ADVERTISEMENT

ಹೆಂಚಿಗಾಗಿ ಹಂಬಲಿಸಿವೆ ಸರ್ಕಾರಿ ಶಾಲೆ..!

​ಪ್ರಜಾವಾಣಿ ವಾರ್ತೆ
Published 8 ಜುಲೈ 2018, 17:49 IST
Last Updated 8 ಜುಲೈ 2018, 17:49 IST
ದೇವರಹಿಪ್ಪರಗಿ ತಾಲ್ಲೂಕಿನ ಹರನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲ್ಛಾವಣೆಯಿಲ್ಲದೆ, ನಿರ್ಲಕ್ಷ್ಯಕ್ಕೊಳಗಾಗಿದೆ
ದೇವರಹಿಪ್ಪರಗಿ ತಾಲ್ಲೂಕಿನ ಹರನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲ್ಛಾವಣೆಯಿಲ್ಲದೆ, ನಿರ್ಲಕ್ಷ್ಯಕ್ಕೊಳಗಾಗಿದೆ   

ದೇವರ ಹಿಪ್ಪರಗಿ: ದಶಕಗಳ ಅವಧಿ ಮಕ್ಕಳ ಭವಿಷ್ಯ ರೂಪಿಸಲು ಶಿಕ್ಷಣ ನೀಡಿದ್ದ ಕೆಲ ಸರ್ಕಾರಿ ಶಾಲೆಗಳು ಇದೀಗ ಅವಸಾನದ ಅಂಚಿಗೆ ದೂಡಲ್ಪಟ್ಟಿದ್ದು; ಹೆಂಚು ಹೊದಿಸಿ ಜೀರ್ಣೋದ್ಧಾರ ಕೈಗೊಳ್ಳಬೇಕು ಎಂಬ ಬೇಡಿಕೆ ತಾಲ್ಲೂಕಿನ ವಿವಿಧೆಡೆ ವ್ಯಕ್ತವಾಗಿದೆ.

ತಾಲ್ಲೂಕಿನ ಹರನಾಳ, ಹಿಟ್ನಳ್ಳಿ ಗ್ರಾಮದ ಸರ್ಕಾರಿ ಶಾಲೆಗಳು ದುಃಸ್ಥಿತಿಗೆ ಒಳಗಾಗಿದ್ದು, ಹೆಂಚುಗಳಿಗಾಗಿ ಕಾದಿವೆ. ಹೆಂಚು ಹೊಂದಿರುವ ಶಾಲೆಯ ಅವಸಾನ ಶಿಕ್ಷಣ ಪ್ರೇಮಿಗಳಲ್ಲಿ, ಆಯಾ ಶಾಲೆಗಳಲ್ಲಿ ಕಲಿತವರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈ ಎರಡೂ ಶಾಲೆಗಳ ಮೇಲ್ಛಾವಣಿ ಹೆಂಚುಗಳಿಲ್ಲದೇ ಹಾಳಾಗುತ್ತಿದೆ. ಶಾಲೆಯ ಕಟ್ಟಡ ಸುಸ್ಥಿತಿಯಲ್ಲಿದ್ದು ಮೇಲೆ ಹೆಂಚು ಹೊದಿಕೆಯಾದರೆ ಸಾಕು, ತಮ್ಮ ಹಿಂದಿನ ವೈಭವವನ್ನು ಮರಳಿ ಪಡೆಯುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ ಹರನಾಳ ಗ್ರಾಮದ ಶಾಲೆಯ ಹಳೆ ವಿದ್ಯಾರ್ಥಿ, ಪ್ರಗತಿಪರ ರೈತ ಶಂಕರಗೌಡ ಕೋಟಿಖಾನಿ.

