ADVERTISEMENT

ಮುಂಬೈನಿಂದ ಬಂದ ಐವರಿಗೆ ಕೋವಿಡ್‌; 59ಕ್ಕೆ ಏರಿಕೆ

ಕೋವಿಡ್ ಪೀಡಿತ ಗರ್ಭಿಣಿಗೆ ವೈದ್ಯರಿಂದ ಹೆರಿಗೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 18 ಮೇ 2020, 12:27 IST
Last Updated 18 ಮೇ 2020, 12:27 IST
ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವಿಜಯಪುರ ಡಿಪೋ ಎರಡರಲ್ಲಿ ಸಂಚಾರಕ್ಕೆ ಸಜ್ಜುಗೊಂಡಿರುವ ಬಸ್‌ಗಳು –ಪ್ರಜಾವಾಣಿ ಚಿತ್ರ
ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವಿಜಯಪುರ ಡಿಪೋ ಎರಡರಲ್ಲಿ ಸಂಚಾರಕ್ಕೆ ಸಜ್ಜುಗೊಂಡಿರುವ ಬಸ್‌ಗಳು –ಪ್ರಜಾವಾಣಿ ಚಿತ್ರ   

ವಿಜಯಪುರ: ಮಹಾರಾಷ್ಟ್ರದ ನವಿಮುಂಬೈಯಿಂದ ವಿಜಯಪುರಕ್ಕೆ ಆಗಮಿಸಿದ್ದ ಐವರಿಗೆ ಸೋಮವಾರ ಕೋವಿಡ್‌ 19 ದೃಢ‍ಪಟ್ಟಿದೆ.

19 ವರ್ಷದ ಗರ್ಭೀಣಿ ಸೇರಿದಂತೆ 10 ವರ್ಷ ಬಾಲಕಿ, 20 ಮತ್ತು 22 ವರ್ಷ ವಯಸ್ಸಿನ ಇಬ್ಬರು ಯುವಕರು ಮತ್ತು 45 ವರ್ಷ ವಯಸ್ಸಿನ ವ್ಯಕ್ತಿಗೆ ಸೋಂಕು ತಗಲಿದೆ.

ಖಾಸಗಿ ವಾಹನದಲ್ಲಿ ಮೇ 13ರಂದು ಮುಂಬೈನಿಂದ ನಗರಕ್ಕೆ ಆಗಮಿಸಿದ್ದ ಒಟ್ಟು 7 ಜನರನ್ನು ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಗಂಟಲುದ್ರವ ಪರೀಕ್ಷೆ ಫಲಿತಾಂಶ ಬರುವುದರೊಳಗಾಗಿ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಜಿಲ್ಲಾಸ್ಪತ್ರೆಯ ವೈದ್ಯರು ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ನಾರ್ಮಲ್‌ ಹೆರಿಗೆ ಮಾಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದ್ದಾರೆ.

ADVERTISEMENT

ಬಾಳಂತಿಗೆ ಕೋವಿಡ್‌ ದೃಢಪಟ್ಟಿದೆ. ಆದರೆ, ಜನಿಸಿದ ಮಗುವಿನ ವರದಿ ನೆಗೆಟಿವ್ ಬಂದಿದೆ ಎಂದು ಅವರು ಹೇಳಿದರು.

ಗರ್ಭಿಣಿಗೆ ಹೆರಿಗೆ ಮಾಡಿಸುವ ಸಂದರ್ಭದಲ್ಲಿ ತಜ್ಞವೈದ್ಯರು ಮತ್ತು ಇತರೆ ಸಿಬ್ಬಂದಿ ಪಿಪಿಇ ಕಿಟ್ ಮತ್ತು ಎನ್ 95 ಮಾಸ್ಕ್ ಸೇರಿದಂತೆ ಅವಶ್ಯಕ ಮುನ್ನೆಚ್ಚರಿಕೆ ಕೈಗೊಂಡಿದ್ದರು ಎಂದು ತಿಳಿಸಿದರು.

59ಕ್ಕೆ ಏರಿಕೆ:

ಜಿಲ್ಲೆಯಲ್ಲಿ ಇದುವರೆಗೆ 59 ಜನರಿಗೆ ಕೋವಿಡ್‌ ಸೋಂಕು ತಗಲಿದ್ದು, ಇದುವರೆಗೆ 37 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಮೂವರು ಸಾವಿಗೀಡಾಗಿದ್ದಾರೆ.

ಕಾರ್ಮಿಕರ ಆಗಮನ:

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚಿಪ್ಲೂನ್‍ನಿಂದ ಶ್ರಮಿಕ್‌ ಏಕ್ಸ್‌ಪ್ರೆಸ್‌ ಮೂಲಕ ಜಿಲ್ಲೆಗೆ 820 ವಲಸೆ ಕಾರ್ಮಿಕರು ಜಿಲ್ಲೆಗೆ ಆಗಮಿಸಿದರು.

ಸೋಮವಾರ ನಗರಕ್ಕೆ ಬಂದ ರೈಲಿನಲ್ಲಿ ಕಲಬುರ್ಗಿಯ 120 ಮತ್ತು ವಿವಿಧ ಜಿಲ್ಲೆಗಳ 50 ಕಾರ್ಮಿಕರು ಸೇರಿದ್ದಾರೆ. ಅವರೆಲ್ಲರನ್ನೂ ಕ್ವಾರಂಟೈನ್‍ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇದುವರೆಗೆ ಜಿಲ್ಲೆಗೆ 12,500ಕ್ಕೂ ಹೆಚ್ಚು ಜನರು ವಿವಿಧ ರಾಜ್ಯಗಳಿಂದ ಆಗಮಿಸಿದ್ದು, ಅವರೆಲ್ಲರನ್ನು ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್ ಮಾಡಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಇದ್ದರು.

300 ಬಸ್‌ ಸಂಚಾರಕ್ಕೆ ಸಿದ್ಧತೆ

ವಿಜಯಪುರ: ಜಿಲ್ಲೆಯಲ್ಲಿ ಸುಮಾರು 300 ಬಸ್‌ ಸಂಚಾರಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌.ಜಿ.ಗಂಗಾಧರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರದಿಂದ ಇನ್ನೂ ಅಧಿಕೃತ ಆದೇಶ ಬಂದಿಲ್ಲ. ಬಂದ ತಕ್ಷಣ ಸಂಚಾರ ಆರಂಭಿಸಲಾಗುವುದು ಎಂದು ಹೇಳಿದರು.

ಪ್ರಥಮ ಹಂತದಲ್ಲಿ ಜಿಲ್ಲಾ ಕೇಂದ್ರದಿಂದ ತಾಲ್ಲೂಕು ಕೇಂದ್ರಗಳಿಗೆ ಹಾಗೂ ತಾಲ್ಲೂಕು ಕೇಂದ್ರಗಳಿಂದ ಪ್ರಮುಖ ಹೋಬಳಿ ಕೇಂದ್ರಗಳಿಗೆ ಬಸ್‌ ಸಂಚಾರ ಆರಂಭಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.