ADVERTISEMENT

ವಿಜಯಪುರ: ಮಹಲ್‌ನಲ್ಲೊಂದು ‘ಮನಮೋಹಕ’ ಸ್ಮಾರಕ

ಸುಂದರವಾದ ಜಾಲಾಂಧ್ರ, ಬೃಹತ್ ಸಜ್ಜಾದಲ್ಲಿ ಸೂಕ್ಷ್ಮ ಕೆತ್ತನೆಯ ವಾಸ್ತುಶಿಲ್ಪ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 4:51 IST
Last Updated 1 ಡಿಸೆಂಬರ್ 2025, 4:51 IST
ವಿಜಯಪುರ ಸಮೀಪದ ಮಹಲ್ ಗ್ರಾಮದಲ್ಲಿರುವ ಸ್ಮಾರಕದ ವಿಹಂಗಮ ನೋಟ 
ವಿಜಯಪುರ ಸಮೀಪದ ಮಹಲ್ ಗ್ರಾಮದಲ್ಲಿರುವ ಸ್ಮಾರಕದ ವಿಹಂಗಮ ನೋಟ    

ವಿಜಯಪುರ: ನಗರದಿಂದ ಐದು ಕಿ.ಮೀ. ದೂರದಲ್ಲಿರುವ ಮಹಲ್ ಗ್ರಾಮದಲ್ಲಿ ಮನಮೋಹಕ ‘ಗುಬ್ಬಿ ಮಹಲ್’ ಎಂಬ ಪ್ರಾಚೀನ ಸ್ಮಾರಕ ಪ್ರವಾಸಿಗರಿಗೆ ಅಪರಿಚಿತವಾಗಿ ಉಳಿದಿದೆ.  

ಮಹಲ್ ಗ್ರಾಮದ ಮಲೀಕ್ ಜಹಾನ್ ಬೇಗಂ ಅರಮನೆಯ ಸಮೀಪದಲ್ಲೇ ಇರುವ ಈ ಸ್ಮಾರಕವು ತನ್ನ ಸೌಂದರ್ಯದಲ್ಲಿ ವಿಶಿಷ್ಟವಾಗಿದೆ. ಗ್ರಾಮದ ಕಿರಿದಾದ ರಸ್ತೆಗಳಲ್ಲಿ ಸಾಗಿದಾಗ ಖಾಸಗಿ ಹೊಲದ ಪಕ್ಕದಲ್ಲಿ ಎದುರಾಗುವ ಈ ಕಟ್ಟಡವು ನೋಡಿದವರನ್ನು ಮಂತ್ರಮುಗ್ಧಗೊಳಿಸುತ್ತದೆ.

ನೋಡಲು ವಿಜಯಪುರದ ಗಗನ್ ಮಹಲ್ ಅಥವಾ ಸಂಗೀತ ಮಹಲ್ ಶೈಲಿಯನ್ನೇ ಹೋಲುತ್ತದೆ. ಕಟ್ಟಡದಲ್ಲಿರುವ ಸುಂದರವಾದ ಜಾಲಾಂಧ್ರಗಳು ಮತ್ತು ಬೃಹತ್ ಸಜ್ಜಾದಲ್ಲಿನ ಸೂಕ್ಷ್ಮ ಕೆತ್ತನೆಯ ವಾಸ್ತುಶಿಲ್ಪವು ಗಮನ ಸೆಳೆಯುತ್ತದೆ. ಒಳಗಿರುವ ವಿಶಾಲ ಕೋಣೆಗಳನ್ನು ಗಮನಿಸಿದರೆ ಇದನ್ನು ಒಂದು ಕಾಲದಲ್ಲಿ ಅಧಿಕಾರಿಗಳ ವಿಶ್ರಾಂತಿ ತಾಣ ಅಥವಾ ಖಾಸಗಿ ಅರಮನೆಯಾಗಿ ಬಳಸಲಾಗಿತ್ತು ಎಂದು ಹೇಳಲಾಗುತ್ತದೆ.

ADVERTISEMENT

ಕಟ್ಟಡದ ಮೇಲ್ಭಾಗದಲ್ಲಿ ಪರ್ಷಿಯನ್ ಭಾಷೆಯ ಶಾಸನವಿದ್ದರೂ ಈ ಸ್ಮಾರಕಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಾಮಫಲಕ ಸಹ ಒದಗಿಸಿಲ್ಲ.

