ದೇವರಹಿಪ್ಪರಗಿ: ತಾಲ್ಲೂಕು ಕೇಂದ್ರವಾದ ದೇವರಹಿಪ್ಪರಗಿ ಪಟ್ಟಣದಲ್ಲಿ ಸರ್ಕಾರಿ ಕಚೇರಿ, ಕಾಲೇಜುಗಳು ಬಾಡಿಗೆ ಕಟ್ಟಡಗಳಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಒಂದಷ್ಟು ಇಲಾಖೆಗಳಿಗೆ ಇರುವ ಸ್ವಂತ ಕಟ್ಟಡಗಳೂ ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ.
ತಹಶೀಲ್ದಾರ್ ಕಾರ್ಯಾಲಯ, ತಾಲ್ಲೂಕು ಪಂಚಾಯಿತಿ, ಉಪಖಜಾನೆ ಮಾತ್ರ ಅಧಿಕೃತವಾಗಿ ಕಾರ್ಯಾರಂಭಗೊಂಡಿವೆ. ಇನ್ನೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ನ್ಯಾಯಾಲಯ ಸಂಕೀರ್ಣ ಸೇರಿದಂತೆ ಹಲವು ಇಲಾಖೆಗಳು ಆರಂಭಗೊಳ್ಳಬೇಕಿವೆ. ಆದರೆ, ಮುಂಚಿತವಾಗಿ ಈಗಿರುವ ಸರ್ಕಾರಿ ಕಚೇರಿ, ಕಾಲೇಜುಗಳು ಸ್ವಂತ ಕಟ್ಟಡ ಹೊಂದುವುದು ಅಗತ್ಯವಾಗಿದೆ.
ಕಳೆದ ಏಳು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ತಹಶೀಲ್ದಾರ್ ಕಾರ್ಯಾಲಯ 2018ರಲ್ಲಿ ನಾಡ ಕಚೇರಿ ಕಟ್ಟಡದಲ್ಲಿ ಅಧಿಕೃತವಾಗಿ ಆರಂಭಗೊಂಡಿತು. 2019ರಲ್ಲಿ ಪಟ್ಟಣ ಪಂಚಾಯಿತಿ ಸಭಾಭವನಕ್ಕೆ ಸ್ಥಳಾಂತರಗೊಂಡಿತು. ಈಗ ಇಲ್ಲಿ ತಹಶೀಲ್ದಾರ್, ಉಪತಹಶೀಲ್ದಾರ್ ಸೇರಿದಂತೆ ಅಗತ್ಯ ಸಿಬ್ಬಂದಿಯಿದೆ. ಆದರೆ, ಸಭೆ ಹಾಗೂ ಆಡಳಿತಕ್ಕೆ ಅಗತ್ಯವಾದ ಮೂಲ ಸೌಲಭ್ಯಗಳಿಂದ ಕೂಡಿದ ವಿಶಾಲ ಕಟ್ಟಡದ ಸಮಸ್ಯೆ ಎದುರಿಸುತ್ತಿದೆ. ಇನ್ನೂ ತಾಲ್ಲೂಕು ಪಂಚಾಯಿತಿ ಕಾರ್ಯಾಲಯವು ಸಹ ಪಟ್ಟಣದ ಬಸ್ ನಿಲ್ದಾಣದಿಂದ 1 ಕಿ.ಮೀ. ದೂರದಲ್ಲಿದೆ. ಇದು ಸಹ ಹಳೆಯ ಪ್ರವಾಸಿ ಮಂದಿರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದಕ್ಕೂ ನೂತನ ಕಟ್ಟಡಕ್ಕೆ ಅಗತ್ಯವಾದ ನಿವೇಶನ ನಿಗದಿಪಡಿಸಿಲ್ಲ. ಇನ್ನೂ ಕಟ್ಟಡ ಭಾಗ್ಯ ಯಾವಾಗ? ಎನ್ನುವಂತಾಗಿದೆ.
