
ವಿಜಯಪುರ: ನಯನಗಳಿಗೆ ತಂಪು, ಕರಣಗಳಿಗೆ ಇಂಪು ನೀಡುವ ಜಲ ವೈಭವ... ಈ ಸೌಂದರ್ಯಕ್ಕೆ ಇಂಬು ನೀಡುವ ತೆಂಗಿನ ವೃಕ್ಷ ರಾಶಿ...ವಿದೇಶಿ ಪ್ರವಾಸಿ ತಾಣಗಳನ್ನು ನೆನಪಿಸುವ ವಾಕಿಂಗ್ ಟ್ರ‍್ಯಾಕ್...ಜೊತೆಗೆ ಬೆಳಕಿನ ಸ್ಪರ್ಶ ನೀಡುವ ಕಂದೀಲು ಮಾದರಿಯ ವಿದ್ಯುತ್ ದೀಪಗಳ ತೋರಣ...
ಇದೇನೂ ಸ್ವರ್ಗದ ಸೌಂದರ್ಯ ವಿವರಣೆಯೋ, ವಿಶೇಷಣವೋ ಎಂದು ನೀವೊಂದುಕೊಂಡರೆ ಅದು ತಪ್ಪು....!
ಈಗ ಕಸದಿಂದಲೇ ಆವರಿಸಿದ ಗಗನ್ ಮಹಲ್ ಕಂದಕದಲ್ಲಿ ಬೋಟಿಂಗ್ ವ್ಯವಸ್ಥೆ ನಿರ್ಮಾಣಕ್ಕಾಗಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆ ನೀಡಿರುವ ನೀಲ ನಕ್ಷೆ.
ಇಲಾಖೆ ರೂಪಿಸಿರುವ ನೀಲನಕ್ಷೆ ನೋಡಿದಾಗ ಒಂದು ಕ್ಷಣ ಪ್ರತಿಯೊಬ್ಬರು ಮಂತ್ರ ಮುಗ್ಧವಾಗುವುದಂತೂ ಸತ್ಯ. ಆದರೆ, ಇದು ಸಾಕಾರ ರೂಪಕ್ಕೆ ಬರಲು ಒಂದೇ ಮೆಟ್ಟಿಲು ಬಾಕಿ ಇದೆ. ಮೂಲ ಸೌಕರ್ಯಕ್ಕೆ ಅನುದಾನ ಬಿಡುಗಡೆಯಾದರೆ ಕೆಲವೇ ದಿನಗಳಲ್ಲಿ ಈ ಸ್ವರ್ಗ ರೂಪಕ ವಿಜಯಪುರದಲ್ಲಿ ಮೈತಳೆಯುವುದರಲ್ಲಿ ಎರಡು ಮಾತಿಲ್ಲ.
ದೋಣಿ ವಿಹಾರಕ್ಕೂ ಮುನ್ನಾ:
ಗಗನ್ ಮಹಲ್ ಕೋಟೆಗೊಡೆಗೆ ಹೊಂದಿಕೊಂಡಿರುವ ಕೊಳದಲ್ಲಿ ದೋಣಿ ವಿಹಾರ ಹಾಗೂ ಅದಕ್ಕೆ ಪೂರಕವಾಗಿ ಉದ್ಯಾನ ಪ್ರಗತಿಯ ಪ್ರಸ್ತಾವನೆ ಇಂದು ನಿನ್ನೆಯದಲ್ಲ, ಅನೇಕ ವರ್ಷಗಳಿಂದ ಪ್ರಯತ್ನ ನಡೆಯುತ್ತಲೇ ಇದೆ.
ಆದರೆ, ಈ ವಿಷಯವನ್ನು ಈ ಬಾರಿ ಪ್ರವಾಸೋದ್ಯಮ ಇಲಾಖೆ ಮಾತ್ರ ಗಂಭೀರವಾಗಿ ಪರಿಗಣಿಸಿ ಗಗನ್ ಮಹಲ್ ಕಂದಕಕ್ಕೆ ದೋಣಿ ವಿಹಾರ ಆರಂಭಿಸುವಂತೆ ಪುರಾತತ್ವ ಸರ್ವೇಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು.