ನಿರ್ಲಕ್ಷ್ಯ:

ಪುರಾತತ್ವ ಇಲಾಖೆಯು ಈ ಸ್ಮಾರಕದ ಸಂರಕ್ಷಣೆಯ ಪ್ರಯತ್ನ ಮಾಡಿದರೂ ಕಟ್ಟಡಕ್ಕೆ ಕಾಯಂ ಬೀಗ ಹಾಕಲಾಗಿದೆ. ಇದರಿಂದಾಗಿ ಪ್ರವಾಸಿಗರಿಗೆ ಈ ಸುಂದರ ಸ್ಮಾರಕವನ್ನು ಪ್ರವೇಶಿಸುವ ಭಾಗ್ಯ ಇಲ್ಲದಂತಾಗಿದೆ. ಉದ್ಯಾನದ ಅಭಿವೃದ್ಧಿಯಂತೂ ದೂರದ ಮಾತಾಗಿದೆ.

ಸಂರಕ್ಷಣೆ ಇಲ್ಲದ ಕಾರಣ ಸ್ಮಾರಕವು ದುಃಸ್ಥಿತಿಯಲ್ಲಿದೆ. ಕಟ್ಟಡದ ದೊಡ್ಡ ಗೋಡೆಗಳು ಬೃಹತ್ ಸಜ್ಜಾಕ್ಕೆ ಸಂಪರ್ಕ ಕಡಿದುಕೊಂಡ ಪರಿಣಾಮ ವಾಲುತ್ತಿವೆ. ಇಂದೋ, ನಾಳೆಯೋ ಬೀಳುವ ಹಂತದಲ್ಲಿರುವ ಈ ಸ್ಮಾರಕಕ್ಕೆ ತುರ್ತಾಗಿ ಸಂರಕ್ಷಣೆ ಒದಗಿಸುವುದು ಅಗತ್ಯವಾಗಿದೆ.

ಸರಿಯಾದ ರೀತಿ ಸಂರಕ್ಷಿಸಿ  ಪ್ರವಾಸಿಗರಿಗೆ ಮುಕ್ತ ಪ್ರವೇಶ ನೀಡಿದರೆ, ಈ ಅನಾಮಧೇಯ ಸ್ಮಾರಕವು ವಿಜಯಪುರದ ಪ್ರವಾಸಿ ಆಕರ್ಷಣೆಗಳ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗೊಂಡು ಪ್ರವಾಸಿಗರನ್ನು ಸೆಳೆಯಬಲ್ಲದು.

‘ವಿಜಯಪುರದಲ್ಲಿ ಈ ರೀತಿಯ ಅನೇಕ ಸ್ಮಾರಕಗಳಿವೆ, ಅವುಗಳನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಿದರೆ ಇಟಲಿ, ರೋಮ್ ಗಿಂತಲೂ ವಿಜಯಪುರ ಪ್ರವಾಸಿ ತಾಣವಾಗಿ ಮಿಂಚಬಹುದು’ ಎನ್ನುತ್ತಾರೆ ಇತಿಹಾಸ ಸಂಶೋಧಕ ಅಬ್ದುಲ್ ಅಜೀಜ್ ರಜಪೂತ.

ಸ್ಮಾರಕದಲ್ಲಿರುವ ಪರ್ಷಿಯನ್ ಭಾಷೆಯ ಶಾಸನದಿಂದ ಈ ಕಟ್ಟಡ ಅಬ್ದುಲ್ ಘಾಜಿ ಎಂಬುವವರು ವಾಸ್ತುಶಿಲ್ಪ ರೂಪಸಿರುವ ಬಗ್ಗೆ ಕುರುಹುಗಳಿವೆ ಈ ಬಗ್ಗೆ ಇನ್ನೂ ಅಧ್ಯಯನ ನಡೆಯಬೇಕಿದೆ.
ಅಬ್ದುಲ್ ಅಜೀಜ್, ರಜಪೂತ ಇತಿಹಾಸ ಸಂಶೋಧಕ
ಸ್ಮಾರಕ ಉಳಿಸಲು ಡಿಪಿಆರ್ ತಯಾರಿಸಿ ವರ್ಷದ ಹಿಂದೆಯೇ ಕಳುಹಿಸಲಾಗಿದೆ. ಇದೇ ವರ್ಷ ಅದರ ಪುನರುಜ್ಜೀವನ ಕಾರ್ಯ ಕೈಗೊಳ್ಳಬೇಕಾಗಿತ್ತು. ಆದರೆ ಕೆಲವು ಸಮಸ್ಯೆಗಳಿಂದ ಆಗಿಲ್ಲ.ಶೀಘ್ರ ಪುನರುಜ್ಜೀವನ ಕಾರ್ಯಕೈಗೊಳ್ಳಲಾಗುವುದು 
ವಿಜಯಕುಮಾರ, ಹಿರಿಯ ಸಂರಕ್ಷಣಾಧಿಕಾರಿ ಎಎಸ್ಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.