ADVERTISEMENT

ಶಾಸಕರೇ, ನೀವು ಉದ್ಯಮಿಗಳೇ?: ಬಿ.ಎಂ. ಕೊಕರೆ

ಭಾರತೀಯ ಕಿಸಾನ್‌ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಂ.ಕೊಕರೆ ತರಾಟೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 4:53 IST
Last Updated 30 ಅಕ್ಟೋಬರ್ 2025, 4:53 IST
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಬುಧವಾರ ಭಾರತೀಯ ಕಿಸಾನ್‌ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಂ. ಕೊಕರೆ ಪಾಲ್ಗೊಂಡು ಮಾತನಾಡಿದರು 
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಬುಧವಾರ ಭಾರತೀಯ ಕಿಸಾನ್‌ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಂ. ಕೊಕರೆ ಪಾಲ್ಗೊಂಡು ಮಾತನಾಡಿದರು    

ವಿಜಯಪುರ: ‘ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದನ್ನು ಬಿಟ್ಟು ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಿ ಲಾಭ ಗಳಿಕೆಯ ಬಗ್ಗೆ ಜಿಲ್ಲೆಯ ರಾಜಕಾರಣಿಗಳು ಯೋಚನೆ ಮಾಡಿರುವುದು ಖಂಡನೀಯ, ಇವರೇನು ರಾಜಕಾರಣಿಗಳಾ ಅಥವಾ ಉದ್ಯೋಗಪತಿಗಳಾ’ ಎಂದು ಭಾರತೀಯ ಕಿಸಾನ್‌ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಂ. ಕೊಕರೆ ತರಾಟೆಗೆ ತೆಗೆದುಕೊಂಡರು.

ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಬುಧವಾರ ಪಾಲ್ಗೊಂಡು, ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು.

‘ಜಿಲ್ಲೆಯ ಜನ ಎಚ್ಚೆತ್ತು ಕೊಂಡಿದ್ದಾರೆ, ನಿಮ್ಮ ಆಟ ನಡೆಯಲ್ಲ. ನಮ್ಮ ಜಿಲ್ಲೆಗೆ ಯಾಕೆ ಸರ್ಕಾರಿ ವೈದ್ಯಕೀಯ ಕಾಲೇಜು ಬೇಡ ಎಂಬುದನ್ನು ಸರ್ಕಾರ ಸ್ಪಷ್ಟ ಪಡಿಸಲಿ, ನೀವು ಕೂಡಲೇ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಿದರೆ ಒಳ್ಳೆಯದು, ನಿಮ್ಮ ಜನ ವಿರೋಧಿ ನೀತಿಯನ್ನು ಕೈಬಿಡಬೇಕು. ಒಂದು ವೇಳೆ ಮೊಂಡುತನ ಮುಂದುವರಿದರೆ ಸರ್ಕಾರದ ವಿರುದ್ಧ ಬೃಹತ್ ಆಂದೋಲನ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಭಾರತೀಯ ಕಿಸಾನ್ ಸಂಘದ ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷ ಮಲ್ಲನಗೌಡ ಪಾಟೀಲ ಮಾತನಾಡಿ, ‘ಸರ್ಕಾರ ಮದ್ಯ ಮಾರಾಟದ ಬಗ್ಗೆ ಇಲಾಖೆಗಳಿಗೆ ಗುರಿ ನಿಗದಿ ಮಾಡಿದೆ. ಬಡವರಿಗೆ ಅನುಕೂಲವಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಮಾರಾಟ ಮಾಡಿಕೊಂಡು ಜಿಲ್ಲೆಯ ಜನತೆಯ ಕಣ್ಣಲ್ಲಿ ಮಣ್ಣು ಹಾಕುವ ಹುನ್ನಾರ ನಡೆಸಿದೆ. ನಾವು ಕಣ್ಣು ಮುಚ್ಚಿ ಕುಳಿತಿಲ್ಲ; ನಾವು ಎದ್ದರೆ ಯಾವ ಸರ್ಕಾರವು ಉಳಿಯಲ್ಲ’ ಎಂದು ಎಚ್ಚರಿಕೆ ನೀಡಿದರು.

ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರುನಾಥ ಬಗಲಿ ಮಾತನಾಡಿ, ‘ನಿಮಗೆ ಸರ್ಕಾರ ನಡೆಸಲು ಬರದಿದ್ದರೆ ಮನೆಗೆ ಹೋಗಿ, ಎಲ್ಲವೂ ಖಾಸಗಿಯವರಿಗೆ ಮಾರಾಟ ಮಾಡಿ ರಾಜ್ಯದ ಜನತೆಯನ್ನು ಬಂಡವಾಳ ಶಾಹಿಗಳಿಗೆ ಒಪ್ಪಿಸಿಬಿಡಿ. ನಮ್ಮ ಮತ ಖರೀದಿಸಿ ರಾಜಕಾರಣ ಮಾಡುತ್ತಿದ್ದೀರಿ. ಮುಂಬರುವ ಚುನಾವಣೆಯಲ್ಲಿ ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ’ ಎಂದರು.

