ADVERTISEMENT

ಹಡಪದ ಅಪ್ಪಣ್ಣ ಜನ್ಮಭೂಮಿ ಅಭಿವೃದ್ಧಿಗೆ ₹50 ಲಕ್ಷ ಅನುದಾನ: ಸಚಿವ ಪಾಟೀಲ‌ ಭರವಸೆ

ಶಿವಶರಣ ಹಡಪದ ಅಪ್ಪಣ್ಣ ಅವರ 891ನೇ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 3:19 IST
Last Updated 10 ಆಗಸ್ಟ್ 2025, 3:19 IST
ಬಸವನಬಾಗೇವಾಡಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಅವರ 891ನೇ ಜಯಂತ್ಯುತ್ಸವ ಸಮಾರಂಭವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು. ಶಾಸಕ ರಾಜುಗೌಡ ಪಾಟೀಲ, ಮಾಜಿ‌ ಸಚಿವ ಎಸ್.ಕೆ. ಬೆಳ್ಳುಬ್ಬಿ ಹಾಜರಿದ್ದರು
ಬಸವನಬಾಗೇವಾಡಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಅವರ 891ನೇ ಜಯಂತ್ಯುತ್ಸವ ಸಮಾರಂಭವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು. ಶಾಸಕ ರಾಜುಗೌಡ ಪಾಟೀಲ, ಮಾಜಿ‌ ಸಚಿವ ಎಸ್.ಕೆ. ಬೆಳ್ಳುಬ್ಬಿ ಹಾಜರಿದ್ದರು   

ಬಸವನಬಾಗೇವಾಡಿ: ‘ಶಿವಶರಣ ಹಡಪದ ಅಪ್ಪಣ್ಣ ಅವರ ಜನ್ಮಭೂಮಿ ಆದ ತಾಲ್ಲೂಕಿನ ಮಸಬಿನಾಳದ ಅವರ ಮನೆ ಹಾಗೂ ಸ್ಥಳಗಳ ಜೀರ್ಣೋದ್ಧಾರಕ್ಕೆ ₹50 ಲಕ್ಷ ಮತ್ತು ಪಟ್ಟಣದಲ್ಲಿರುವ ಹಡಪದ ಸಮಾಜದ ಜಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ₹25 ಲಕ್ಷ ಅನುದಾನ ಒದಗಿಸಲಾಗುವುದು’ ಎಂದು ಸಚಿವ ಶಿವಾನಂದ ಪಾಟೀಲ‌ ಹೇಳಿದರು.

ಪಟ್ಟಣದ ವಿರಕ್ತಮಠದ ಸಭಾಭವನದಲ್ಲಿ ತಾಲ್ಲೂಕು ಹಡಪದ ಅಪ್ಪಣ್ಣ ಸೇವಾ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಅವರ 891ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘12ನೇ ಶತಮಾನದಲ್ಲಿ ಜಾತಿ, ಕಾಯಕ‌ಗಳ ಮೇಲೆ ಮಾನವ ಶೋಷಣೆ ನಡೆಯುತ್ತಿದ್ದ ಸಂದಿಗ್ಧ ಪರಿಸ್ಥಿತಿಯಲ್ಲಿ ಜಾತಿ ಬಿಟ್ಟು ಜಾತ್ಯತೀತವಾಗಿ ಬದುಕು ಸಾಗಿಸಿದವರು ಬಸವಣ್ಣನವರು. ಹಡಪದ ಅಪ್ಪಣ್ಣ ಅವರನ್ನು ಆಪ್ತ‌ ಕಾರ್ಯದರ್ಶಿಯನ್ನಾಗಿ ಮಾಡಿಕೊಂಡು ಸಮಾಜದಲ್ಲಿ ಮೂಢನಂಬಿಕೆಗಳನ್ನು ಹೋಗಲಾಡಿಸಲು ಶ್ರಮಿಸಿದರು’ ಎಂದು ತಿಳಿಸಿದರು.