‘ಶಾಲೆಯೊಟ್ಟಿಗೆ ಅವಿನಾಭಾವ ಸಂಬಂಧವಿದೆ. ರಾಷ್ಟ್ರೀಯ ವಿಸ್ತರಣಾ ಯೋಜನೆಯಡಿ ನಿರ್ಮಾಣವಾಗಿ, 29/12/1957ರಂದು ಬಂಥನಾಳದ ಸಂಗನಬಸವ ಶಿವಯೋಗಿಗಳಿಂದ ಉದ್ಘಾಟನೆಗೊಂಡಿತ್ತು. ಶಾಲಾ ಕಟ್ಟಡಕ್ಕೆ ಗ್ರಾಮದ ತೀರ್ಥಪ್ಪ ಪಾಯಪ್ಪ ಪಾಟೀಲ ಕುಟುಂಬದವರು 1.08 ಎಕರೆ ಜಮೀನು, ₹ 2501 ನಗದು ದೇಣಿಗೆ ನೀಡಿ ನಿರ್ಮಿಸಿದ್ದಾರೆ.

ADVERTISEMENT

ಈ ಶಾಲೆಯೊಂದಿಗೆ ಅಳಿಸಲಾಗದ ನನ್ನ ಬಾಲ್ಯದ ನೆನಪುಗಳಿವೆ. ಶಾಲೆಯನ್ನು ಬೀಳಿಸಿ ಪುನಃ ಕಟ್ಟಿಸಬಹುದು. ಆದರೆ ಸಿಮೆಂಟ್ ಮೇಲ್ಛಾವಣೆ ಹೊಂದಿದ ಹೊಸ ಶಾಲೆ ಮೊದಲಿನ ಶಾಲೆಯ ನೈಜತೆ ತಂದು ಕೊಡಲಾರದು. ಈ ಕುರಿತಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ ನಾನು ಹಲ ಬಾರಿ ಮನವಿ ಮಾಡಿದ್ದೇನೆ. ನನ್ನ ಶಾಲೆಗೆ ಹೆಂಚು ಹಾಕಿ ಉಳಿಸಿಕೊಡಿ ಎಂದು ಗೋಗರೆದರೂ ಪ್ರಯೋಜನವಿಲ್ಲದಾಗಿದೆ’ ಎಂದು ಶಂಕರಗೌಡ ಹೇಳಿದರು.

‘ಈ ಶಾಲೆಗಳ ಹಿಂದೆ ನಮ್ಮೆಲ್ಲರ ಭಾವನಾತ್ಮಕ ನಂಟಿದೆ. ಆದ್ದರಿಂದ ತಮ್ಮೂರಿನ ಶಾಲೆಗಳನ್ನು ಈ ಮೊದಲಿನಂತೆ ಉಳಿಸಿಕೊಡಿ’ ಎಂಬುದು ಹರನಾಳ ಗ್ರಾಮದ ಶರಣಗೌಡ ಹದನೂರ, ರಾಜು ಸಾರವಾಡ, ಸಿದ್ಧನಗೌಡ ಕರದಾಳ, ರಾಮನಗೌಡ ಭೈರವಾಡಗಿ, ರೇವಣಸಿದ್ದಯ್ಯ ಹಿರೇಮಠ, ಸಿದ್ಧನಗೌಡ ಗೋಗಿ, ಗುರಣ್ಣ ಏವೂರ, ಹಿಟ್ನಳ್ಳಿ ಗ್ರಾಮದ ರಮೇಶ ಕುಂಬಾರ, ಸಂಜೀವ ಹೊಸಮನಿ, ಬಸವರಾಜ ಮಾದರ, ಚಾಂದಪಟೇಲ್ ಬಿರಾದಾರ, ಸಾಹೇಬಗೌಡ ಇಂಗಳಗಿ ಅವರ ಒತ್ತಾಸೆ.

ಶಾಲಾ ಕಟ್ಟಡದ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಪರಿಶೀಲಿಸಿದ ಬಳಿಕ, ಆಯಾ ಗ್ರಾಮಸ್ಥರ ಬೇಡಿಕೆಯಂತೆ ಹೆಂಚು ಹಾಕಲು ಪ್ರಸ್ತಾವನೆ ಸಲ್ಲಿಸಿ, ಕ್ರಮ ತೆಗೆದುಕೊಳ್ಳುವೆ
- ಆರೀಫ್ ಬಿರಾದಾರ, ಬಿಇಒ, ಸಿಂದಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.