ಆಲ್ ಇಂಡಿಯಾ ರಾಹುಲ್ ಗಾಂಧಿ ಬ್ರಿಗೇಡ್ ಉಪಾಧ್ಯಕ್ಷ ಬಾಬಾಸಾಹೇಬ ಹತ್ತರಿಕಿಹಾಳ ಹಾಗೂ ಪದಾಧಿಕಾರಿಗಳು 42ನೇ ದಿನದ ಹೋರಾಟವನ್ನು ಬೆಂಬಲಿಸಿದರು.

ಪ್ರಮುಖರಾದ ರುಕ್ಮಿಣಿ ಹೆಗಡೆ, ಸಂಗೀತಾ ಘಟಗೆ, ಎಂ.ಸಿ. ಹೊಸೂರ, ಖಾಸರ್ ಬಾಗವಾನ್, ಕಮಲಾ ಚಲವಾದಿ, ನೀಲಮ್ಮ ಕೊರ್ತಿ, ಚಂದ್ರಶೇಖರ ಕೊರ್ತಿ, ನಾಗೇ ಪೂಜಾರಿ, ಐ.ಟಿ. ಪಡಗನೂರ, ಮುಮ್ತಾಜ್ ಮಕಂದಾರ, ಅನುಜ್‌ ಗಣಿಯಾರ, ಹಾವೀದಾ ಗಡ್ಡಿ, ಮೆಹಬೂಬ ಗಡ್ಡಿ, ಮಕ್ತುಂಬಿ ಮನಗೂಳಿ, ಬಸಮ್ಮ ರೆಡ್ಡಿ, ಹಜರತ್ ಮಕಂದಾರ, ಜನತಾ ನದಾಫ್, ದವಲ್ ಮುಲ್ಲಾ, ಹುಸೇನ್‌ಸಾಬ್ ಮುಲ್ಲಾ, ಪ್ರಶಾಂತ್ ದಾಂಡೇಕರ, ನಿಹಾಜ್ ನದಾಫ್, ವೈಭವ ಚವ್ಹಾಣ, ಗುರುನಾಥ ಬಗಲಿ, ಗೋವಿಂದ ಯಳವಾರ, ರವೀಂದ್ರನಾಥ ಮೆಂಡಗಾರ, ವಿ.ಆರ್. ಏಳಗಿ, ವಿ.ಜಿ. ಬಿದರಿ, ಕೆ.ಆರ್. ಸುಂಕದ, ಸಂಗು ಹುಣಸಗಿ, ಬಸಪ್ಪ ಚೌಧರಿ, ರೇಣುಕಾ ಪಾಟೀಲ, ನಾನಾಗೌಡ ಬೋರಾವತ, ಸೋಮಶೇಖರ್ ಪಾಟೀಲ, ಮಹಾಂತೇಶ ಬಾಗೇವಾಡಿ, ಬಸವರಾಜ ದಡ್ಡಿ, ರಫೀಕ್ ಮುಲ್ಲಾ, ಬಂದೇನವಾಜ್ ರಗಟಿ, ಎಂ.ಎಂ. ಕಲಕಿ, ಎಸ್.ಎಂ. ಬಿರಾದಾರ, ಅರುಣ್ ತೇರದಾಳ, ಭೀಮಣ್ಣ ಕುಂಬಾರ, ಪರಮಾನಂದ ಕುಂಬಾರ, ಪೂಜಾ ಜಿಮಿವಾಲೇ, ಅವಿನಾಶ್ ಐಹೊಳೆ ಹಾಗೂ ಹೋರಾಟ ಸಮಿತಿಯ ಸದಸ್ಯರು ಇದ್ದರು.

ರಾಜ್ಯ ಸರ್ಕಾರ ಜಿಲ್ಲಾಸ್ಪತ್ರೆಯನ್ನು ಖಾಸಗಿಯವರಿಗೆ ಪರಭಾರೆ ಮಾಡಲು ಮುಂದಾಗಿರುವುದು ನೋವಿನ ಸಂಗತಿ. ರಾಜಕಾರಣಿಗಳು ಸರ್ಕಾರವನ್ನು ಸಹಿತ ಪಿಪಿಪಿ ಮಾದರಿಯಲ್ಲಿ ನಡೆಸಲಿ
ಬಿ.ಎಂ. ಕೊಕರೆ ಅಧ್ಯಕ್ಷ ಭಾರತೀಯ ಕಿಸಾನ್‌ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.