ADVERTISEMENT

ಶಿಥಿಲಾವಸ್ಥೆಗೆ ತಲುಪಿದ ಸರ್ಕಾರಿ ಶಾಲೆ

ಮೂಲಸೌಕರ್ಯ ಕಲ್ಪಿಸಲು ಶಿಕ್ಷಣ ಇಲಾಖೆ ನಿರ್ಲಕ್ಷ್ಯ

ಎಂ.ಮುನಿನಾರಾಯಣ
Published 8 ಡಿಸೆಂಬರ್ 2021, 21:52 IST
Last Updated 8 ಡಿಸೆಂಬರ್ 2021, 21:52 IST

ವಿಜಯಪುರ:ಜನಪ್ರತಿನಿಧಿಗಳು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಅಗತ್ಯ ಸೌಕರ್ಯ ಒದಗಿಸುವಲ್ಲಿ ವಿಫಲರಾಗಿರುವ ಕಾರಣ ಬಹುತೇಕ ಸರ್ಕಾರಿ ಶಾಲೆಯ ಕಟ್ಟಡಗಳು ಶಿಥಿಲಾವಸ್ಥೆ ತಲುಪಿವೆ. ಇದಕ್ಕೆ ಪಟ್ಟಣದ ಗುರಪ್ಪನಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ನಿದರ್ಶನವಾಗಿದೆ.

ಈ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೂ 245 ಮಕ್ಕಳು ದಾಖಲಾಗಿದ್ದಾರೆ. ಆದರೆ, ಇಲ್ಲಿ ವ್ಯಾಸಂಗ ಮಾಡುತ್ತಿರುವ ಬಡಮಕ್ಕಳಿಗೆ ಅಗತ್ಯವಾಗಿರುವ ಮೂಲಸೌಕರ್ಯ ಒದಗಿಸಿಕೊಡುವಲ್ಲಿ ಸ್ಥಳೀಯ ಆಡಳಿತ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಇದರ ಪರಿಣಾಮ ವಿದ್ಯಾರ್ಥಿಗಳು ಪ್ರಾಣಭಯದಲ್ಲಿ ವಿದ್ಯೆ ಕಲಿಯಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ.

ಒಂದು ಕಟ್ಟಡದಲ್ಲಿ 8 ಕೊಠಡಿಗಳಿವೆ. 4 ಕೊಠಡಿಗಳು ಶೀಟ್‌ನಿಂದ ಕೂಡಿವೆ. ಉಳಿದ ನಾಲ್ಕು ಕೊಠಡಿಗಳ ಗೋಡೆ ಬಿರುಕು ಬಿಟ್ಟಿವೆ. ಮಳೆ ಬಂದರೆ ಸೋರುತ್ತಿವೆ. ಕಿಟಕಿ, ಬಾಗಿಲುಗಳು ಕಿತ್ತು ಹೋಗಿವೆ. ಅನೇಕ ಬಾರಿಗೆ ಹಾವುಗಳು ಕೊಠಡಿಗಳ ಒಳಗೆ ನುಗ್ಗಿವೆ. ವಿದ್ಯಾರ್ಥಿಗಳಿಗೆ ಸೂಕ್ತ ಶೌಚಾಲಯಗಳಿಲ್ಲ. ನೀರಿನ ಸಂಪರ್ಕವೂ ಇಲ್ಲ. ಆಟವಾಡಲು ಮೈದಾನವಿಲ್ಲ. ಇರುವ ಸಣ್ಣ ಜಾಗದಲ್ಲಿ ಕ್ರೀಡೆ ಹೊರತುಪಡಿಸಿ ಮಕ್ಕಳಿಗೆ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು, ಮ್ಯೂಸಿಕಲ್ ಚೇರ್, ಕುಂಟೆ ಬಿಲ್ಲೆಯಂತಹ ಆಟ ಮಾತ್ರ ಆಡಿಸಲಾಗುತ್ತಿದೆ.

ADVERTISEMENT

ಹೆಚ್ಚು ಮಕ್ಕಳಿದ್ದರೂ ಒಬ್ಬ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಿಕೊಟ್ಟಿಲ್ಲ. ಮತ್ತೊಂದು ಕಟ್ಟಡದಲ್ಲಿನ ಕೊಠಡಿಗಳು ಸುಸಜ್ಜಿತವಾಗಿದ್ದರೂ ಪಕ್ಕದಲ್ಲಿರುವ ಮಾಂಸ ಮಾರಾಟದ ಮಳಿಗೆಯಿಂದ ಬರುವ ದುರ್ವಾಸನೆಯಿಂದ ಕಿಟಕಿ ತೆರೆದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರತಿನಿತ್ಯ ಬಾಗಿಲು ತೆರೆಯುತ್ತಿದ್ದಂತೆ ಕಾಣಸಿಗುವ ಮೂಳೆ, ಮದ್ಯಪಾನ ಮಾಡಿ ಒಡೆದು ಹಾಕಿರುವ ಖಾಲಿ ಬಾಟಲಿ ಆರಿಸಿಕೊಂಡು ಹೊರಗಡೆ ಹಾಕಿದ ನಂತರ ಶಾಲಾ ಕೊಠಡಿಗಳ ಬಾಗಿಲು ತೆರೆಯಬೇಕಾದಂತಹ ಪರಿಸ್ಥಿತಿಯಿದೆ. ಇಲ್ಲಿ ಮಾಂಸ ಖರೀದಿಗಾಗಿ ಬರುವಂತಹ ಗ್ರಾಹಕರ ಗದ್ದಲ ಹಾಗೂ ಮಾಂಸ ಕತ್ತರಿಸುವ ಶಬ್ದದಿಂದಾಗಿ ಮಕ್ಕಳು ಸರಿಯಾಗಿ ಪಾಠ ಕೇಳಲೂ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂಬುದು ಪೋಷಕರ ಒತ್ತಾಯ.

ಶಿಕ್ಷಕರಿಗೂ ಶೌಚಾಲಯವಿಲ್ಲ

ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಪೈಕಿ ಬಹುತೇಕ ಮಹಿಳೆಯರಿದ್ದಾರೆ. ಇಲ್ಲಿನ ಶಿಕ್ಷಕರಿಗೂ ವ್ಯವಸ್ಥಿತವಾದ ಶೌಚಾಲಯವಿಲ್ಲ. ಮಕ್ಕಳಿಗಾಗಿ ಇರುವ ಶೌಚಾಲಯಕ್ಕೆ ಹೋಗಲು ದಾರಿಯಿಲ್ಲದಂತಾಗಿದೆ. ಶೌಚಾಲಯಗಳಿಂದ ಬರುವ ದುರ್ವಾಸನೆಯಿಂದಾಗಿ ಕೊಠಡಿಗಳಲ್ಲಿ ಪಾಠ ಕೇಳಲು ಆಗುವುದಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಳ್ಳುತ್ತಾರೆ.

‘ಈ ಶಾಲೆಯ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಲು ಶಂಕುಸ್ಥಾಪನೆಯನ್ನೂ ಮಾಡಲಾಗಿತ್ತು. ಆದರೆ, ಕೆಲವು ರಾಜಕಾರಣಿಗಳ ಕುತಂತ್ರದಿಂದ ಹೊಸ ಕಟ್ಟಡದ ಕನಸು ನನಸಾಗಿಲ್ಲ’ ಎನ್ನುತ್ತಾರೆ ಪೋಷಕ ಮಂಜುನಾಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.