ADVERTISEMENT

ಕರ್ಟನ್‌ಗೆ ಹತ್ತಿದ ಬೆಂಕಿ.... ಬಸ್ ಭಸ್ಮ ಮಾಡಿತು...

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 13:13 IST
Last Updated 15 ಸೆಪ್ಟೆಂಬರ್ 2019, 13:13 IST
 ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಗಾಯಾಳುಗಳು
 ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಗಾಯಾಳುಗಳು   

ಕೋರ: ನಾನು ಮಲಗಿದ್ದೆ ... ಬಸ್ ಮೂಲೆ ಸೀಟಿನಲ್ಲಿ ಕುಳಿತಿದ್ದ ಮಹಿಳೆಗೆ ಬೆಂಕಿ ಹೊತ್ತಿಕೊಂಡಿದ್ದನ್ನು ಕಂಡು ಕಿರುಚಾಡುತ್ತಿದ್ದಕ್ಕೆ ಎಚ್ಚರವಾಯಿತು... ಕಣ್ತೆರೆದು ನೋಡಿದರೆ ಕಿಟಕಿ ಕರ್ಟನ್ ಗಳಿಗೆ ಹರಡಿ ಕ್ಷಣ ಮಾತ್ರದಲ್ಲಿ ಬಸ್ ತುಂಬಾ ವ್ಯಾಪಿಸಿತು...

ಇದು ಶನಿವಾರ ಬೆಳಿಗ್ಗೆ ಮೂರು ಗಂಟೆ ಸುಮಾರು ಊರುಕೆರೆ ಹತ್ತಿರ ರಾಷ್ಟ್ರೀಯ ಹೆದ್ದಾರಿ–4ಲ್ಲಿ ವಿಜಯಪುರದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ರಾಯಲ್ ಟ್ರಾವೆಲ್ಸ್ ಬಸ್‌ಗೆ ಬೆಂಕಿ ಹೊತ್ತಿ ಉರಿದ ದುರಂತದಲ್ಲಿ ಪಾರಾದ ಪ್ರಯಾಣಿಕ ಹುಣಸಗಿಯ ಪ್ರಸಾದ್ ಅವರ ನುಡಿ.

ಗಾಬರಿಗೊಂಡ ನಾನು ಬಸ್ ಕಿಟಕಿಯಿಂದ ರಸ್ತೆಗೆ ಜಿಗಿದೆ. ಜಿಗಿದ ರಭಸಕ್ಕೆ ಕಾಲು ಮುರಿದಿದೆ ಎಂದು ನೋವು ತೋಡಿಕೊಂಡರು.

ADVERTISEMENT

ಘಟನೆ: ಬಸ್‌ನ ಹಿಂಬದಿಯ ಸೀಟಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದನ್ನು ಕಂಡು ನೀಲಮ್ಮ ಎಂಬುವರು ಕಿರುಚಾಡಿದ್ದಾರೆ. ನಿದ್ರೆ ಮಂಪರಿನಲ್ಲಿದ್ದ ಪ್ರಯಾಣಿಕರಲ್ಲಿ ಕೆಲವರು ಹಾಗೆ ಕಿಟಕಿಯಿಂದ ಹಾರಿದ್ದಾರೆ. ಇನ್ನು ಕೆಲವರು ದೌಡಾಯಿಸಿ ಇಳಿದು ಪ್ರಾಣ ಉಳಿಸಿಕೊಂಡಿದ್ದಾರೆ.

ಆರು ಮಂದಿಗೆ ಗಾಯವಾಗಿದ್ದು, ಜಿಲ್ಲಾ ಆಸ್ಪತ್ರೆ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಡಿವೈಎಸ್ಪಿ ತಿಪ್ಪೇಸ್ವಾಮಿ, ಸಿಪಿಐ ಮಧುಸೂದನ್, ಸಬ್‌ ಇನ್‌ ಸ್ಪೆಕ್ಟರ್ ಲಕ್ಷ್ಮಯ್ಯ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಅಗ್ನಿ ಶಾಮಕ ದಳದ ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ಚಾಲಕ, ಮಾಲೀಕನ ವಿರುದ್ಧ ಪ್ರಕರಣ ದಾಖಲು: ಘಟನೆಯಲ್ಲಿ ನೀಲಮ್ಮ ಎಂಬ ಮಹಿಳೆ ತೀವ್ರ ಗಾಯಗೊಂಡಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಬಸ್ ಮಾಲೀಕ ಮತ್ತು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆ ನಡೆದ ಬಳಿಕ ನಿಖರ ಕಾರಣ ಗೊತ್ತಾಗಲಿದೆ ಎಂದು ಡಿವೈಎಸ್ಪಿ ತಿಪ್ಪೇಸ್ವಾಮಿ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.