ಆಗ ಪುರಾತತ್ವ ಸರ್ವೇಕ್ಷಣ ಇಲಾಖೆಯ ಪ್ರಧಾನ ನಿರ್ದೇಶಕ (ಡೈರೆಕ್ಟರ್ ಜನರಲ್) ಯೋಜನೆ ಕುರಿತು ಸಂಪೂರ್ಣ ಮಾಹಿತಿ ನೀಡಲು ಸಭೆಯೊಂದನ್ನು ಕರೆದು, ಪ್ರವಾಸೋದ್ಯಮ ಇಲಾಖೆಯ ಡಿಟಿಸಿ ಅನೀಲಕುಮಾರ ಹಾಗೂ ವಾಸ್ತುಶಿಲ್ಪ ತಜ್ಞ ಸತೀಶ ಅವರು ಯಾವ ರೀತಿ ಈ ಭಾಗವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂಬ ಬಗ್ಗೆ ₹1.5 ಕೋಟಿ ಮೊತ್ತದ ಕಾಮಗಾರಿಯ ಇಂಚಿಂಚು ವಿವರವನ್ನು ಒದಗಿಸಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಅರವಿಂದ ಹೂಗಾರ ತಿಳಿಸಿದರು.
ಪ್ರಾಜೆಕ್ಟ್ ಕುರಿತು ಮಾಹಿತಿ ಪಡೆದ ಪುರಾತತ್ವ ಇಲಾಖೆ ಪರೋಕ್ಷ ಅಸ್ತು ಎಂದು ಷರತ್ತೊಂದನ್ನು ವಿಧಿಸಿತ್ತು. ಪೂರಕವಾಗಿ ಸೌಲಭ್ಯ ಕಲ್ಪಿಸಿದ ನಂತರ ದೋಣಿ ವಿಹಾರಕ್ಕೆ ಅನುಮತಿ ನೀಡುವ ಬಗ್ಗೆ ಕಳೆದ ಜುಲೈ 18 ರಂದು ಈ ಯೋಜನೆ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ ಎಂದು ಹೇಳಿದರು.
ಇನ್ನು ಪುರಾತತ್ವ ಇಲಾಖೆ ಒಪ್ಪಿಗೆ ಸೂಚಿಸಿದ ಬಳಿಕ ಪುರಾತತ್ವ ಸರ್ವೇಕ್ಷಣಾ ಇಲಾಖೆ (ದಕ್ಷಿಣ ವಲಯ)ದ ಪ್ರಾದೇಶಿಕ ನಿರ್ದೇಶಕರು ಜಿಲ್ಲಾಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆಯೂ ನಡೆಸಿಯಾಗಿದೆ, ಈಗ ಸರ್ಕಾರಿ ಹಂತದಲ್ಲಿ ಈ ಅಭಿವೃದ್ಧಿ ಕಾಮಗಾರಿಗೆ ₹1.5 ಕೋಟಿ ಬಿಡುಗಡೆಯಾಗಬೇಕಿದ್ದು, ಈ ಅನುದಾನ ಬಿಡುಗಡೆಯಾದರೆ ಗಗನ್ ಮಹಲ್ ಆವರಣದಲ್ಲಿ ದೋಣಿ ವಿಹಾರ ಆರಂಭಗೊಳ್ಳಲಿದೆ ಎಂದರು.
ಕೇವಲ ದೋಣಿ ವಿಹಾರಕ್ಕಷ್ಟೇ ಪ್ರವಾಸೋದ್ಯಮ ಇಲಾಖೆ ಈ ಪ್ರಾಜೆಕ್ಟ್ ಸೀಮಿತಗೊಳಿಸಿಲ್ಲ, ಕೋಟೆಗೋಡೆಯಲ್ಲಿ ಲೇಸರ್ ಶೋ ವೈಭವನ್ನು ಅರಳಿಸಿ ಅದಕ್ಕೆ ಧ್ವನಿ-ಬೆಳಕಿನ ವ್ಯವಸ್ಥೆ ಕಲ್ಪಿಸುವ ವಿಶೇಷ ಯೋಜನೆಯೂ ಅದರಲ್ಲಿ ಸೇರ್ಪಡೆಯಾಗಿದೆ ಎಂದು ಹೇಳಿದರು.
ಗಗನ್ ಮಹಲ್‌ನಲ್ಲಿ ದೋಣಿ ವಿಹಾರಕ್ಕೆ ನಿಯಮಾವಳಿಗಳನ್ನು ವಿಧಿಸಿ ಪುರಾತತ್ವ ಇಲಾಖೆ ಒಪ್ಪಿಗೆ ನೀಡಿದೆ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಡಿಪಿಆರ್ ರಚಿಸಿದ್ದು ₹1.5 ಕೋಟಿ ಮೊತ್ತದ ಕಾಮಗಾರಿ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ
-ಅರವಿಂದ ಹೂಗಾರ ಉಪನಿರ್ದೇಶಕ ಪ್ರವಾಸೋದ್ಯಮ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.