ADVERTISEMENT

ಮಾಜಿ‌ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ‘ಜಾತ್ಯತೀತ ಸಮಾಜಕ್ಕಾಗಿ ಹೋರಾಡಿದ ಮಹಾಪುರುಷರು, ಶರಣರನ್ನು ಇಂದು‌ ಸ್ವಾರ್ಥ ರಾಜಕಾರಣಕ್ಕಾಗಿ ಆಯಾ ಜಾತಿಗೆ ಸೀಮಿತಗೊಳಿಸಿ‌ರುವುದು ದುರಂತ. ಸಮಾಜಗಳ ಅಭಿವೃದ್ಧಿಗೆ ಅನೇಕ ನಿಗಮಗಳು, ಮಂಡಳಿಗಳು ಸ್ಥಾಪನೆಯಾದರೂ ಅನುದಾನವಿಲ್ಲದೇ ಉಪಯೋಗಕ್ಕೆ ಬರುತ್ತಿಲ್ಲ. ಹಡಪದ ಸಮಾಜದ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಶ್ರಮಿಸಬೇಕು’ ಎಂದು ಮನವಿ ಮಾಡಿದರು.

ತಂಗಡಗಿ ಹಡಪದ ಅಪ್ಪಣ್ಣ ಪೀಠಾಧ್ಯಕ್ಷ ಅನ್ನದಾನಿ ಭಾರತೀ ಹಡಪದ ಅಪ್ಪಣ್ಣ ಸ್ವಾಮೀಜಿ ಮಾತನಾಡಿ, ‘ಹಡಪದ ಸಮಾಜವು ಸವಿತಾ ಸಮಾಜದಲ್ಲಿ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪು ಭಾವಿಸಿದ್ದಾರೆ‌. ಸರ್ವಾಂಗಿಣ ಅಭಿವೃದ್ಧಿಗಾಗಿ ಹಡಪದ ಸಮಾಜವನ್ನು 2ಎ ಮೀಸಲಾತಿಯಡಿ ಸೇರಿಸಬೇಕು. ಬಸವಕಲ್ಯಾಣದ ಬಸವಣ್ಣನವರ ಅರಿವಿನ ಮನೆ ಪಕ್ಕದಲ್ಲಿ ಅಪ್ಪಣ್ಣನವರ ಗವಿ ಇದೆ. ಗವಿಗೆ ಅಳವಡಿಸಿದ್ದ ಫಲಕ ಯಾರೋ ತೆಗೆದಿದ್ದು ಅದನ್ನು ಅಳವಡಿಸಿ ಅಭಿವೃದ್ಧಿಪಡಿಸಲು ಹಾಗೂ ಮಸಬಿನಾಳ, ದೇಗಿನಾಳ ಅಪ್ಪಣ್ಣ  ಶರಣರ ಕ್ಷೇತ್ರಗಳ ಅಭಿವೃದ್ಧಿಗೆ ಸಚಿವರು ಮುಂದಾಗಬೇಕು’ ಎಂದು ಒತ್ತಾಯಿಸಿದರು.

ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಹಂಗರಗಿ ಚನ್ನಬಸವ ಪ್ರತಿಷ್ಠಾನದ ವಿವೇಕಾನಂದ ಕಲ್ಯಾಣಶೆಟ್ಟಿ ಮಾತನಾಡಿದರು. ಚಿಂತಕ ಎಂ.ಡಿ.ಬಳಗಾನೂರ ಉಪನ್ಯಾಸ ನೀಡಿದರು. ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 

ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

ಪ್ರಮುಖರಾದ ಎಚ್.ಡಿ.ವೈದ್ಯ, ಗುರುಲಿಂಗ ಹಡಪದ, ಮಹಾಂತೇಶ ಹಡಪದ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಉಪಾಧ್ಯಕ್ಷ ಅಶೋಕ ಹಾರಿವಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ನೀಲು ನಾಯಕ್, ಬಸವರಾಜ ಹಾರಿವಾಳ, ಸುಭಾಸ್ ಹಡಪದ, ಅಶೋಕ ಬಾಗೇವಾಡಿ, ನಾಗೇಶ ನಾಗೂರ, ಸಂಗಮೇಶ ನಾವಿ ಇದ್ದರು.

ಸಮಾಜದಲ್ಲಿ‌ ಸಾಮರಸ್ಯ ಅತೀ ಅವಶ್ಯ. ಹಡಪದ ಸಮಾಜದ‌ವರು ಪ್ರಸ್ತಾಪಿಸಿರುವ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ.
– ಶಿವಾನಂದ ಪಾಟೀಲ‌ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.