ಮೆರೆದಿದ್ದಾರೆ ಎಂದು ಜಮಖಂಡಿ ತಾಲ್ಲೂಕಿನ ಯಲ್ಲಟ್ಟಿ ಕೊಣ್ಣೂರ ಪಿಯು ಕಾಲೇಜಿನ ಸಂಸ್ಥಾಪಕ ಪ್ರೊ.ಬಸವರಾಜ ಕೊಣ್ಣೂರ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅಶೋಕಕುಮಾರ ಜಾಧವ ಹಾಗೂ ಮೂವರು ಸಹೋದರರು ಸೇರಿ ತಮ್ಮ ತಂದೆ ತಾಯಿ ಸವಿನೆನಪಿನಲ್ಲಿ ಸ್ವಗ್ರಾಮ ವಿಜಯಪುರ ತಾಲ್ಲೂಕಿನ ಜಾಲಗೇರಿ ಎಲ್.ಟಿ.ನಂ.5ರಲ್ಲಿ ನೂತನವಾಗಿ ನಿರ್ಮಿಸಿರುವ ಮಾತಾ ಪಿತೃ ದೇವಾಲಯದ ಉದ್ಘಾಟಿಸಿ ಅವರು ಮಾತನಾಡಿದರು.

ತಂದೆ, ತಾಯಿ ಬಗ್ಗೆ ಇರಬೇಕಾದ ಪ್ರೀತಿ, ಅಂತಃಕರಣ, ಮಮತೆಯ ಕಲ್ಪನೆ ನಿಜವಾಗಿಯೂ ಇಲ್ಲಿ ಅದ್ಭುತವಾಗಿ ಅನಾವರಣಗೊಂಡಿದೆ. ಮಾತಾ, ಪಿತೃವನ್ನು ನಾಲ್ಕು ಸಹೋದರರು ಜೀವಕ್ಕೆ ಜೀವ ಹಚ್ಚಿಕೊಂಡು ಹೆತ್ತವರ ಸ್ಮರಣೆಗಾಗಿ ಅವರ ಹೆಸರಿನ ಗುಡಿ ಕಟ್ಟಿಸಿರುವುದು ಔಚಿತ್ಯ ಪೂರ್ಣವಾಗಿದೆ ಎಂದರು.

ADVERTISEMENT

ಸ್ವರ್ಗವಾಸಿಯಾಗಿರುವ ಜೀವಗಳನ್ನು ಸಮೀಪ ಇರಿಸಿಕೊಳ್ಳುವಂಥ ಒಳ್ಳೆಯ ಕಾರ್ಯ ಇಲ್ಲಿ ನಡೆದಿದೆ. ತಂದೆ, ತಾಯಿ ನೋಡುವ ದೃಷ್ಟಿಕೋನದಲ್ಲಿ ಅಮೃತ ಸಿಂಚನ ತುಂಬಿರುತ್ತದೆ. ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಅವರ ಮೇಲಿರುವ ಪ್ರೀತಿಗಾಗಿ ವಿಧವಿಧ ಕಷ್ಟದ ಕವಲುದಾರಿ ಸವೆದಿರುತ್ತಾರೆ. ಅದನ್ನು ಮಕ್ಕಳಾದವರು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ದೇವ ಸ್ವರೂಪಿಗಳಾದ ಅಪ್ಪ ಅಮ್ಮರನ್ನು ಪೂಜ್ಯನೀಯ ಭಾವದಿಂದ ಕಾಣುವ ಗುಣ ಎಲ್ಲ ಯುವಜನತೆಯಲ್ಲಿ ಮೂಡಿ ಬರಬೇಕು. ಹೆತ್ತವರೇ ನಮ್ಮ ಸರ್ವಸ್ವ ಎಂದು ತಿಳಿದು ಬದುಕು ಅರ್ಪಿಸಿದರೆ ಒಳಿತು ಕಾಣಬಹುದು ಎಂದು ಹೇಳಿದರು.

ಎಷ್ಟೋ ಕಡೆ ತಂದೆ ತಾಯಿಗಳಿಗೆ ಭದ್ರತೆಯಿಲ್ಲ. ನೋಡುವರೇ ದಿಕ್ಕಿಲ್ಲ. ಜೀವಂತ ಇದ್ದಾಗ ಸರಿಯಾಗಿ ಆರೈಕೆ ಮಾಡದೇ ವೃದ್ಧಾಶ್ರಮದ ದಾರಿಯತ್ತ ತಳ್ಳುತ್ತಿರುವುದು ವಿಷಾದ. ಕಣ್ಣಿಗೆ ಕಾಣುವ ದೈವಶಕ್ತಿ ತಂದೆ ತಾಯಿಗಳೇ ನಿಜವಾದ ದೇವರು. ಅಪ್ಪ ಅಮ್ಮ ಪದಗಳ ಶಕ್ತಿ ಅಪರಿಮಿತ. ಅದು ಅರ್ಥಗರ್ಭಿತ. ಆ ರೋಚಕ ಪದಕ್ಕೆ ಜಾಧವ ಸಹೋದರರು ಮೌಲ್ಯ ಭರಿತ ಗೌರವ ತಂದುಕೊಟ್ಚಿದ್ದಾರೆ. ಭಾವನಾತ್ಮಕ ಬೇಸುಗೆ ಬೇಸೆಯುವಂಥ ಕಾರ್ಯ ಮಾಡಿದ್ದಾರೆ ಎಂದು ಬಣ್ಣಿಸಿದರು.

