ADVERTISEMENT

ಶೀಘ್ರ ಅಸಂಘಟಿತ ಕಾರ್ಮಿಕರ ಮಂಡಳಿ ರಚನೆ: ಸಚಿವ ಶಿವರಾಮ ಹೆಬ್ಬಾರ

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 13:40 IST
Last Updated 31 ಜುಲೈ 2020, 13:40 IST
ವಿಜಯಪುರದಲ್ಲಿ ಶುಕ್ರವಾರ ಕಾರ್ಮಿಕ ಇಲಾಖೆ ಮತ್ತು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲಿ  ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರು ಕಾರ್ಮಿಕ ಕಾರ್ಡ್ ವಿತರಿಸಿದರು
ವಿಜಯಪುರದಲ್ಲಿ ಶುಕ್ರವಾರ ಕಾರ್ಮಿಕ ಇಲಾಖೆ ಮತ್ತು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲಿ  ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರು ಕಾರ್ಮಿಕ ಕಾರ್ಡ್ ವಿತರಿಸಿದರು   

ವಿಜಯಪುರ: ಕೇರಳ, ತಮಿಳುನಾಡು ಮಾದರಿಯಲ್ಲಿ ಅಸಂಘಟಿತ ಕಾರ್ಮಿಕರಿಗಾಗಿ ನೂತನ ಮಂಡಳಿ ರಚನೆ ಮಾಡಲಾಗುವುದು, ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ನೂತನ ಬಿಲ್ ಮಂಡನೆಗೆ ಸಿದ್ದತೆ ನಡೆದಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕಾರ್ಮಿಕ ಇಲಾಖೆ ಮತ್ತು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್‌ ಸಂಕಷ್ಟದ ಕಾಲದಲ್ಲಿಕಾರ್ಖಾನೆಗಳು ಬದುಕಬೇಕು ಮತ್ತು ಕಾರ್ಮಿಕರಿಗೆ ಉದ್ಯೋಗದ ರಕ್ಷಣೆಯೂ ದೊರೆಯಬೇಕು. ಈ ನಿಟ್ಟಿನಲ್ಲಿಕಾರ್ಖಾನೆಗಳ ಮಾಲೀಕರು ಮತ್ತು ಕಾರ್ಮಿಕರು ಪರಸ್ಪರ ಸೌಹಾರ್ದವಾಗಿ ಇರುವುದರ ಜೊತೆಗೆ ಅಭಿವೃದ್ಧಿಯಲ್ಲಿ ಸರ್ಕಾರಕ್ಕೆ ನೆರವಾಗುವಂತೆ ಮನವಿ ಮಾಡಿದರು.

ADVERTISEMENT

ಕಾರ್ಮಿಕ ಇಲಾಖೆಯಿಂದ ನೀಡುವ ಕಾರ್ಮಿಕ ಕಾರ್ಡ್ ಅನ್ನು ಮೂರು ವರ್ಷಕ್ಕೊಮ್ಮೆ ನವೀಕರಣಗೊಳಿಸುವುದರ ಜೊತೆಗೆ ಅರ್ಹರಿಗೆ ಈ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಕಾರ್ಮಿಕ ಅಧಿಕಾರಿಗಳಿಗೆ ಸೂಚಿಸಿದರು.

ಲಾಕ್‍ಡೌನ್‌ನಿಂದ ಸಂಕಷ್ಟಕ್ಕಿಡಾದ ಕ್ಷೌರಿಕರು ಮತ್ತು ಅಗಸರು ಸರ್ಕಾರದ ಪರಿಹಾರ ಧನ ಸೌಲಭ್ಯ ಪಡಿಯುವ ಅವಧಿಯನ್ನುಆಗಸ್ಟ್‌ 15ರ ವರೆಗೆ ವಿಸ್ತರಿಸಲಾಗಿದೆ ಎಂದರು.

