ADVERTISEMENT

ವಿಜಯಪುರ | ಗ್ಯಾರಂಟಿಯಿಂದ ಬಡವರಿಗೆ ಆರ್ಥಿಕ ಸಬಲತೆ: ಎಂ.ಬಿ.ಪಾಟೀಲ

ತಿಕೋಟಾದಲ್ಲಿ ಇಂದಿರಾ ಕ್ಯಾಂಟೀನ್, ಅಂಗನವಾಡಿ ಕೇಂದ್ರ, ರೈತ ಸಂಪರ್ಕ ಕೇಂದ್ರ ಗೋದಾಮು ಉದ್ಘಾಟನೆ: ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 15:41 IST
Last Updated 28 ಜೂನ್ 2025, 15:41 IST
ತಿಕೋಟಾ ಪಟ್ಟಣದಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಶನಿವಾರ ಉದ್ಘಾಟಿಸಿದರು
ತಿಕೋಟಾ ಪಟ್ಟಣದಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಶನಿವಾರ ಉದ್ಘಾಟಿಸಿದರು   

ವಿಜಯಪುರ: ‘ಸರ್ಕಾರ ಜಾರಿಗೆ ತಂದಿರುವ ಐದು ಪಂಚ ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಮಟ್ಟ ಹೆಚ್ಚಾಗುವುದರ ಜೊತೆಗೆ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು. 

ತಿಕೋಟಾ ಪಟ್ಟಣದಲ್ಲಿ ನಿರ್ಮಿಸಲಾದ ಅಂಗನವಾಡಿ, ರೈತ ಸಂಪರ್ಕ ಕೇಂದ್ರ ಗೋದಾಮು ಹಾಗೂ ತಿಕೋಟಾ ಬಸ್ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟಿನ್ ಅನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ತಿಕೋಟಾ ತಾಲ್ಲೂಕು ಕೇಂದ್ರವಾಗಿ ಹಾಗೂ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಹಿನ್ನೆಲೆಯಲ್ಲಿ ಜನರ ಬೇಡಿಕೆಗೆ ಸ್ಪಂದಿಸಿ, ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ’ ಎಂದರು.

ADVERTISEMENT

‘ಅತಿ ಎತ್ತರದ ಪ್ರದೇಶವಾದ ತಿಕೋಟಾ ಹೋಬಳಿಯ ಬರಡು ಭೂಮಿಗೆ ₹ 3,600 ಕೋಟಿ ವೆಚ್ಚ ಮಾಡಿ, ನಿರೋದಗಿಸಿ ಈ ಭಾಗವು ಹಸಿರಿನಿಂದ ಕಂಗೊಳಿಸಿ ಜನರು ಸಮೃದ್ಧಿಯಿಂದ ಜೀವನ ನಡೆಸುತ್ತಿದ್ದಾರೆ. ಈ ಭಾಗದ ಅಭಿವೃದ್ಧಿಗೆ ಕಟಿಬದ್ಧನಾಗಿ ಕಾರ್ಯ ನಿರ್ವಹಿಸಿದ ಆತ್ಮತೃಪ್ತಿ ಹಾಗೂ ಅಭಿಮಾನ ನನಗಿದೆ’ ಎಂದರು.

‘₹1.30 ಕೋಟಿ ವೆಚ್ಚದಲ್ಲಿ ತಿಕೋಟಾ ಬಸ್ ನಿಲ್ದಾಣದ ಆವರಣದಲ್ಲಿ ಬಸ್ ನಿಲ್ದಾಣದ ಆವರಣದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಲಾಗಿದೆ. ಕ್ಯಾಂಟಿನ್‍ನಲ್ಲಿ ಉತ್ತಮ ರುಚಿ-ಶುಚಿಯಾದ ಗುಣಮಟ್ಟದ ಆಹಾರ ದೊರೆಯಲಿದ್ದು, ಇದರಿಂದ ನಿತ್ಯ ಬೇರೆ-ಬೇರೆ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರು, ಸಾರ್ವಜನಿಕರಿಗೆ, ಕೂಲಿ ಕಾರ್ಮಿಕರಿಗೆ, ಬಡ ಜನರಿಗೆ ಅನುಕೂಲವಾಗಲಿದೆ’ ಎಂದರು.

‘ಈಗಾಗಲೇ ಸಿಎಸ್‌ಆರ್ ಅನುದಾನದಡಿ ಶಿಕ್ಷಣ ಹಾಗೂ ಕೆರೆ ಅಭಿವೃದ್ಧಿ ಪುನಶ್ಚೇತನ ಕಾರ್ಯ ಸಹ  ಮಾಡಲಾಗುತ್ತಿದೆ. ಯುವಕರಿಗೆ ಒಪನ್ ಜಿಮ್ ಸ್ಥಾಪಿಸಲು ಕ್ರಮವಹಿಸಲಾಗಿದೆ. ವಿವಿಧ ಕಂಪನಿಗಳಿಂದ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ 10 ಸಾವಿರ ಉದ್ಯೋಗ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಮಾತನಾಡಿ, ‘ರೈತರ ಉಪಯೋಗಕ್ಕಾಗಿ ರೈತ ಸಂಪರ್ಕ ಕೇಂದ್ರ ಹಾಗೂ ಗೋದಾಮು ಉದ್ಘಾಟಿಸಿದ್ದು, ಇದರಿಂದ ರೈತರಿಗೆ ಅನುಕೂಲ ದೊರೆಯಲಿದೆ. ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ ಮಹಿಳೆಯರ ಹಾಗೂ ಮಕ್ಕಳ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ವಿತರಣೆ, ಆರೋಗ್ಯ ತಪಾಸಣೆ ಸಹ ಕೈಗೊಳ್ಳಲಾಗುತ್ತಿದ್ದು, ಸರ್ಕಾರದ ಸೌಲಭ್ಯವನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕು’ ಎಂದು ಹೇಳಿದರು. 

ತಿಕೋಟಾ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಗುರು ದಾಸ್ಯಾಳ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದಿನ್ ಸೌದಾಗರ, ತಿಕೋಟಾ ತಹಶೀಲ್ದಾರ್‌ ಸುರೇಶ ಚವಲರ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಸವಂತರಾಯಗೌಡ ಬಿರಾದರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಘು ನಡುವಿನಮನಿ ಇದ್ದರು.

ಬಬಲೇಶ್ವರ ತಿಕೋಟಾ ವ್ಯಾಪ್ತಿಯಲ್ಲಿ ನೀರಾವರಿ ಯೋಜನೆಗಳು ರಸ್ತೆ ಅಭಿವೃದ್ಧಿ ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡಿ ಅಭಿವೃದ್ಧಿ ಕಾರ್ಯ ಕೈಗೊಂಡಿರುವ ತೃಪ್ತಿ ಇದೆ

-ಎಂ.ಬಿ.ಪಾಟೀಲ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.