ಸೂಕ್ತ ಜಾಗ ಹಾಗೂ ಕಟ್ಟಡ ಸಮಸ್ಯೆ ಪಟ್ಟಣದ ಎಲ್ಲ ಸರ್ಕಾರಿ ಕಚೇರಿಗಳದ್ದಾಗಿದೆ. ಸರ್ಕಾರಿ ಪ್ರಥಮ ಕಾಲೇಜು ಹಾಗೂ ಸರ್ಕಾರಿ ಐಟಿಐ, ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಗಳು ಸಹ ಹೊರತಾಗಿಲ್ಲ. 2013ರಲ್ಲಿ ಸರ್ಕಾರದ ಅಧಿಸೂಚನೆಯ ಮೂಲಕ 2014-15ನೇ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಳೀಯ ಬಿ.ಎಲ್.ಡಿ.ಇ ಸಂಸ್ಥೆಯ ಕಟ್ಟಡದಲ್ಲಿ ಆರಂಭಗೊಂಡು ಈಗ ಶಾಸಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿದೆ. ಪ್ರಾಚಾರ್ಯ, ಬೋಧಕ, ಬೋಧಕೇತರ ಸಿಬ್ಬಂದಿ ಹೊಂದಿದ ಕಾಲೇಜಿನಲ್ಲಿ ಬಿ.ಎ, ಬಿ.ಕಾಂ. ಬಿ.ಎಸ್ಸಿ, ಬಿಬಿಎ ವಿಷಯಗಳ ಕಲಿಕೆಗೆ ಅವಕಾಶವಿದ್ದರೂ ಸ್ವಂತ ಕಟ್ಟಡದ ಕೊರತೆಯಿಂದ ಕೇವಲ ಬಿ.ಎ, ಬಿ.ಕಾಂ ವಿಷಯಗಳನ್ನು ಬೋಧಿಸಲಾಗುತ್ತಿದೆ. ಕಳೆದ ವರ್ಷದಿಂದ ನೂತನ ಕಟ್ಟಡ ಆರಂಭಗೊಂಡಿದೆ. ಸೇವೆಗೆ ಎಂದು ಲಭ್ಯವಾಗುತ್ತದೆ ಕಾದು ನೋಡುವಂತಾಗಿದೆ ಎನ್ನುತ್ತಾರೆ ಕಾಲೇಜು ಪ್ರಾಚಾರ್ಯ ಅಶೋಕ ಹೆಗಡೆ.
ಸರ್ಕಾರಿ ಐಟಿಐ ಸಹ 2014ರಲ್ಲಿ ಸರ್ಕಾರಿ ಶಾಸಕರ ಮಾದರಿ ಶಾಲೆಯಲ್ಲಿ ಆರಂಭಗೊಂಡು ಈಗ ಪಟ್ಟಣದಿಂದ 2 ಕಿ.ಮೀ ದೂರದ ಬಾಡಿಗೆ ಕಟ್ಟಡದಲ್ಲಿ ಮಾಸಿಕ ₹78 ಸಾವಿರ ಬಾಡಿಗೆಯಡಿ ಕಾರ್ಯನಿರ್ವಹಿಸುತ್ತಿದೆ. ಇದರ ಕಟ್ಟಡ ಕಾರ್ಯ ಆರಂಭಗೊಂಡಿದ್ದು, ಪೂರ್ಣಗೊಂಡು ಸೇವೆಗೆ ಲಭ್ಯತೆಯಾಗುವವರೆಗೆ ಬಾಡಿಗೆ ಕಟ್ಟಡವೇ ಅನಿವಾರ್ಯವಾಗಿದೆ ಎನ್ನುತ್ತಾರೆ ಪ್ರಾಚಾರ್ಯೆ ಎಸ್.ಜಿ.ಮಲ್ಲಾಡಕರ್.
ಬಾಡಿಗೆ ಕಟ್ಟಡದಲ್ಲಿ ಆರಂಭಗೊಂಡಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಈಗ ಪಿಯುಸಿಯಿಂದ ಪದವಿ ಹಂತದವರೆಗೆ ಕಲಿಯುತ್ತಿರುವ ವಿದ್ಯಾರ್ಥಿನಿಯರು ವ್ಯಾಸಂಗ ನಿರತರಾಗಿದ್ದಾರೆ. ಇದರ ಕಟ್ಟಡ ಕಾರ್ಯ ಭರದಿಂದ ಸಾಗಿದ್ದು, ಕೆಲವು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಇನ್ನೂ ಉಪಖಜಾನೆ ಕಾರ್ಯಲಯವು 2020ರಲ್ಲಿ ಆರಂಭಗೊಂಡು ₹19 ಸಾವಿರ ಮಾಸಿಕ ಬಾಡಿಗೆಯಡಿ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ ಇದಕ್ಕೆ ಸ್ವಂತ ಕಟ್ಟಡ ಭಾಗ್ಯ ಎಂದು ಬರುವುದೋ? ಎನ್ನುತ್ತಾರೆ ಮುಖ್ಯ ಲೆಕ್ಕಾಧಿಕಾರಿ ರಮೇಶ ವಾಲೀಕಾರ.
