ADVERTISEMENT

ರಾಜ್ಯ ಸರ್ಕಾರದ ವೈಫಲ್ಯಗಳ ಪಟ್ಟಿಗೆ ಅಂತ್ಯವೇ ಇಲ್ಲ: ಗುರುಲಿಂಗಪ್ಪ ಅಂಗಡಿ ಕಿಡಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 5:44 IST
Last Updated 26 ಫೆಬ್ರುವರಿ 2026, 5:44 IST
ಗುರುಲಿಂಗಪ್ಪ ಅಂಗಡಿ
ಗುರುಲಿಂಗಪ್ಪ ಅಂಗಡಿ   

ವಿಜಯಪುರ: ‘ಗ್ಯಾರಂಟಿ ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ಮುಂದೂಡುತ್ತಿದೆ. ರಾಜ್ಯ ಸರ್ಕಾರದ ವೈಫಲ್ಯಗಳ ಪಟ್ಟಿ ಮಾಡುತ್ತ ಹೋದರೆ ಅದಕ್ಕೆ ಅಂತ್ಯವೇ ಇಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ವಾಗ್ದಾಳಿ ನಡೆಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘40 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ ಎಂಬ ಸುಳ್ಳು ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನೀಡಿದ್ದಾರೆ. 8 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದೆ ಎಂದು ಸರ್ಕಾರ ಅಧಿವೇಶನದಲ್ಲಿ ಲಿಖಿತ ಹೇಳಿಕೆ ನೀಡಿದೆ. ಈ ರೀತಿ ಸುಳ್ಳು ಹೇಳಿ ಮುಖ್ಯಮಂತ್ರಿ ವಿದ್ಯಾರ್ಥಿ-ಯುವಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅತ್ತ ಆರೋಗ್ಯ ವ್ಯವಸ್ಥೆ ಅನಾರೋಗ್ಯಕ್ಕೀಡಾಗಿದೆ. ಜೀವನಾವಶ್ಯಕ ಔಷಧಗಳು ನಿಯಮಿತವಾಗಿ ಪೂರೈಕೆಯಾಗುತ್ತಿಲ್ಲ’ ಎಂದರು.

‘ಶಿರಹಟ್ಟಿ ಶಾಸಕರ ಮೇಲಿನ ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ, ಭ್ರಷ್ಟಾಚಾರ ಯಾರು ಮಾಡಿದರೂ ತಪ್ಪು, ಭ್ರಷ್ಟಾಚಾರವನ್ನು ನಾವು ಸಮರ್ಥಿಸಿಕೊಳ್ಳುವುದಿಲ್ಲ. ಆದರೆ ವಾಲ್ಮೀಕಿ ಹಗರಣದಲ್ಲಿ ಹಣ ದುರುಪಯೋಗ ಆಗಿರುವ ಬಗ್ಗೆ ಸ್ವತಃ ಮುಖ್ಯಮಂತ್ರಿಯೇ ಒಪ್ಪಿಕೊಂಡಿದ್ದಾರೆ. ಈ ಲಂಚಾವತಾರಕ್ಕೆ ತಂದೆ-ತಾಯಿಯೇ ಕಾಂಗ್ರೆಸ್’ ಎಂದರು.

ADVERTISEMENT

‘ಗುತ್ತಿಗೆದಾರರಿಗೆ ಬಿಲ್ ಪಾವತಿಸಬೇಕು. ಅವರು ಸಂಕಷ್ಟಮಯ ಸ್ಥಿತಿಯಲ್ಲಿದ್ದಾರೆ, ಅವರು ಅನಿವಾರ್ಯವಾಗಿ ಕೆಲಸ ಸ್ಥಗಿತಗೊಳಿಸಿದರೆ ಕುಡಿಯುವ ನೀರು ಹಾಗೂ ಮೂಲ ಸೌಲಭ್ಯಗಳ ಹಾಹಾಕಾರ ಉಂಟಾಗಲಿದೆ. ಪರಿಸ್ಥಿತಿ ಗಂಭೀರ ಹಂತಕ್ಕೆ ತಲುಪುವ ಮೊದಲೇ ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಬಿಲ್ ಪಾವತಿಸಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡ ರವಿ ಬಿರಾದಾರ, ಮಾಧ್ಯಮ ಪ್ರಮುಖ ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

‘ಯುವಕರನ್ನು ಕುಡುಕರನ್ನಾಗಿ ಮಾಡುತ್ತಿರುವ ಕಾಂಗ್ರೆಸ್’

ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸುರೇಶ ಬಿರಾದಾರ ಮಾತನಾಡಿ ‘ರಾಹುಲ್ ಗಾಂಧಿ ಯುವಜನತೆ ಬಗ್ಗೆ ದೊಡ್ಡ ದೊಡ್ಡ ಮಾತು ಹೇಳುತ್ತಾರೆ. ಆದರೆ ಅವರದ್ದೇ ಸರ್ಕಾರವಿರುವ ನಮ್ಮ ರಾಜ್ಯದಲ್ಲಿ ಯುವಕರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿಲ್ಲ. ಕೇವಲ ಪ್ರಧಾನಿ ಮೋದಿ ಅವರನ್ನು ಟೀಕೆ ಮಾಡುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಆಡಳಿತ ಯಂತ್ರವಂತೂ ಸಂಪೂರ್ಣ ಕುಸಿದಿದ್ದು ಕಮಿಷನ್ ದಂಧೆ ಅವ್ಯಾಹತವಾಗಿದೆ’ ಎಂದರು.

‘ರಾಜ್ಯ ಸರ್ಕಾರ ಹಳ್ಳಿ ಹಳ್ಳಿಗಳಲ್ಲಿ ಲಿಕ್ಕರ್ ಪರವಾನಗಿ ಕೊಡಲು ಮುಂದಾಗಿದ್ದು ಅಲ್ಲಿಯೂ ದೊಡ್ಡ ಭ್ರಷ್ಟಾಚಾರ ನಡೆದಿದೆ. ಇದರಿಂದಾಗಿ ಹಳ್ಳಿಗಳಲ್ಲಿ ಮದ್ಯದ ಹಾವಳಿ ಅಧಿಕವಾಗಿದೆ. ಗ್ರಾಮೀಣ ಸಂಸ್ಕೃತಿಯನ್ನೇ ಹಾಳು ಮಾಡಿ ಯುವಕರನ್ನು ಕುಡುಕರನ್ನಾಗಿ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಮುಂದಾಗಿ ಅವರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.