ವಿಜಯಪುರ: ರಾಜ್ಯದಲ್ಲಿ ಅತಿವೃಷ್ಟಿಯಿಂದ ಲಕ್ಷಾಂತರ ಹೆಕ್ಟೇರ್ ಬೆಳೆ ನಾಶ, ಸಾವಿರಾರು ಮನೆಗಳು ಹಾನಿಯಾಗಿ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರೂ ಸೂಕ್ತ ಪರಿಹಾರ ನೀಡದೇ ಕೇಂದ್ರ ಸರ್ಕಾರ ಕಣ್ಣೆತ್ತಿ ನೋಡಿಲ್ಲ, ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಇಂಡಿ ಶಾಸಕ ಯಶವಂತ ರಾಯಗೌಡ ಪಾಟೀಲ ಆರೋಪಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇಲ್ಲ ಎಂಬ ಕಾರಣಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಸಿಎಂ ವೈಮಾನಿಕ ಸಮೀಕ್ಷೆಯಿಂದ ಪ್ರವಾಹ ಹಾನಿ ತಿಳಿಯದು, ರೈತರ ಹೊಲಕ್ಕೆ ಭೇಟಿ ನೀಡಬೇಕಿತ್ತು ಎಂದು ಟೀಕಿಸಿದ್ದಾರೆ. ಆದರೆ, ಅವರ ನೇತೃತ್ವದ ಬಿಜೆಪಿ ತಂಡ ಜಿಲ್ಲೆಗೆ ಕಾಟಾಚಾರಕ್ಕೆ ಎಂಬಂತೆ ಭೇಟಿ ನೀಡಿ ಹೋಗಿದೆ. ತೀವ್ರ ಮಳೆಯಿಂದ ತತ್ತರಿಸಿರುವ ಚಡಚಣಕ್ಕೆ ಭೇಟಿ ನೀಡಿಲ್ಲ, ರೈತರ ಸಂಕಷ್ಟವನ್ನು ಆಲಿಸದೇ ಹಿಂತಿರುಗಿದೆ ಎಂದು ಆರೋಪಿಸಿದರು.
ಕೇವಲ ರಾಜ್ಯ ಸರ್ಕಾರವನ್ನು ಟೀಕಿಸಿದರೆ ಸಾಲದು, ಕೇಂದ್ರದಿಂದ ಸೂಕ್ತ ಪರಿಹಾರ ಒದಗಿಸಲು ವಿರೋಧ ಪಕ್ಷದ ಮುಖಂಡರು ಆದ್ಯತೆ ನೀಡಬೇಕು. ಎನ್‌ಡಿಆರ್ ಎಫ್ ಪರಿಹಾರ ಪರಿಷ್ಕರಣೆಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಉಪ ನದಿಗಳ ಮೇಲೂ ನಿಗಾ ಅಗತ್ಯ:
ಕೃಷ್ಣಾ, ಕಾವೇರಿ ನದಿಗಳಲ್ಲಿ ತಲೆದೋರುವ ನೆರೆ ಸಮಸ್ಯೆಗೆ ಆದ್ಯತೆ ನೀಡುವಂತೆ ಉಪ ನದಿಗಳಾದ ಭೀಮಾ, ಸೀನಾ, ಡೋಣಿ ಮತ್ತಿತರರ ಹಳ್ಳ,ಕೊಳ್ಳಗಳಿಂದ ರೈತರಿಗೆ ಆಗುವ ಸಮಸ್ಯೆಗಳ ಬಗ್ಗೆಯೂ ಕೇಂದ್ರ, ರಾಜ್ಯ ಸರ್ಕಾರಗಳು ನಿಗಾ ವಹಿಸಬೇಕು. ನಿರ್ಲಕ್ಷ್ಯ ಮಾಡಬಾರದು ಎಂದು ಯಶವಂತರಾಯಗೌಡ ಸಲಹೆ ನೀಡಿದರು.
ಭೀಮಾ, ಸೀನಾ ನದಿಯಲ್ಲಿ ಅಕ್ರಮವಾಗಿ ಮಹಾರಾಷ್ಟ್ರ ನೀರು ಸಂಗ್ರಹಿಸುತ್ತಿದೆ. ಹೆಚ್ಚುವರಿ ನೀರನ್ನು ಏಕಾಏಕಿ ನದಿಗೆ ಹರಿಸುವುದರಿಂದ ಇಂಡಿ, ಆಲಮೇಲ ಸೇರಿದಂತೆ ಕಲಬುರ್ಗಿ, ಯಾದಗಿರಿ ಜಿಲ್ಲೆಗಳಿಗೆ ಸಮಸ್ಯೆಯಾಗುತ್ತಿದೆ. ಈ ವಿಷಯವಾಗಿ ಮಹಾರಾಷ್ಟ್ರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದರು.
ಕರ್ನಾಟಕ, ಮಹಾರಾಷ್ಟ್ರ ನಡುವೆ ನದಿನೀರು ನಿರ್ವಹಣೆ ಬಗ್ಗೆ ಒಡಂಬಡಿಕೆ ಏನಾಗಿದೆ, ಮಹಾರಾಷ್ಟ್ರ ಎಷ್ಟು ಉಲ್ಲಂಘನೆ ಮಾಡಿದೆ ಎಂಬುದನ್ನು ಕೇಂದ್ರ ಸರ್ಕಾರ ಪರಿಶೀಲಿಸಿ, ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ರೈತರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಆದರೆ, ಅತಿವೃಷ್ಟಿಯಿಂದ ರೈತರ ಬದುಕು ದುಸ್ತರವಾಗಿದೆ. ಹಿಂಗಾರು, ಮುಂಗಾರು ಬೆಳೆಗಳು ಸಂಪೂರ್ಣ ಹಾನಿಯಾಗಿದೆ. ಸರ್ಕಾರ ಆದ್ಯತೆ ಮೇರೆಗೆ ಸರ್ವೆ ಮಾಡಿಸಿ, ಹೆಚ್ಚಿನ ಪರಿಹಾರವನ್ನು ತುರ್ತಾಗಿ ನೀಡಬೇಕಿದೆ ಎಂದರು.
ಅತಿವೃಷ್ಟಿ ನೆರೆ ಬರ ನಿರ್ವಹಣೆಗೆ ಪ್ರತ್ಯೇಕ ಇಲಾಖೆಯನ್ನು ರಚಿಸಬೇಕು. ಅಂತರರಾಜ್ಯ ನದಿ ನೀರು ನಿರ್ವಹಣೆ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡಬೇಕುಯಶವಂತ ರಾಯಗೌಡ ಪಾಟೀಲಶಾಸಕಇಂಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.