ಪಟ್ಟಣ ಪಂಚಾಯಿತಿಗೆ ನೂತನ ಕಟ್ಟಡ ಭಾಗ್ಯ ದೊರೆತಿದ್ದು, ಈಗಷ್ಟೇ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ತಾಲ್ಲೂಕು ಕೇಂದ್ರವಾಗಿರುವ ಪಟ್ಟಣದಲ್ಲಿ ಪ್ರಜಾಸೌಧ, ಕೋರ್ಟ್ ಸಂಕೀರ್ಣಗಳು ಸೇರಿದಂತೆ ಪ್ರಮುಖ ಸರ್ಕಾರಿ ಕಚೇರಿಗಳನ್ನು ಯಾವ ಸ್ಥಳದಲ್ಲಿ ನಿರ್ಮಿಸಿದರೇ ಸಾರ್ವಜನಿಕರಿಗೆ ಹೆಚ್ಚು ಸಹಕಾರಿಯಾಗಬಲ್ಲದು ಎಂಬುದನ್ನು ಅರಿತು ಬೇಗ ನಿರ್ಮಿಸುವಂತಾಗಲಿ ಎಂದು ಆಶಾಭಾವ ವ್ಯಕ್ತಪಡಿಸುತ್ತಾರೆ ಅಪ್ಪು ಕೋರಿ, ನಜೀರ್ ಕಲಕೇರಿ, ಬಾಬು ಮೆಟಗಾರ ಹಾಗೂ ರಾವುತ ಅಗಸರ.
ಪಟ್ಟಣದಲ್ಲಿ ನ್ಯಾಯಾಲಯ ಕಟ್ಟಡಗಳಿಗೆ ಜಾಗ ನಿಗದಿಪಡಿಸಲಾಗಿದೆ. ಇನ್ನೂ ಬಜೆಟ್‌ನಲ್ಲಿ ಪ್ರಜಾಸೌಧ ನಿರ್ಮಾಣದ ಘೋಷಣೆಯಾಗಿದ್ದು ಕಟ್ಟಡ ಕಾರ್ಯ ಶೀಘ್ರ ಆರಂಭಗೊಳ್ಳಲಿದೆ.-ಪ್ರಕಾಶ ಸಿಂದಗಿ , ತಹಶೀಲ್ದಾರ್ ದೇವರಹಿಪ್ಪರಗಿ
ಸರ್ಕಾರಿ ಕಚೇರಿಗಳ ಕಟ್ಟಡಗಳಿಗಾಗಿ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಕೇವಲ ಜಾಗೆಗಳ ನಿರ್ಧಾರ ಮಾಡುವಲ್ಲಿ ಕಾಲಹರಣ ಮಾಡುವಂತಾಗಬಾರದು.ಡಾ. ಆರ್.ಆರ್.ನಾಯಿಕ, ವೈದ್ಯರು
ತಾಲ್ಲೂಕು ಕೇಂದ್ರದಲ್ಲಿ ಅಗತ್ಯವಾದ ಎಲ್ಲ ಇಲಾಖೆಗಳ ಕಚೇರಿ ಆರಂಭಕ್ಕೆ ಎಲ್ಲರ ಸಹಕಾರ ಅಗತ್ಯ. ಈ ದೃಷ್ಟಿಯಿಂದ ಶಾಸಕರು ತಾಲ್ಲೂಕು ಆಡಳಿತ ಸ್ಥಳೀಯ ಆಡಳಿತದೊಂದಿಗೆ ಪ್ರತಿಯೊಬ್ಬರು ಕೈ ಜೋಡಿಸೋಣ.ಕಾಶೀನಾಥ ಸಾಲಕ್ಕಿ, ಸ್ಥಳೀಯ ಉದ್ಯಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.