ಚಡಚಣ: ತಾಲ್ಲೂಕಿನಾದ್ಯಂತ ಕಳೆದೊಂದು ವಾರದಿಂದ ನಿತ್ಯ ಸರಿ ಸುಮಾರು 55 ಮಿ.ಮೀ ನಷ್ಟು ಸುರಿದಿದೆ. ನಿರಂತರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಹೊಲ,ಗದ್ದೆಗಳೆಲ್ಲ ನೀರು ತುಂಬಿ ಕೆರೆಗಳಂತಾಗಿದ್ದರೆ, ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ.
ತಾಲ್ಲೂಕಿನ ಕನಕನಾಳ ಹಳ್ಳಕ್ಕೆ ನಿರ್ಮಿಸಲಾದ ಸೇತುವೆ ಅಪಾರ ಪ್ರಮಾಣದ ನೀರು ಹರಿದಿದು ಬಂದ ಪರಿಣಾಮ ಕುಸಿದು ಬಿದ್ದು, ಮಹಾರಾಷ್ಟ್ರ ರಾಜ್ಯಕ್ಕೆ ಸಂಪರ್ಕ ಕಡಿತಗೊಂಡಿದೆ. ಬಂದಿದ್ದು ಸಂಚಾರ ಬಂದ್ ಆಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮನೆಗಳಿಗೆ ಹಾನಿ:
ವಿಪರೀತ ಮಳೆಗೆ ಹಲವಾರು ಗ್ರಾಮಗಳಲ್ಲಿ ನೀರು ಆವರಿಸಿದ್ದು, ಮನೆಗಳು ಕುಸಿಯುತ್ತಿವೆ. ಜನರು ದೇವಸ್ಥಾನ, ಶಾಲೆಗಳಲ್ಲಿ ಆಶ್ರಯ ಪಡುವಂತಾಗಿದೆ.
ಹೊಲ ಗದ್ದೆಗಳಲ್ಲಿ ವಾಸವಾಗಿರುವ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹಳ್ಳಕೊಳ್ಳಗಳು ಬೋರ್ಗರೆಯುತ್ತಿದ್ದು, ಹಲವಾರು ಗ್ರಾಮಗಳ ಸಂಪರ್ಕಗಳು ಕಡಿತಗೊಂಡಿವೆ.
ಭೀಮಾ ಪ್ರವಾಹ:
ಹಳ್ಳಕೊಳ್ಳಗಳಿಂದ ಹರಿದ ನೀರು ಭೀಮಾ ನದಿ ತುಂಬಿ ಹರಿಯುತ್ತಿತ್ತು. ಮತ್ತೆ ಈ ನದಿಗೆ ಈಚೆಗೆ ಉಜನಿ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್ ನೀರು ಬಿಟ್ಟಿರುವುದರಿಂದ ನದಿ ಉಕ್ಕಿ ಹರಿಯುತ್ತಿದೆ. ಈ ನದಿಗೆ ಅಡ್ಡಲಾಗಿ ನಿರ್ಮಿಸಲಾದ 8 ಬಾಂದಾರಗಳು ಜಲ ಸಮಾಧಿಯಾಗಿವೆ. ಇದರಿಂದಾಗಿ ಮಹಾರಾಷ್ಟ್ರ ಸಂಪರ್ಕ ಕಡಿತಗೊಂಡಿವೆ.
ತಾಲ್ಲೂಕು ಆಡಳಿತ ಸೂಚನೆ:
ನದಿ ತೀರದಲ್ಲಿ ವಾಸವಾಗಿರುವ ಜನರು ತಮ್ಮ ಸಾಮಾನು ಸರಂಜಾಮು ಹಾಗೂ ದನ ಕರುಗಳೊಂದಿಗೆ ಸುರಕ್ಷಿತ ತಾಣಗಳಿಗೆ ತೆರಳುವಂತೆ ಎಚ್ಚರಿಕೆ ನೀಡಿ, ಪ್ರತಿ ಗ್ರಾಮಕ್ಕೂ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಹಶೀಲ್ದಾರ್ ಸಂಜಯ ಇಂಗಳೆ ತಿಳಿಸಿದ್ದಾರೆ.
ಶಾಸಕರ ಭೇಟಿ:
ಕನಕನಾಳ ಹಳ್ಳದ ನೀರನ್ನು ಶಾಸಕ ವಿಠಲ ಕಟಕದೊಂಡ, ತಹಶೀಲ್ದಾರ್ ಸಂಜೀವ ಇಂಗಳೆ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಶುಕ್ರವಾರ ಆಗಮಿಸಿ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿಗಳ ಭೇಟಿ:
ಜಿಲ್ಲಾಧಿಕಾರಿ ಕೆ.ಆನಂದ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿಷಿ ಆನಂದ್, ತಾಲ್ಲೂಕು ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ, ತಹಶೀಲ್ದಾರ್ ಸಂಜಯ ಇಂಗಳೆ, ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಸಂಜಯ ಖಡಗೇಕರ, ಕೃಷಿ ನಿರ್ದೇಶಕ ರೇವೂರ, ಶುಕ್ರವಾರ ಮಳೆಯಿಂದ ಹಾನಿಗೊಳಗಾದ ತಾಲ್ಲೂಕಿನ ನಂದರಗಿ, ಶಿಗಣಾಪೂರ, ಧುಮಕನಾಳ, ದೇವರ ನಿಂಬರಗಿ ಹಾಗೂ ಜಿಗಜೇವಣಿ ಗ್ರಾಮಗಳ ಹೊಲ ಗದ್ದೆಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ತೊಗರೆ, ಹತ್ತಿ, ಮೆಕ್ಕೆಜೋಳ, ಉಳ್ಳಾಗಡ್ಡಿ, ದ್ರಾಕ್ಷಿ ಉದ್ದು ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳ ಪರಿಶೀಲನೆ ನಡೆಸಿದರು.
ಮಳೆಯಿಂದ ಅಪಾರ ಪ್ರಮಾಣದಲ್ಲಿ ನಷ್ಟ ಸಂಭಿಸಿದೆ ಜಿಲ್ಲಾಡಳಿತ ಕೂಡಲೇ ಪರಿಶೀಲನೆ ನಡೆಸಿ ತಕ್ಷಣ ಪರಿಹಾರ ನೀಡಬೇಕುಗುರುನಾಥ ಬಗಲಿ ಅಧ್ಯಕ್ಷ ಭಾರತೀಯ ಕಿಸಾನ ಸಂಘ ಉತ್ತರ ಪ್ರಾಂತ್ಯ
ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಜಂಟಿ ಸಮೀಕ್ಷೆ ನಡೆಸಿಹಾನಿಗೊಳಗಾದ ರೈತರ ಬೆಳೆಗೆ ಸೂಕ್ತ ಪರಿಹಾರ ಒದಗಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದುಕೆ.ಆನಂದ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.