ಪ್ರಾತಿನಿಧಿಕ ಚಿತ್ರ
ವಿಜಯಪುರ: ವಿಜಯಪುರದಲ್ಲಿ ಪಿಪಿಪಿ ಮಾದರಿಯಲ್ಲೇ ವೈದ್ಯಕೀಯ ಕಾಲೇಜು ಆರಂಭಿಸುವುದಾಗಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹೇಳಿರುವುದು ಜಿಲ್ಲಾ ಜನತೆಯ ವಿರೋಧಿ ನಿಲುವಾಗಿದೆ ಎಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ ತೀವ್ರವಾಗಿ ಖಂಡಿಸಿದೆ.
ಸರ್ಕಾರ ಕನಕಪುರ, ಬಾಗಲಕೋಟೆಗಳಿಗೆ ಸಂಪೂರ್ಣ ಸರ್ಕಾರಿ ಕಾಲೇಜು ಆರಂಭಿಸಿ, ವಿಜಯಪುರಕ್ಕೆ ಮಾತ್ರ ಪಿಪಿಪಿ ಮಾದರಿಯಲ್ಲಿ ಅನುಷ್ಠಾನ ಮಾಡುತ್ತಿರುವುದು ಯಾವ ನ್ಯಾಯ? ಇದು ವಿಜಯಪುರಕ್ಕೆ ರಾಜ್ಯ ಸರ್ಕಾರ ಮಾಡಿದ ಮಲತಾಯಿ ಧೋರಣೆಯಾಗಿದೆ ಎಂದು ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
ಸರ್ಕಾರದ ಈ ಕ್ರಮವು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚಿದಂತಾಗುತ್ತದೆ. ಕಾಲೇಜು ಆರಂಭಿಸಲು ಕನಿಷ್ಠ ಜಾಗವೂ ಇಲ್ಲದ ಕನಕಪುರದಂತಹ ಕ್ಷೇತ್ರಗಳಿಗೆ ಭೂಮಿ ಖರೀದಿಗೆಂದೆ ₹85 ಕೋಟಿ ಅನುದಾನ ನೀಡುವ ಸರ್ಕಾರ ಇಲ್ಲಿ 148 ಎಕರೆ ಜಮೀನು ಮತ್ತು ಇನೀತರ ಅವಶ್ಯಕ ಎಲ್ಲಾ ಮೂಲ ಸೌಲಭ್ಯವಿದ್ದರೂ ಯಾಕೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡುತ್ತಿಲ್ಲ? ಎಂದು ಪ್ರಶ್ನಿಸಿದೆ.
ಜಿಲ್ಲೆಯ ಜನಪ್ರತಿನಿಧಿಗಳ ನಿಷ್ಕ್ರೀಯತೆ ಮತ್ತು ಸರ್ಕಾರ ಇಚ್ಛಾಶಕ್ತಿಯ ಕೊರತೆಯೇ ಈ ದುರಂತ ಸನ್ನಿವೇಶಕ್ಕೆ ಮುಖ್ಯ ಕಾರಣವಾಗಿದೆ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಗನುಗುಣವಾಗಿ ನಾವು ಮಾಡುತ್ತಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆಯಾದರೂ ಇದೂ ಕೂಡಾ ಸತ್ಯಕ್ಕೆ ದೂರವಾದ ಮಾತು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರಕ್ಕೆ ತನ್ನದೇ ಆದ ಹಕ್ಕು ಮತ್ತು ಸ್ವಾಯತ್ತತೆ ಇದ್ದೇ ಇರುತ್ತದೆ. ರಾಜ್ಯ ಸರ್ಕಾರ ತನ್ನ ಸ್ವಾಯತ್ತತೆ ಬಳಸಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಮತ್ತು ಕೇಂದ್ರ ಸರ್ಕಾರದ ಜನ ವಿರೋಧಿ ಮಾರ್ಗ ಸೂಚಿಯನ್ನೇ ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ಹೋರಾಟ ಸಮಿತಿಯು ಆಗ್ರಹಿಸಿದೆ.