ವಿಜಯಪುರ ಜಿಲ್ಲೆಯಲ್ಲಿ 4311 ಕ್ಷೌರಿಕರು ಮತ್ತು ಅಗಸರಿಗೆ ತಲಾ ₹ 5 ಸಾವಿರ ಪರಿಹಾರಧನ ಶೇ 99 ರಷ್ಟು ವಿತರಣೆಗೆ ಜಿಲ್ಲಾಡಳಿತ ಕೈಗೊಂಡ ಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಸಕ್ಕರೆ ಉದ್ಯಮ ಸಂಕಷ್ಟದಲ್ಲಿದ್ದು ಸರ್ಕಾರ ಕೈಗಾರಿಕೆ ಮತ್ತು ಕಾರ್ಮಿಕರ ರಕ್ಷಣೆಗೆ ಕ್ರಮಕೈಗೊಳ್ಳಬೇಕು. ಕಾರ್ಮಿಕ ಇಲಾಖೆ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಬೇಕು. ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗಾಗಿ ಶಾಶ್ವತ ಪರಿಹಾರೋಪಾಯ ಕೈಗೊಳ್ಳಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಔದ್ರಾಮ್, ಬೆಳಗಾವಿ ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಸಿಂದಿಹಟ್ಟಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಸಿದ್ದರಾಮ ಮಾರಿಹಾಳ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಇಎಸ್ಐಗೆ ಹೆಬ್ಬಾರ್‌ ಭೇಟಿ

ವಿಜಯಪುರನಗರದ ಕಾರ್ಮಿಕ ರಾಜ್ಯ ವಿಮಾ ಚಿಕಿತ್ಸಾಲಯಕ್ಕೆ (ಇಎಸ್ಐ) ಸಚಿವ ಶಿವರಾಮ ಹೆಬ್ಬಾರ ಅವರು ಶುಕ್ರವಾರ ಭೇಟಿ ನೀಡಿ ಚಿಕಿತ್ಸಾ ವ್ಯವಸ್ಥೆ ಮತ್ತು ಔಷಧಗಳ ಬಗ್ಗೆ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ವೈದ್ಯರ ಕೊರತೆ ನೀಗಿಸಲು 169 ಎಂ.ಬಿ.ಬಿ.ಎಸ್ ವೈದ್ಯರನ್ನು ಲೋಕಸೇವಾ ಆಯೋಗದ ಮೂಲಕ ನೇಮಿಸಿಕೊಳ್ಳಲಾಗಿದೆ ಎಂದರು.

ಬಡ ಜನರ ಅನುಕೂಲಕ್ಕಾಗಿ ₹ 400 ಕೋಟಿ ಮೊತ್ತದ ಔಷಧವನ್ನು ಇ.ಎಸ್.ಐ ಆಸ್ಪತ್ರೆಗಳಿಗೆ ಒದಗಿಸಲಾಗಿದೆ. ನರ್ಸ್ ಮತ್ತು ಡಿ ದರ್ಜೆ ನೌಕರರ 290 ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದೆ ಎಂದು ತಿಳಿಸಿದರು.

ನಗರದ ಇಎಸ್ಐ ಆಸ್ಪತ್ರೆ ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ಹಿರಿಯ ಅಧಿಕಾರಿಗಳು ಸೂಕ್ತ ಗಮನ ನೀಡಬೇಕು. ಬಡವರಿಗೆ ಚಿಕಿತ್ಸಾ ಸೌಲಭ್ಯ ಸಮರ್ಪಕವಾಗಿ ದೊರಕಿಸಬೇಕು. ಆಸ್ಪತ್ರೆಯ ಮಾಹಿತಿ ಒಳಗೊಂಡ ಫಲಕವನ್ನು ಸಾರ್ವಜನಿಕರ ಗಮನಕ್ಕಾಗಿ ಆಸ್ಪತ್ರೆ ಹೊರಗೆ ಹಾಗೂ ಮುಖ್ಯ ರಸ್ತೆ ಪಕ್ಕದಲ್ಲಿ ಅಳವಡಿಸುವಂತೆ ಸೂಚಿಸಿದರು.

ಮುಖಂಡರಾದ ವಿಜುಗೌಡ ಪಾಟೀಲ, ಆಸ್ಪತ್ರೆಯ ಆಡಳಿತ ವಿಮಾ ವೈದ್ಯಾಧಿಕಾರಿ ಡಾ. ಜ್ಯೋತಿ ಶಿರಸಗಿ, ವಿಮಾ ವೈದ್ಯಾಧಿಕಾರಿ ಡಾ.ಪಾಂಡುರಂಗ ಚಹ್ವಾಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.