ಟ್ರ್ಯಾಕರ್, ಜಿಪಿಎಸ್ ಅಳವಡಿಸಿದ್ದ ರಣಹದ್ದು
ವಿಜಯಪುರ: ಜಿಲ್ಲೆಯ ಚಡಚಣ ತಾಲ್ಲೂಕಿನ ಗೋಟ್ಯಾಳ ಗ್ರಾಮದ ತೋಟದಲ್ಲಿ ಗುರುತಿನ ಸಂಖ್ಯೆ, ಟ್ರ್ಯಾಕರ್, ಜಿಪಿಎಸ್ ಅಳವಡಿಸಿದ್ದ ರಣಹದ್ದು ಶುಕ್ರವಾರ ಕಾಣಿಸಿಕೊಂಡಿತು.
ರಣಹದ್ದು ಕಂಡ ಸ್ಥಳೀಯರು 112ಕ್ಕೆ ಕರೆ ಮಾಡಿ, ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ, ರಣಹದ್ದನ್ನು ಝಳಕಿ ಪೊಲೀಸ್ ಠಾಣೆಗೆ ಕೊಂಡೊಯ್ದರು. ಅರಣ್ಯ ಅಧಿಕಾರಿಗಳು ಠಾಣೆಗೆ ಭೇಟಿ ನೀಡಿ, ರಣಹದ್ದನ್ನು ಪರಿಶೀಲಿಸಿದರು.
‘ಮಹಾರಾಷ್ಟ್ರದ ನಾಗಪುರ ಸಮೀಪದ ಮೇಲಘಾಟ್ ಪ್ರದೇಶದಿಂದ ಈ ರಣಹದ್ದು ಬಂದಿದ್ದು, ಅಲ್ಲಿನ ಅರಣ್ಯ ಇಲಾಖೆಯು ರಣಹದ್ದುಗಳ ಜೀವನ ಶೈಲಿ, ಸಂಚಾರ ಮಾರ್ಗ ಹಾಗೂ ಇತರೆ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಜಿಪಿಎಸ್ ಮತ್ತು ಟ್ರ್ಯಾಕರ್ ಅಳವಡಿಸಿದೆ. ಜಿಪಿಎಸ್ ಮತ್ತು ಟ್ರ್ಯಾಕರ್ ಭಾರದಿಂದ ಬಸವಳಿದಿದ್ದ ರಣಹದ್ದು, ಹಾರದೆ ಕುಳಿತಿತ್ತು’ ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದರು.
‘ಅದರ ಆರೋಗ್ಯ ಸ್ಥಿತಿ ಮೇಲೆ ನಿಗಾ ವಹಿಸಿ, ಸಂಪೂರ್ಣ ಚೇತರಿಸಿಕೊಂಡ ಬಳಿಕ ಹಾರಿ ಬಿಡುವ ಕುರಿತು ಮಹಾರಾಷ್ಟ್ರದ ಅರಣ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಅವರ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.
ರಣಹದ್ದನ್ನು ಸುಪರ್ದಿಗೆ ಪಡೆದ ಅರಣ್ಯಾಧಿಕಾರಿಗಳು, ಜೇವೂರ ಸಾಮಾಜಿಕ ಅರಣ್ಯ ವಲಯ ಕೇಂದ್ರದಲ್ಲಿ ಉಪಚಾರ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.