ಸರ್ಕಾರ ಖಾಸಗಿ ವ್ಯಕ್ತಿಗಳ ಮುಂದೆ ಮಂಡಿಯೂರುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ಜಿಲ್ಲೆಯ ಜನರ ಹಲವಾರು ವರ್ಷಗಳ ಬೇಡಿಕೆಯಾಗುಳಿದಿಲ್ಲ; ಬದಲಾಗಿ ಅದು ಈಗ ಜಿಲ್ಲೆಯ ಜನರ ಭಾವನೆಯಾಗಿ ಪರಿವರ್ತನೆಗೊಂಡಿದೆ. ಇದನ್ನು ಇಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಅಲ್ಲೇ ಇದ್ದ ಜಿಲ್ಲೆಯ ಜನಪ್ರತಿನಿಧಿಗಳು ಸಚಿವರು ಮನವಿ ಮಾಡಬೇಕಿತ್ತು, ಒತ್ತಡ ಹೇರಬೇಕಿತ್ತು. ಆದರೆ, ಇವರು ಅಸಹಾಯಕರಂತೆ ನಿಂತಿದ್ದು ದೊಡ್ಡ ದುರಂತವಾಗಿದೆ ಎಂದು ಸಮಿತಿ ಹೇಳಿದೆ.
ಜಿಲ್ಲೆಯ ಎಲ್ಲಾ ಜನರು ಖಾಸಗಿ ಸಹಭಾಗಿತ್ವ ಖಂಡಿಸಿ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವಂತೆ ಈ ಹಿಂದೆಂದಿಗಿಂತಲೂ ಗಟ್ಟಿಯಾಗಿ ಹೋರಾಟದ ದ್ವನಿಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾಗಿದೆ. ಜನ ಹೋರಾಟಕ್ಕೆ ಸರ್ಕಾರಗಳು ಬದಲಾಗಿವೆ. ಗದ್ದುಗೆಗಳೇ ಉರುಳಿಹೋಗಿವೆ ಅಂತಹುದರಲ್ಲಿ ಈ ಸರ್ಕಾರಿ ಕಾಲೇಜು ಪಡೆಯುವುದು ಯಾವ ಲೆಕ್ಕ? ಆದುದರಿಂದ ಜಿಲ್ಲೆಯ ಜನತೆ ನಿಷ್ಪಕ್ಷಪಾತವಾಗಿ, ಎಲ್ಲ ಬೇಧಭಾವಗಳನ್ನು ಮರೆತು, ಪಕ್ಷಾತೀತವಾಗಿ ಜಿಲ್ಲೆಯ ಏಳ್ಗೆಗಾಗಿ ಸೊಂಟ ಕಟ್ಟಿ ಬೀದಿಗಿಳಿದಾಗ ಮಾತ್ರ ಈ ಬೇಡಿಕೆ ಇಡೇರಲು ಸಾದ್ಯವಿದೆ ಎಂದು ಆಶಾಬಾವ ವ್ಯಕ್ತಪಡಿಸಿದೆ.
ಸರ್ಕಾರಿ ಕಾಲೇಜು ಸ್ಥಾಪಿಸುವುದು ಈಗ ಸರ್ಕಾರದ ಕೈಯಲ್ಲಿ ಇಲ್ಲ; ಅದು ಜಿಲ್ಲೆಯ ಜನತೆಯ ಕೈಯಲ್ಲಿ ಇದೆ. ಜನ ಒಂದಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭವಾಗುವವರೆಗೆ ಬಲಷ್ಠ ಜನ ಹೋರಾಟ ಕಟ್ಟಲು ಜಿಲ್ಲೆಯ ಜನತೆ ಮುಂದೆ ಬರಬೇಕೆಂದು ಸಮಿತಿ ಮನವಿ ಮಾಡಿದೆ.
ಹೋರಾಟದ ಭಾಗವಾಗಿ ಸೆ. 9 ರಂದು ಬೆಳಿಗ್ಗೆ 11ಕ್ಕೆ ಶ್ರೀಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾಗುವ ಹೋರಾಟದಲ್ಲಿ ಜಿಲ್ಲೆಯ ಜನತೆ ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೋರಾಟ ಸಮಿತಿಯೂ ಮನವಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.