ರಾಜ್ಯ ಸರ್ಕಾರಿ ಕಾಲೇಜು ಶಿಕ್ಷಕರ ಸಂಘದ ಬೆಳಗಾವಿ ವಿಭಾಗದ ಅಧ್ಯಕ್ಷ ಪ್ರೊ.ಎಸ್.ಎಸ್.ರಾಜಮಾನ್ಯ, ಜಗತ್ತಿನಲ್ಲಿ ಎಲ್ಲ ಋಣವನ್ನು ತೀರಿಸಬಹುದು. ಆದರೆ, ತಂದೆ ತಾಯಿಯವರ ಋಣ ತೀರಿಸಲು ಸಾಧ್ಯವಾಗದು. ಜೀವಂತ ಇದ್ದಾಗ ಚೆನ್ನಾಗಿ ನೋಡಬೇಕು. ಕಿರಿಕಿರಿ ಕೊಡದೇ ಹಿರಿಯ ಜೀವಗಳ ಸೇವೆಗೆ ಹಿಂದೆ ಮುಂದೆ ನೋಡದೆ ಅಣಿಯಾಗಬೇಕು. ಆ ದಿಸೆಯಲ್ಲಿ ಈ ಪವಿತ್ರ ಕಾರ್ಯ ನಮಗೆಲ್ಲ ಅದರಣೀಯ, ಮಾದರಿಯವಾಗಿದೆ ಎಂದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಶೇಡಶ್ಯಾಳ, ತಾ.ಪಂ.ಉಪಾಧ್ಯಕ್ಷ ರಾಜು ಜಾಧವ, ಗ್ರಾ.ಪಂ.ಸದಸ್ಯರ ಮನೋಹರ ಜಾಧವ, ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕದ ಅಧ್ಯಕ್ಷ ಫಯಾಜ್‌ ಅಹ್ಮದ ಕಲಾದಗಿ, ಲಕ್ಷ್ಮಣ ನಾಯಕ, ದಲಿತ ಕ್ರಾಂತಿ ಸೇವಾ ಜಿಲ್ಲಾಧ್ಯಕ್ಷ ರಾಜಶೇಖರ ಕುದುರಿ, ಪ್ರೊ.ಎಸ್.ಕೆ.ಬಾಗಿ, ಪಿಡಿಒ ರಾಜೇಶ ಗಾಯಕವಾಡ, ಡಾ.ಬಾಬು ರಾಜೇಂದ್ರ ನಾಯಕ, ಡಾ.ಬಾಬು ಲಮಾಣಿ, ಕಲಾವಿದ ಸೋಮಶೇಖರ್ ರಾಠೋಡ, ಭಾರತ ಸೇವಾ ದಳದ ಜಿಲ್ಲಾಧ್ಯಕ್ಷ ನಾಗೇಶ ಡೋಣೂರ, ಮೋಹನ ಚವ್ಹಾಣ, ಡಾ.ಶ್ರೀಮಂತ ಚವ್ಹಾಣ, ಕಾರವಾರ ನೌಕಾನೆಲೆಯ ಧಮೇ೯ಂದ್ರ ಜಾಧವ, ಪ್ರಕಾಶ ಜಾಧವ, ರಾಮು ನಾಯಕ, ಮೇಘ ಜಾಧವ, ಗೋವಿಂದ ಕಾರಭಾರಿ, ನಾಮದೇವ ಚವ್ಹಾಣ, ಸಂತೋಷ ವಜ್ಜು ಜಾಧವ,ಗುಲಾಬಚಂದ ಜಾಧವ ಉಪಸ್ಥಿತರಿದ್ದರು.

ಕೃಷ್ಣಾ ನದಿ ನೀರಿನಿಂದ ದೇಗುಲ ಶುಚಿಗೊಳಿಸಿ ಧಾರ್ಮಿಕ ಪೂಜೆ, ಪುನಸ್ಕಾರ, ಹೋಮ ಹವನ ಕೈಂಕರ್ಯ ನಡೆದವು. ಹಲಿಗೆ ಮೇಳ, ಲಂಬಾಣಿ ಸಾಂಪ್ರದಾಯಿಕ ಭಜನಾ ಪದಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.